ಡಯಟ್ ಮಾಡಿದ್ರೆ ದಡ್ಡರಾಗ್ತೀರಿ! ಡಯಟ್ ಮಾಡಿದ್ರೆ ಸಣ್ಣ ಆಗ್ತಾರೆ ಅಂತ ಕೇಳಿದ್ದೀರಿ. ಆದರೆ ದಡ್ಡರಾಗ್ತಾರೆ ಅಂದ್ರೆ ನಂಬುತ್ತೀರಾ? ಹೌದು, ಕೆಲ ಸಂಶೋಧಕರು ಡಯಟ್ ಮಾಡೋದ್ರಿಂದ ದಡ್ಡರಾಗ್ತಾರೆ ಎಂದು ಹೇಳಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ಗುಂಪೊಂದು ಈ ಬಗ್ಗೆ ಗಂಭೀರವಾಗಿ ಸಂಶೋಧನೆ ಮಾಡುತ್ತಿದೆ. ಕೆಲವು ಇಲಿಗಳಿಗೆ 6 ವಾರ ಬರೀ ಜೇನುತುಪ್ಪದ ರೀತಿಯ ಪದಾರ್ಥ ಕೊಟ್ಟು ಡಯಟ್‌ನಲ್ಲಿ ಇಟ್ಟಿದ್ದರಂತೆ. ಈ ಸಂದರ್ಭದಲ್ಲಿ ಆ ಇಲಿಗಳು ಏನು ಹೇಳಿದರೂ ಗ್ರಹಿಸುವಲ್ಲಿ, ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದವಂತೆ. ಜೊತೆಗೆ ಮೊದಲಿದ್ದ ಚುರುಕುತನವೂ ಇರಲಿಲ್ಲವಂತೆ. ಹೀಗಾಗಿ ಡಯಟ್ ಜನರನ್ನು ದಡ್ಡರನ್ನಾಗಿ ಮಾಡಿಬಿಡಬಹುದು ಎಂಬ ಭಯದಿಂದಲೇ ಈ ಸಂಶೋಧನೆ ನಡೆಸಲಾಗಿದೆಯಂತೆ. ಜೇನುತುಪ್ಪದ ರೀತಿಯ ಪದಾರ್ಥ ಒಂದು ರೀತಿಯಲ್ಲಿ ದೇಹಕ್ಕೆ ಸಮಸ್ಯೆ ಎಂದು ಈ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಇದು ಗ್ಲುಕೋಸ್ ರೀತಿಯಲ್ಲಿ ಕೆಲಸ ಮಾಡಲ್ಲವಂತೆ. ಸಕ್ಕರೆಯಲ್ಲಿ ಸಿಗುವ ಗ್ಲುಕೋಸ್‌ಗೂ, ಇದು ಸಿಹಿಯಾಗಿದ್ದರೂ ಇದರಲ್ಲಿ ಸಿಗುವ ಸಿಹಿ ಅಂಶಕ್ಕೂ ವ್ಯತ್ಯಾಸ ಇದೆಯಂತೆ. ಜೊತೆಗೆ ಇದು ಇನ್ಸುಲಿನ್ ಮೇಲೆ ಅಡ್ಡಪರಿಣಾಮ ಉಂಟು ಮಾಡುವುದಲ್ಲದೇ, ಮೆದುಳಿನ ರಾಸಾಯನಿಕಗಳ ಮೇಲೂ ಕೆಟ್ಟ ಪರಿಣಾಮವುಂಟು ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಹೀಗಾಗಿ ಡಯಟ್ ಎಂದು ತಿನ್ನುವುದನ್ನು ಬಿಡುವುದಕ್ಕಿಂತ, ತರಕಾರಿ, ಹಣ್ಣುಗಳನ್ನು ತಿನ್ನುವ ಮೂಲಕ ಆರೋಗ್ಯವಂತರಾಗಿರಬಹುದು ಎಂದು ಹೇಳಲಾಗಿದೆ.