ಲೈಫ್ ಆಫ್ ಪೈ ಹಾಳೆಯ ಮೇಲೆ ಒಂದು ವೃತ್ತ ರಚಿಸಿದ ತಕ್ಷಣವೇ ಅದರೊಳಗೆ ಒಬ್ಬ ವಿದೂಷಕನ... ಹಾಳೆಯ ಮೇಲೆ ಒಂದು ವೃತ್ತ ರಚಿಸಿದ ತಕ್ಷಣವೇ ಅದರೊಳಗೆ ಒಬ್ಬ ವಿದೂಷಕನ ಅಟ್ಟಹಾಸ ಆರಂಭವಾಗುತ್ತದೆ. ಅಕ್ಷರಶಃ ಇವನೊಬ್ಬ ಮಾಯಾಕಾರ. ಈತನನ್ನು ಹನುಮನೆನ್ನುವುದೇ ಸೂಕ್ತ. ವೃತ್ತ ಕಿರಿಯರೋ ಹಿರಿಯರೋ ಇವನ ವಿರಾಟ್ ಸ್ವರೂಪ ಅಬಾಧಿತ. ಯಾರಿವನು ಎಂದಿರಾ? ಇವನೇ 'ಪೈ'! ಗಣಿತದ 'ಪೈ'. ವೃತ್ತದ ಪರಿಧಿಗೂ () ವ್ಯಾಸಕ್ಕೂ () ನಡುವಿನ ನಿಷ್ಪತ್ತಿ ಸೂಚಕ. ಭಾಗಲಬ್ಧ ಅನ್ನಿ. ಇತಿಹಾಸದುದ್ದಕ್ಕೂ ಗಣಿತ ವಿದ್ವಾಂಸರು ಅತ್ಯಂತ ಬೆರಗು, ಆಸಕ್ತಿಯಿಂದ ಪರಿಗಣಿಸುತ್ತಲೇ ಬಂದಿರುವ ಸ್ಥಿರಾಂಶವಿದು. 'ಪೈ' ಪ್ರಜ್ಞೆಯ ಪ್ರತೀಕ. ತನ್ನ ರಹಸ್ಯ ಬಿಟ್ಟುಕೊಡದೆ ಮಾನವನ ಮೆದುಳಿಗೆ ಸವಾಲಾಗಿ ಮೆರೆಯುತ್ತಿದೆ. ಕೇವಲ ಜ್ಯಾಮಿತಿ, ತ್ರಿಕೋನಮಿತಿ ಮಾತ್ರವಲ್ಲ ವಿಶ್ವವಿಜ್ಞಾನ, ಯಂತ್ರವಿಜ್ಞಾನ, ಸಂಖ್ಯಾ ಸಿದ್ಧಾಂತ, ಸಂಖ್ಯಾ ಶಾಸ್ತ್ರ... ಎಲ್ಲೆಡೆ ತಾಂಡವವಾಡುವ ಸರ್ವಾಂತರ್ಯಾಮಿ. ವಿಪರ್ಯಾಸವೆಂದರೆ ಶಾಲಾ ಕಾಲೇಜು ಮಟ್ಟದಲ್ಲೂ ಅಂದರ ಅಂದಾಜು ಬೆಲೆ 22/7 ಎಂದಷ್ಟೇ ಹೇಳಿ ಇತಿಶ್ರೀ ಹಾಡಲಾಗುತ್ತದೆ. 'ಪೈ' ಎರಡು ಪೂರ್ಣಾಂಕಗಳ ನಿಷ್ಪತ್ತಿಯಾಗಿ ನಿರೂಪಿಸಲಾಗದ ಸಂಖ್ಯೆ. ಅಂದರೆ ಅದು ಅಪರಿಮೇಯ ಸಂಖ್ಯೆ ( )ಅಲ್ಲದೆ ಅಂದು ಬೀಜಾತೀತ ಸಂಖ್ಯೆ ( ) ಕೂಡ. ಅರ್ಥಾತ್ ದಶಮಾಂಶ ಭಾಗದ ಅಂಕಗಳು ನಿರಂತರವಾಗಿ ಯಾವ ಶಿಸ್ತೂ ಇಲ್ಲದೆ ಧಾವಿಸುತ್ತವೆ; 3.141592653589793... ಸ್ವಾರಸ್ಯ ನೋಡಿ. ಮೊದಲ 31 ದಶಮಾಂಶ ಅಂಕಗಳಲ್ಲಿ ಸೊನ್ನೆ ಕಾಣಿಸುವುದೇ ಇಲ್ಲ! ಅಂಕನಲ್ಲಿ ಅಂಕಗಳು ಪುನಾವರ್ತನೆಯಾಗುವುದಿಲ್ಲ. 'ಪೈ' ಗ್ರೀಕ್ ವರ್ಣಮಾಲೆಯ ಹದಿನಾರನೇ ಅಕ್ಷರ. ಇಂಗ್ಲಿಷಿನಲ್ಲಿ 'ಪೈ' ಸಹ 16ನೇ ಅಕ್ಷರ. ಇದೊಂದು ಕಾಕತಾಳೀಯ. 'ಪೈ' ಬೆಲೆ ನಿರ್ದಿಷ್ಟವಾಗಿ ತಿಳಿಯದ ಕಾರಣ ವೃತ್ತದ ಪರಿಧಿ ಅಥವಾ ವಿಸ್ತೀರ್ಣವನ್ನು ಅಳೆಯಲಾಗದು. ಕ್ರಿ.ಪೂ. 2000ದ ವೇಳೆಗೆ ಬ್ಯಾಬಿಲೋನಿಯನ್ನರು 3.125 ಎಂದೂ, ಈಜಿಪ್ಟ್‌ನವರು 3.143 ಎಂಬ ಬೆಲೆಗಳನ್ನು ಪಡೆದರು. ಕ್ರಿ.ಪೂ. 2550- 2500ರ ನಡುವಿನ ಅವಧಿಯಲ್ಲಿ ನಿರ್ಮಿಸಲಾದ ಈಜಿಪ್ಟ್‌ನ ಗ್ರೇಟ್ ಪಿರಮಿಡ್‌ನ ತಳಭಾಗದ ಸುತ್ತಳತೆ 1760 ಮೊಳ. ಎತ್ತರ 280 ಮೊಳ. ಇವೆರಡರ ಭಾಗಲಬ್ಧ 'ಪೈ'ನ ಎರಡರಷ್ಟಾಗುವುದು ವಿಶೇಷ. ಕ್ರಿ.ಪೂ. 1650ರಲ್ಲಿ ಈಜಿಪ್ಟ್‌ನವರು 'ಪೈ' ಬೆಲೆಯನ್ನು 3.141592 ಎಂದು ತಾಳೆಗರಿಯೊಂದರಲ್ಲಿ ನಮೂದಿಸಿರುವುದೇ ಬಹುಶಃ ಅತ್ಯಂತ ಪ್ರಾಚೀನ ದಾಖಲೆ. ಗ್ರೀಕ್ ಗಣಿತ ಒಲಿದ ದೇಶ. ಪ್ಲೇಟೋ (ಕ್ರಿ.ಪೂ. 427-348). 2 ಮತ್ತು 2ರ ವರ್ಗಮೂಲಗಳನ್ನು ಕೂಡಿಸಿ 3.146 ಪಡೆದು ಅದನ್ನು 'ಪೈ'ಗೆ ಅಂದಾಜು ಬೆಲೆಯೊಂದು ಪರಿಗಣಿಸಿದರಾಯಿತು ಎಂದು ಸಾರಿದ್ದ. ಯುರೇಕಾ ಖ್ಯಾತಿಯ ಬಹುಪ್ರತಿಭಾಶಾಲಿ, ಅನ್ವೇಷಣೆಮಲ್ಲ ಅರ್ಕಿಮಿಡೀಸ್ (ಕ್ರಿ.ಪೂ. 287-212) 'ಪೈ' ಏನಿದ್ದರೂ 223/71 ಮತ್ತು 22/7ರ ನಡುವೆ ಮಾತ್ರವಿರಲು ಸಾಧ್ಯವೆಂದು ಸಮರ್ಥಿಸಿದ. ಆತನ ವಿಧಾನ ವಿಶಿಷ್ಟ. ವೃತ್ತವನ್ನು 96 ಬಾಹುಗಳ ಬಹುಭುಜಗಳನ್ನಾಗಿ ವಿಭಜಿಸಿ ತನ್ನ ಅಂದಾಜನ್ನು ಅತಿ ನಾಜೂಕಾಗಿ ಬಿಂಬಿಸಿದ್ದ. 0.00827ರಷ್ಟಕ್ಕೂ ಕಡಿಮೆ ಲೋಪವಿದ್ದಿದ್ದು ಅವನ ಬುದ್ಧಿಮತ್ತೆಯನ್ನು ಎತ್ತಿ ಹಿಡಿದಿತ್ತು. ಕ್ರಿ.ಶ. 5ನೇ ಶತಮಾನದಲ್ಲಿ ಆರ್ಯಭಟ 3.146 ಹಾಗೂ ಮಾಧವ (ಕ್ರಿ.ಶ. 1340-1425) 3.14159265358979323 ಹೀಗೆ ಹದಿನೇಳು ಅಂಕಗಳವರೆಗೆ ನಿಖರತೆ ಸಾಧಿಸಿದ್ದು ಸಾಮಾನ್ಯ ಸಂಗತಿಯಲ್ಲ. ಮಾಧವ ಕೇರಳ ರಾಜ್ಯದ ಸಂಗಮ ಗ್ರಾಮದ ಗಣಿತಪಟು. ಜರ್ಮನಿಯ ಗಣಿತಜ್ಞ ಲುಡಾಲ್ಫ್ ವಾನ್ ಸಿಲನ್ (ಕ್ರಿ.ಶ.1540-1610) ತನ್ನ ಬದುಕಿನ ಬಹುಭಾಗ 'ಪೈ'ನ ಮೊದಲ 36 ದಶಮಾಂಶ ಅಂಕಗಳನ್ನು ಲೆಕ್ಕ ಮಾಡುವುದರಲ್ಲೇ ಕಳೆದ. ಆ ಅಂಕಗಳನ್ನು ಅವನ ಗೋರಿಯ ಮೇಲೆ ಕೆತ್ತಲಾಯಿತು. ಇಂಗ್ಲೆಂಡಿನ ವಿಲಿಯಂ ಶೌಂಕ್ಸ್ (ಕ್ರಿ.ಶ. 1812-1882) ಎಂಬ ಹವ್ಯಾಸಿ ಗಣಿತಪಟು 'ಪೈ'ನ ಮೊದಲ 707 ದಶಮಾಂಶ ಅಂಕಗಳನ್ನು ಲೆಕ್ಕ ಹಾಕುತ್ತಲೇ ಹದಿನೈದು ವರ್ಷಗಳನ್ನು ವ್ಯಯಿಸಿದ. ದುರ್ದೈವದಿಂದ 527ನೇ ದಶಮಾಂಶ ಸ್ಥಾನದಲ್ಲಿ ತಪ್ಪೆಸಗಿದ. ಅವನ ಇಡೀ ಪರಿಶ್ರಮ ವ್ಯರ್ಥವಾಯಿತು! ಈ ಪರಾಭವ ಹೇಗೂ ಇರಲಿ. ತನ್ನ ಪ್ರಯತ್ನಕ್ಕೆ ಹದಿನಾರು ದಶಮಾಂಶ ಅಂಕಗಳವರೆಗೆ 'ಪೈ'ನ ಬೆಲೆ ಪಡೆದಿದ್ದ ಮಹಾನ್ ವಿಜ್ಞಾನಿ ಐಸಾಕ್ ನ್ಯೂಟನ್ (ಕ್ರಿ.ಶ. 1642-1727) ಸ್ಫೂರ್ತಿ ಎಂದು ನಮ್ರತೆ ಮರೆದಿದ್ದ. 'ಪೈ'ನ ದಶಮಾಂಶ ಸ್ಥಾನಗಳ ದಿಬ್ಬಣ ಭೇದಿಸುವುದೇ ಒಂದು ಘನತೆಯಾಯಿತು. ಗಣಿತಾಸಕ್ತರು, ಸಂಖ್ಯಾಪ್ರಿಯರು, ಅಭಿಮಾನಿಗಳು ಹಾಗಿರಲಿ ಮೇರು ಗಣಿತಜ್ಞರೂ 'ಪೈ'ನ ನಿಖರತೆ ಸಾಧಿಸಲು ಒಂದು ಕೈ ನೋಡಿಯೋ ಬಿಡೋಣ ಎಂದು ಹಾಳೆ, ಲೇಖನಿ ಹಿಡಿದು ಕೂತರು. ಎಷ್ಟಾದರೂ ವಾಂಛೆ ಯಾರನ್ನು ತಾನೆ ಬಿಟ್ಟೀತು ಹೇಳಿ. ಲೆಬ್ನಿಜ್, ಆಯ್ಲರ್, ರಾಮಾನುಜನ್, ಶ್ರೀಧರರಂಥ ಶ್ರೇಷ್ಠ ಗಣಿತಜ್ಞರು ತಮ್ಮದೇ ವಿಧಾನಗಳಿಂದ 'ಪೈ'ನ ಸರಪಳಿ ಲಂಬಿಸಲು ಮುಂದಾದರು. ಮನುಷ್ಯ ದಾಖಲೆ ಭಕ್ತನೂ ಹೌದು! ತಾನು ಇಂತಿಷ್ಟು ದಶಮಾಂಶ ಅಂಕಗಳವರೆಗೆ ನೆನಪಿನಲ್ಲಿಟ್ಟುಕೊಳ್ಳಬಲ್ಲೆ ಅಂತ ಬೀಗುವವರ ಪಡೆಗಳೇ ಹುಟ್ಟಿಕೊಂಡವು. 'ಪೈ' ನಿಖರತೆಯ ತರತಮದಲ್ಲೇ ಮುಳುಗಿ ಗಣಿತಾಧ್ಯಯನ, ಸಂಶೋಧನೆ ಮರೆಯಬೇಡಿರೋ ಅಂತ ಸಂಪ್ರದಾಯವಾದಿಗಳಿಂದ ತಾಕೀತಿಗೊಳಗಾದವರ ಪ್ರಸಂಗಗಳೂ ಉಂಟೆನ್ನಿ. ಅತ್ಯಾಧುನಿಕ ಗಣಕ ಯಂತ್ರಗಳು ವಿಜೃಂಭಿಸಿದ ಮೇಲೆ ಇನ್ನು ಕೇಳಬೇಕೆ? 'ಪೈ' ಒಂದು ಸೆಲೆಬ್ರಿಟಿಯಾಗಿ ಬಿಟ್ಟಿದೆ. ಅಂಕಿ ಅಂಶಗಳು ರೋಮಾಂಚಕವಾಗುತ್ತಿವೆ. 'ಪೈ'ನ ಶತಕೋಟಿ ದಶಮಾಂಶ ಅಂಕಗಳನ್ನು ನಮೂದಿಸಿದರೆ ಅನ್ನಿ... ಇದೇ ಗಾತ್ರದಲ್ಲಿ ಅಂಕಗಳ ಮೆರವಣಿಗೆಯ ಉದ್ದವೆಷ್ಟು ಗೊತ್ತೆ? ಕೇವಲ 2218 ಕಿಲೋಮೀಟರ್‌ಗಳು! 2002ರಲ್ಲಿ ಜಪಾನಿನ ವಿಜ್ಞಾನಿಯೊಬ್ಬರು ಸುಧಾರಿತ ಗಣಕಯಂತ್ರ ಬಳಸಿ 1.24 ಟ್ರಿಲಿಯನ್ (ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ) ಅಂಕಗಳವರೆಗೆ ಲೆಕ್ಕ ಹಾಕಿ ಹಿಂದಿನ ಎಲ್ಲಾ ದಾಖಲೆ ಮುರಿದಿದ್ದರು. ವಾಸ್ತವವೇನು ಗೊತ್ತೇ? ಪ್ರಾಯೋಗಿಕ ಉದ್ದಗಳೇನೇ ಇರಲಿ 'ಪೈ'ನ ನಿಖರತೆ 40 ದಶಮಾಂಶ ಸ್ಥಾನಗಳಿಗಿಂತ ಹೆಚ್ಚು ಅಗತ್ಯವೇ ಇಲ್ಲ. ಫ್ರಾನ್ಸ್‌ನ ಫರೈಸ್ ಬೆಲರ್ಡ್ ತನ್ನ ಡೆಸ್ಕ್ ಟ್ಯಾಪ್ ಗಣಕ ಯಂತ್ರ ಬಳಸಿ 2.7 ಟ್ರಿಲಿಯನ್ ದಶಮಾಂಶ ಅಂಕಗಳವರೆಗೆ 'ಪೈ' ಪಡೆದ. ಆತ 131 ದಿನಗಳನ್ನು ಇದಕ್ಕಾಗಿ ವ್ಯಯಿಸಬೇಕಾಯಿತು. ಇಲ್ಲೊಂದು ತಮಾಷೆ ಇಣುಕಿದೆ. 'ಪೈ'ನ ಬೆನ್ನೇರಿ ಹೊರಟು ಇವರೆಲ್ಲ ತಂತಮ್ಮ ಗಣಕ ಯಂತ್ರಗಳನ್ನು ಪರೀಕ್ಷಿಸುತ್ತಿದ್ದಾರೋ?! 5 ಟ್ರಿಲಿಯನ್ ಅಲ್ಲ... 10 ಟ್ರಿಲಿಯನ್‌ಗೂ ಮೀರಿ ದಶಮಾಂಶ ಅಂಕಗಳನ್ನು ಗಳಿಸಿ ಬೀಗುವ ಸನ್ನಾಹವೂ ನಡೆದಿದೆ. ವೃತ್ತಕ್ಕೆ ಅನಂತ ಮೂಲೆಗಳಿವೆ. ಪ್ರತಿವರ್ಷ ಮಾರ್ಚ್ 14ನೇ ದಿನಾಂಕವನ್ನು 'ಪೈ ದಿನ' ಎಂದು ಆಚರಿಸಲಾಗುತ್ತದೆ. ಮಾರ್ಚ್ ಮೂರನೇ ತಿಂಗಳು. ಇನ್ನು 14 ಎನ್ನುವುದು 'ಪೈ'ನ ಮೆರವಣಿಗೆಯ ಆರಂಭವನ್ನು (3.14...) ವನ್ನು ಸೂಚಿಸುತ್ತದೆ. ಮರೆಯದಿರೋಣ, ಇದು ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಜನ್ಮದಿನ ಕೂಡ! - ಬಿಂಡಿಗನವಿಲೆ ಭಗವಾನ್