ಅಮೇಝಿಂಗ್ ಅಮೆಜಾನ್ ಸುಮಾರು 2 ವರ್ಷಗಳ ಕಾಲ ಅಂತೆ-ಕಂತೆಗಳ ಸಂತೆಯಲ್ಲಿ ಹೊರಳಾಡುತ್ತಿದ್ದ ಅಮೇಜಾನ್ ಫೈರ್ ಫೋನ್ ಅಂತೂ... ಸುಮಾರು 2 ವರ್ಷಗಳ ಕಾಲ ಅಂತೆ-ಕಂತೆಗಳ ಸಂತೆಯಲ್ಲಿ ಹೊರಳಾಡುತ್ತಿದ್ದ ಅಮೇಜಾನ್ ಫೈರ್ ಫೋನ್ ಅಂತೂ ಮಾರುಕಟ್ಟೆಗೆ ಬಂದಿದೆ. ಈ ಫೋನ್‌ಗಳ ಬಗ್ಗೆ ಯಾವೆಲ್ಲ ರೂಮರ್‌ಗಳಿದ್ದವೋ ಎಲ್ಲವೂ ಸಂಪೂರ್ಣ ಸುಳ್ಳಲ್ಲ, ನಿಜವೂ ಅಲ್ಲ ಎನ್ನುವುದು ಸಾಬೀತಾಗಿದೆ. 3-ಡಿ ಸೌಲಭ್ಯ ಇದೆಯೇ, ಹೌದು ಇದೆ. ಫೈರ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕೆಲಸ ಮಾಡುತ್ತದೆಯೇ, ಹೌದು. ನೂತನ ಇಂಟರ್‌ಫೇಸ್ ಮೂಲಕ ಇನ್ನಷ್ಟು ಸ್ಮಾರ್ಟ್ ಆಗಿದೆಯೇ ಹೌದು. ಇವೆಲ್ಲದರ ನಡುವೆ ಎಲ್ಲ ತಂತ್ರಜ್ಞಾನ ಶೇ.100ರಷ್ಟು ಅನುಷ್ಠಾನಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಹೌದುಗಳ ನಡುವೆ ಇಲ್ಲ ಎಂಬ ಸತ್ಯದೊಂದಿಗೆ ಮಾರುಕಟ್ಟೆಗೆ ಬಂದಿರುವ ಫೋನ್ ಇದು. ಮೊದಲ 3-ಡಿ ಸ್ಮಾರ್ಟಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಬೇಕಿತ್ತು. ಆದರೆ ಇದರಲ್ಲಿ ಸಂಪೂರ್ಣ ಯಶ ಸಾಧಿಸಲು ಅಮೇಜಾನ್ ತನ್ನ ಮೊದಲ ಪ್ರಯತ್ನದಲ್ಲಿ ವಿಫಲವಾಗಿದೆ. ಗೇಮ್, ಮ್ಯಾಪ್, ಸ್ಕ್ರೀನ್‌ಲಾಕ್ ಹಾಗೂ ವಾಲ್‌ಪೇಪರ್‌ಗಳಿಗೆ ಮಾತ್ರ ಇದು ಸೀಮಿತವಾಗಿದೆ. ಇಮೇಜ್ ವ್ಯೂವ್‌ಗಳ ಡೆಪ್ತ್ ಹೆಚ್ಚಿಸಿರುವುದರಿಂದ 3-ಡಿಯ ಬಿಂಬ ಅಲ್ಲಿ ಕಾಣಿಸುತ್ತದೆ. ಇನ್ನು ಮೊಬೈಲ್‌ನ ಕ್ಯಾಮರಾ ಹಾಗೂ ಸೆನ್ಸಾರ್ ತಂತ್ರಜ್ಞಾನದ ಅಭಿವೃದ್ಧಿಯಿಂದ ಸ್ಕ್ರೀನ್ ಮುಟ್ಟದೇ ಕಾರ್ಯನಿರ್ವಹಿಸಬಹುದಾಗಿದೆ. ಕೇವಲ ಮೊಬೈಲ್ ಅಲುಗಾಡಿಸಿದರೆ ಸ್ಕ್ರೀನ್ ಬದಲಿಸಬಹುದು. ಫೋಟೋ ನೋಡುವಾಗ ಕಣ್ಣಿನ ಚಲನೆ ಆಧರಿಸಿಯೇ ಬದಲಾಗುತ್ತದೆ. ಈ ಹಿಂದೆ ಸ್ಯಾಮ್‌ಸಂಗ್ ಎಸ್-4ನಲ್ಲಿ ಏರ್ ಗೆಸ್ಚರ್ ಸೌಕರ್ಯ ನೀಡಲಾಗಿತ್ತು. ಮತ್ತೊಂದು ವಿಶೇಷವೆಂದರೆ ಯಾವುದಾದರೂ ಉದ್ದದ ಲೇಖನಗಳನ್ನು ಓದುವಾಗ ಮೊಬೈಲ್‌ನ್ನು ಕೇವಲ ಲ್ಟ್ ಮಾಡುವುದರಿಂದ ತನ್ನಿಂದ ತಾನೆ ಅಕ್ಷರಗಳ ಸಾಲುಗಳು ಮೇಲೆ ಹೋಗುತ್ತವೆ. ಜಗತ್ತಿನ ಅತಿದೊಡ್ಡ ಇ-ಶಾಪಿಂಗ್ ಹಬ್ ಆಗಿರುವ ಅಮೇಜಾನ್ ತನ್ನ ಮೊದಲ ಸ್ಮಾರ್ಟಿಯನ್ನು ಮಾರುಕಟ್ಟೆಗೆ ಬಿಡುವಾಗ ಅಮೇಜಾನ್ ಕಂಪನಿಯ ಹಿನ್ನೆಲೆ ಮರೆತಿಲ್ಲ. ಅಮೇಜಾನ್ ಉತ್ಪನ್ನಗಳನ್ನು ಇನ್ನಷ್ಟು ಖ್ಯಾತಗೊಳಿಸಲು ಫೋಟೋ ಸ್ಟೋರೇಜ್‌ಗೆ ಅನಿಯಮಿತ ಕ್ಲೌಡ್ ಸೇವೆಗಳನ್ನು ನೀಡಲಾಗಿದೆ. ಹಾಗೆಯೇ ಅಮೇಜಾನ್ ಉತ್ಪನ್ನಗಳನ್ನು 3-ಡಿಯಲ್ಲಿ ನೋಡಬಹುದಾಗಿದೆ. ಮೇಡೇ ಎಂಬ ತಂತ್ರಜ್ಞಾನದ ಮೂಲಕ ಅಮೇಜಾನ್ ಸೌಕರ್ಯಗಳ ಬಗ್ಗೆ 24 ಗಂಟೆಯೂ ಉಚಿತ ವಿಡಿಯೋ ಚಾಟ್ ಮಾಡಬಹುದಾಗಿದೆ. ಅಂದ ಹಾಗೆ ಇದರ ಕ್ಯಾಮರಾ 13 ಎಂಪಿ, 2 ಜಿಬಿ ರ್ಯಾಮ್, 2.2 ಗಿಗಾ ಹರ್ಟ್ಸ್ ಪ್ರೊಸೆಸರ್, 32 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇನ್ಯಾವುದೇ ಮೊಬೈಲ್‌ನಲ್ಲಿರದ ಮತ್ತೊಂದು ವಿಶೇಷ ಸೇವೆ ಇದರಲ್ಲಿ ಲಭ್ಯವಿದ್ದು, ಯಾವುದೇ ಹಾಳೆಯಲ್ಲಿ ಯಾರದ್ದೋ ಸಂಪರ್ಕ ಮಾಹಿತಿಗಳಿದ್ದರೇ ಅಲ್ಲಿ ಕ್ಯಾಮರಾ ಹಿಡಿಯುವ ಮೂಲಕ ಅದನ್ನು ಮೊಬೈಲ್‌ಗೆ ನೇರವಾಗಿ ಸೇವ್ ಮಾಡಿಕೊಳ್ಳಬಹುದು. ಇದರಿಂದ ನೀವು ಹೊಸದಾಗಿ ಟೈಪ್ ಮಾಡಿ ಸೇವ್ ಮಾಡಿಕೊಳ್ಳುವ ಸಮಯ ಉಳಿಯುತ್ತದೆ. ಹಾಗೆಯೇ ಇ-ಮೇಲ್, ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದಾಗಿದೆ. ಭಾರತೀಯ ಮಾರುಕಟ್ಟೆಗೆ ಇದು ಇನ್ನು ಬಂದಿಲ್ಲ. ಆದರೆ ಒಂದೆರಡು ತಿಂಗಳಲ್ಲಿ ಬರುವ ಸಾಧ್ಯತೆಯಿದ್ದು, 12 ಸಾವಿರದಿಂದ 42 ಸಾವಿರದವರೆಗೂ ದರಪಟ್ಟಿ ಇರುವ ಸಾಧ್ಯತೆಯಿದೆ.