ಗಿಡದಲ್ಲೇ ಬಂಗಾರ ಬೆಳೆಯುವಂತಿದ್ದರೆ!? ದುಡ್ಡೇನೂ ಗಿಡದಲ್ಲಿ ಬಿಡುತ್ತಾ?- ಈ ಮಾತನ್ನು ಬಹಳಷ್ಟು ಜನ ಜೀವನದಲ್ಲಿ ಅದೆಷ್ಟು ಬಾರಿ ಆಡಿರುತ್ತಾರೋ ಅಥವಾ ಕೇಳಿಸಿಕೊಂಡಿರುತ್ತಾರೋ? ಹೋಗ್ಲಿ ಬಿಡಿ ಇದು ಸತ್ಯಕ್ಕೆ ಹತ್ತಿರವಾದ ವಿಚಾರವೇ ಅಲ್ಲ. ಆದರೆ ಬಂಗಾರವೇ ಗಿಡದಲ್ಲಿ ಬಿಡುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ಲವೇ? ಹೌದು, ಅಚ್ಚರಿ ಎನ್ನಿಸಿದರೂ ಇದು ಸತ್ಯ. ವಿಜ್ಞಾನಿಗಳು ಇಂಥದ್ದೊಂದು ಗಿಡ ಕಂಡುಹಿಡಿದಿದ್ದಾರೆ. ಫಿಟೋಮಿನಿಂಗ್ ಎಂಬ ತಂತ್ರಜ್ಞಾನದ ಮೂಲಕ ಗಿಡಗಳಲ್ಲೇ ಬಂಗಾರ ತೆಗೆಯಬಹುದು ಎಂದು ಹೇಳುತ್ತಾರೆ. ಇವರು ಹೇಳುವ ಪ್ರಕಾರ, ಗಿಡಗಳಿಗೆ ತಮ್ಮ ಕಾಂಡಗಳು ಮತ್ತು ಬೇರುಗಳ ಮೂಲಕ ಕೆಲವೊಂದು ಖನಿಜಗಳನ್ನು ಆಕರ್ಷಿಸುವ ಶಕ್ತಿ ಇರುತ್ತದೆ. ಇದೇ ವಾದವನ್ನು ಇಟ್ಟುಕೊಂಡು ಗಿಡಗಳನ್ನು ಬೆಳೆದರೆ ಇಂಥ ಗಿಡಗಳು ಮಣ್ಣಿನಲ್ಲಿರುವ ಚಿನ್ನವನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತವೆ. ಇದಕ್ಕಾಗಿ ತ್ವರಿತವಾಗಿ ಬೆಳೆಯುವ ಗಿಡಗಳನ್ನು ಆರಿಸಿಕೊಳ್ಳಬೇಕು ಎನ್ನುವ ಸಂಶೋಧಕರು, ಬಂಗಾರವನ್ನು ತೆಗೆಯಬೇಕಾದರೆ ಕೆಲವು ರಾಸಾಯನಿಕಗಳನ್ನೂ ಬಳಕೆ ಮಾಡಬೇಕು ಎನ್ನುತ್ತಾರೆ. ಆದರೆ ಗಿಡದಿಂದ ಬಂಗಾರ ತೆಗೆಯುವುದು ಕಷ್ಟವಾದ ವಿಚಾರ, ಬಹು ನಾಜೂಕಿನಿಂದ ಕೆಲಸ ಮಾಡಬೇಕು ಎಂದು ಹೇಳುತ್ತಾರೆ.