ಅಪಾಯದಿಂದ ಮಾಮ್ ಪಾರು ಭಾರತದ ಮಾಮ್ ಅಪಾಯದಿಂದ ಪಾರಾಗಿದೆ. ಮಾರ್ಸ್ ಆರ್ಬಿಟರ್ ಮಿಷನ್ ಹಾಗೂ... ನವದೆಹಲಿ: ಭಾರತದ ಮಾಮ್ ಅಪಾಯದಿಂದ ಪಾರಾಗಿದೆ. ಮಾರ್ಸ್ ಆರ್ಬಿಟರ್ ಮಿಷನ್ ಹಾಗೂ ಧೂಮಕೇತುವೊಂದರ ನಡುವೆ ಸಂಭವಿಸಬಹುದಾಗಿದ್ದ ಡಿಕ್ಕಿಯನ್ನು ಇಸ್ರೋ ವಿಜ್ಞಾನಿಗಳು ತಡೆದಿದ್ದಾರೆ. ಸರಿಯಾದ ಸಮಯಕ್ಕೆ ಮಾಮ್‌ನ ಪಥ ಬದಲಿಸಿದ ಕಾರಣ ಮಂಗಳಯಾನಕ್ಕೆ ಎದುರಾಗಬಹುದಾಗಿದ್ದ ಭಾರಿ ದೊಡ್ಡ ಕಂಟಕ ತಪ್ಪಿದೆ. ಸಣ್ಣ ಬೆಟ್ಟದಷ್ಟು ದೊಡ್ಡದಾದ ಧೂಮಕೇತುವೊಂದು ಭಾನುವಾರ ಮಧ್ಯಾಹ್ನ ಮಂಗಳ ಗ್ರಹವನ್ನು ಹಾದುಹೋಗಿದೆ. ಈ ಧೂಮಕೇತುವು ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುತ್ತಿರುವ ಭಾರತದ ಮಾರ್ಸ್ ಆರ್ಬಿಟರ್ ಮಿಷನ್(ಮಾಮ್)ಗೆ ಡಿಕ್ಕಿಯಾಗುವ ಅಪಾಯವಿದ್ದ ಹಿನ್ನೆಲೆಯಲ್ಲಿ, ಅದನ್ನು ತಪ್ಪಿಸಲು ಇಸ್ರೋ ವಿಜ್ಞಾನಿಗಳು ಮಾಮ್‌ನ ಪಥವನ್ನು ಬದಲಿಸಿದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದು, ಮಂಗಳಯಾನಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಇಸ್ರೋ ತಿಳಿಸಿದೆ. ಸೈಡಿಂಗ್ ಸ್ಟ್ರಿಂಗ್: ಕೆಂಪು ಗ್ರಹವನ್ನು ಹಾದುಹೋದ ಧೂಮಕೇತುವಿನ ಹೆಸರು ಸೈಡಿಂಗ್ ಸ್ಟ್ರಿಂಗ್, ಮಧ್ಯಾಹ್ನ 2.27ಕ್ಕೆ ಸರಿಯಾಗಿ ಗಂಟೆಗೆ 2.03 ಲಕ್ಷ ಕಿ.ಮೀ ವೇಗದಲ್ಲಿ ಸಾಗಿದ ಧೂಮಕೇತು ಮಂಗಳ ಗ್ರಹದಿಂದ 1,39,500 ಕಿ.ಮೀ ದೂರದಲ್ಲಿ ಹಾದುಹೋಯಿತು. ಭಾರತದ ಮಾಮ್ ಮಾತ್ರವಲ್ಲದೆ, ಮಂಗಳ ಗ್ರಹದ ಮೇಲ್ಮೈಯಲ್ಲಿರುವ ನಾಸಾದ ಉಪಗ್ರಹಗಳು ಮತ್ತು ರೊಬೋಟ್‌ಗಳು ಕೂಡ ಧೂಮಕೇತು ಸಾಗುತ್ತಿರುವ ಅಪರೂಪದ ದೃಶ್ಯವನ್ನು ಸೆರೆಹಿಡಿಯಲು ಉತ್ಸುಕವಾಗಿದ್ದವು. ಲಕ್ಷಾಂತರ ವರ್ಷಗಳಿಗೊಮ್ಮೆ ನಡೆಯುವ ಈ ವಿದ್ಯಮಾನಕ್ಕಾಗಿ ವಿಜ್ಞಾನಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದರು. ಏಕೆಂದರೆ, ಧೂಮಕೇತುವು ಕೆಂಪು ಗ್ರಹವನ್ನು ಹಾದು ಹೋಗಿದ್ದರಿಂದ ಗ್ರಹದ ವಾತಾವರಣದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಯಿತು ಎಂಬುದನ್ನು ಅಧ್ಯಯನ ನಡೆಸುವ ವಿಶೇಷ ಅವಕಾಶ ದೊರೆತಿದೆ ಎಂದಿದ್ದಾರೆ ವಿಜ್ಞಾನಿಗಳು. ಸೈಡಿಂಗ್ ಸ್ಟ್ರಿಂಗ್ ಹಾದುಹೋಗುತ್ತಿರುವ ಸೂಚನೆ ಸಿಗುತ್ತಿದ್ದಂತೆ ಮಾಮ್‌ನ ಪಥವನ್ನು ಸ್ವಲ್ಪಮಟ್ಟಿಗೆ ಬದಲಿಸಲಾಯಿತು. ಧೂಮ ಕೇತು ಸಾಗಿದ ಬಳಿಕವೂ ಮಾಮ್‌ನ ಸಿಸ್ಟಂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೇನೂ ಹಾನಿಯಾಗಿಲ್ಲ ಎಂದು ಇಸ್ರೋ ತಿಳಿಸಿದೆ. ಜತೆಗೆ, ನಾವು ಧೂಮಕೇತುವಿನ ಮೇಲೆ ವ್ಯವಸ್ಥಿತವಾಗಿ ನಿಗಾ ವಹಿಸಿದ್ದೆವು ಹಾಗೂ ಸದ್ಯದಲ್ಲೇ ಈ ಬಗೆಗಿನ ಮಾಹಿತಿ ಮತ್ತು ಪೋಟೋಗಳನ್ನು ಪಡೆಯಲ್ಲಿದ್ದೇವೆ ಎಂದೂ ತಿಳಿಸಿದೆ.