ಡಿಜಿಟಲ್ ಕನ್ನಡ ಮೊಬೈಲ್ ಖರೀದಿಸಿ, ಕನ್ನಡ ಬೆಳೆಸಿ! ಹಿಂದಿನ ಸರ್ಕಾರದ 'ಕಲಿ-ನಲಿ' ಯೋಜನೆ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿ ಸದ್ದಿಲ್ಲದೇ ಜಾರಿಯಾಗುತ್ತಿದೆ. ಒಂದಿಷ್ಟು ನೈಜ ಕನ್ನಡಾಭಿಮಾನಿಗಳು ಕನ್ನಡದ ನುಡಿತೇರು ಎಳೆಯುವ ಕೈಂಕರ್ಯ ಮಾಡುತ್ತಿದ್ದಾರೆ. ಯಾವುದೇ ಹಾರ ತುರಾಯಿಯ ಆಸೆಯಿಲ್ಲದೆ ಕನ್ನಡ ಕಟ್ಟುತ್ತಿದ್ದಾರೆ. ಒಂದು ವರ್ಷದ ಹಿಂದೆ ಗೂಗಲ್ ಪ್ಲೇನಲ್ಲಿ ಅಥವಾ ಆ್ಯಪ್ ಸ್ಟೋರ್‌ನಲ್ಲಿ ಹುಡುಕಿದರೆ ಕನ್ನಡ ಆ್ಯಪ್‌ಗಳು ಬೆರಳೆಣಿಕೆಯಷ್ಟೂ ಸಿಗುತ್ತಿರಲಿಲ್ಲ. ಆದರೆ ಇಂಥ ಭಾಷಾ ಕಟ್ಟಾಳುಗಳಿಂದ ಇಂದು ಗೂಗಲ್ ಪ್ಲೇ ಒಂದರಲ್ಲೇ ಕನ್ನಡ ನಾಡು- ನುಡಿಗೆ ಸಂಬಂಧಿಸಿದ 250 ಆ್ಯಪ್‌ಗಳು ಸಿಗುತ್ತಿವೆ. ಮಕ್ಕಳು ಕನ್ನಡ ಕಲಿಯಲು ಕಷ್ಟ ಪಡುತ್ತಿದ್ದಾರೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಕನ್ನಡ ಕಲಿಸುವ ಉತ್ತಮ ಮೆಷ್ಟ್ರೇ ಸಿಗುವುದಿಲ್ಲ. ವಿದೇಶದಲ್ಲಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಯಲು ಅವಕಾಶವೇ ಇಲ್ಲ ಎಂಬ ನೆಪಗಳನ್ನು ಹೇಳುತ್ತಾರೆ. ಆದರೆ ಸ್ಮಾರ್ಟ್ ಪ್ರಪಂಚದತ್ತ ಒಮ್ಮೆ ಕಣ್ಣಾಡಿಸಿದರೆ ವಿದ್ಯಾರ್ಥಿಗಳು, ಪಾಲಕರು ಇಂಥ ನೆಪಗಳನ್ನು ಮತ್ತೆ ಹೇಳುವುದಿಲ್ಲ. ಇಂದಿನ ಮಕ್ಕಳಿಗೆ ಬಾಳೆ ಹಣ್ಣಿನ ಸಿಪ್ಪೆ ಬಿಡಿಸಿಕೊಂಡು ತಿನ್ನುವುದು ಕಷ್ಟದ ಕೆಲಸವಾಗಿರಬಹುದು. ಆದರೆ ಸ್ಮಾರ್ಟ್ ಫೋನ್‌ನ ಪಾಸ್ವರ್ಡ್ ಪ್ಯಾಟರ್ನ್ ಬೇಧಿಸಿಕೊಂಡು ತಮಗೆ ಬೇಕಾದ ಅಪ್ಲಿಕೇಷನ್ ಅಥವಾ ಗೇಮ್ ಆನ್ ಮಾಡಿಕೊಳ್ಳುವುದನ್ನು ಹೇಳಿಕೊಡಬೇಕಿಲ್ಲ. ಮಕ್ಕಳ ಇಂಥ ಚಾಣಾಕ್ಷತನವನ್ನು ಸ್ವಲ್ಪ ಚಾಣಾಕ್ಷವಾಗೇ ಉಪಯೋಗಿಸಿ ಕೊಂಡರೆ ಐಟಿ ಯುಗದ ಮಕ್ಕಳ ಬಾಯಲ್ಲಿಯೂ ಶುದ್ಧ ಕನ್ನಡ ಕೇಳಬಹುದು. ಗೂಗಲ್ ಪ್ಲೇನಲ್ಲಿ 'ಕನ್ನಡ ಲರ್ನ್‌' ಎಂದು ಸರ್ಚ್ ಕೊಟ್ಟರೆ ಹತ್ತಕ್ಕೂ ಅಧಿಕ ಆ್ಯಪ್‌ಗಳು ತೆರೆದುಕೊಳ್ಳುತ್ತವೆ. ಇಲ್ಲಿ ಕನ್ನಡವನ್ನು ಓದಲು, ಉಚ್ಚರಿಸಲು, ಭಾಷಾಂತರಿಸಲು ನೆರವು ಮಾಡುವ ಆ್ಯಪ್‌ಗಳ ಜತೆಗೆ ಶಬ್ದಕೋಶಕ್ಕೆ ಸಂಬಂಧಿಸಿದ ಇನ್ನೊಂದಿಷ್ಟು ಆ್ಯಪ್‌ಗಳೂ ಸಿಗುತ್ತವೆ. ಈಗಾಗಲೆ ಹೇಳಿದಂತೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲು ಕೂಡ ಒಂದಿಷ್ಟು ಆ್ಯಪ್ ಸಿಗುತ್ತದೆ. ಇದಕ್ಕೆ ಕಡ್ಡಾಯವಾಗಿ ಟಚ್ ಸ್ಕ್ರೀನ್ ಫೋನ್ ಬೇಕಾಗುತ್ತದೆ. ಅ-ಅಮ್ಮನಿಂದ ಹಿಡಿದು ಜ್ಞ-ಯಜ್ಞದವರೆಗೆ ಸ್ಮಾರ್ಟ್ ಫೋನಿನಲ್ಲಿ ಕಲಿಯಬಹುದು. ಮಕ್ಕಳಿಗೆ ಗೇಮ್ ಡೌನ್‌ಲೋಡ್ ಮಾಡಿಕೊಳ್ಳುವುದರ ಜತೆಗೆ ಕನ್ನಡ ಲರ್ನಿಂಗ್ ಆ್ಯಪ್ ಕೂಡ ಡೌನ್‌ಲೋಡ್ ಮಾಡಿಬಿಡಿ. ಮಕ್ಕಳು ಗೇಮ್ ಆಡಿ ಬೋರ್ ಆದಾಗ ಕನ್ನಡದ ಬಗ್ಗೆ ಸ್ವಲ್ಪ ತಲೆ ಕೆಡಿಸಿಕೊಳ್ಳಲಿ. ನಾವೆಲ್ಲ ಕಲಿತ ಅಂಕಲಿಪಿ ಇಲ್ಲಿ ಡಿಜಿಟಲ್ ರೂಪ ಪಡೆದಿದೆ. ಅಕ್ಷರಗಳ ಇಂಗ್ಲಿಷ್ ಶಬ್ದವೂ ದೊರೆಯುತ್ತದೆ. ಉಚ್ಚರಣೆಯನ್ನೂ ಹೇಳಿಕೊಡಲಾಗುತ್ತದೆ. ಮತ್ತೊಂದು ವಿಶೇಷವೆಂದರೆ ಅಕ್ಷರಗಳನ್ನು ತಿದ್ದಲೂ ಅವಕಾಶ ನೀಡಲಾಗಿದೆ. ಕೆಲವು ಅಪ್ಲಿಕೇಷನ್‌ಗಳಲ್ಲಿ ಅಕ್ಷರದ ಮೇಲೆಯೆ ತಿದ್ದಲು ಅನುವು ಮಾಡಿಕೊಡಲಾಗಿದೆ. ಇನ್ನು ಕೆಲವು ಆ್ಯಪ್‌ಗಳಲ್ಲಿ ಅಕ್ಷರದ ಪಕ್ಕ ನಾವೆ ಸ್ವತಃ ಬರೆದು ಅಭ್ಯಾಸ ಮಾಡಬಹುದಾಗಿದೆ. ಕನ್ನಡದ ವ್ಯಾಕರಣವನ್ನು ತಕ್ಕಮಟ್ಟಿಗೆ ಕಲಿಸುವ ಆ್ಯಪ್ ಕೂಡ ಇದೆ. ಭಾಷೆಯ ಮೇಲಿನ ಪ್ರೀತಿಗಿಂತಲೂ ಮೊಬೈಲ್ ಮೇಲಿನ ಪ್ರೀತಿ ಇಲ್ಲಿ ಕನ್ನಡ ಕಲಿಸಲು ನೆರವಾಗಬಹುದು. ಕನ್ನಡವೆಂದರೆ ಇಷ್ಟೆ ಸಾಕೇ? ಖಂಡಿತ ಇಲ್ಲ. ಇದನ್ನು ಹೊರತುಪಡಿಸಿ ಕನ್ನಡ ಶ್ಲೋಕ, ಪಂಚಾಂಗ, ಶಬ್ದಕೋಶ, ಸುದ್ದಿ, ಯೋಗ, ಭಾಷಾಂತರ, ಮೂವಿ, ಸಾಂಗ್ಸ್, ಗಾದೆ, ಚಂಪಕ ಕತೆ, ಪ್ರಾಸ, ಧಾರ್ಮಿಕ ಪಠಣ, ಧಾರಾವಾಹಿ, ಪದಬಂಧಗಳು ದೊರೆಯುತ್ತಿವೆ. ಇದರಲ್ಲಿ ಎರಡು ಅಪ್ಲಿಕೇಷನ್‌ಗಳು ಇಂಟರೆಸ್ಟಿಂಗ್ ಅನಿಸಿತು. ಚಂಪಕ ಕತೆ ಹಾಗೂ ಧಾರಾವಾಹಿ. 15 ವರ್ಷದ ಹಿಂದೆ ನಾವೆಲ್ಲ ಶಾಲೆಯಲ್ಲಿ ಓದುತ್ತಿದ್ದಾಗ ಚಂಪಕ ಕತೆ ಪುಸ್ತಕದ ಸಣ್ಣ ಚೂರು ಸಿಕ್ಕರೂ ತಿರುಗಿ ಮುರುಗಿ ಓದುತ್ತಿದ್ದೆವು. ಇಂದು ಅದೇ ಪುಸ್ತಕಗಳು ಡಿಜಿಟಲೈಸ್ ಆಗಿವೆ. ಪೋಗೋ ಚಾನೆಲ್ ಹಾಗೂ ಚೋಟಾ ಭೀಮನ ಗಲಾಟೆಯಲ್ಲಿ ಕತೆ ಓದುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವಾಗ ಓದಿನ ಚಾಳಿ ಬೆಳೆಸಲು ಇದು ನೆರವಾಗಬಹುದು. ಮತ್ತೊಂದೆಡೆ ಮನೆಯಲ್ಲಿ ಧಾರಾವಾಹಿ ಎಂದು ಗೊಣಗಾಡುವ ಈ ಸಣ್ಣ ಮಕ್ಕಳ ದೊಡ್ಡ ಅಮ್ಮಂದಿರಿಗೆಂದೇ ಕನ್ನಡದ ಕೆಲ ಧಾರಾವಾಹಿಗಳನ್ನು ಒಂದೇ ಅಪ್ಲಿಕೇಷನ್‌ನಲ್ಲಿ ಲಿಂಕ್ ಕೊಡಲಾಗಿದೆ. ಇವೆಲ್ಲ ಬೆಳವಣಿಗೆಗಳ ಮಧ್ಯೆ ಒಂದು ಬೇಸರದ ಸಂಗತಿಯೆಂದರೆ ಕನ್ನಡದ ಪುಸ್ತಕಗಳು ಡಿಜಿಟಲ್ ರೂಪದಲ್ಲಿ ಸಿಗುತ್ತಿಲ್ಲ. ಕನ್ನಡದ ಉಳಿವಿಗೆ ಬೊಬ್ಬೆ ಹಾಕುವ ಸಾಹಿತಿಗಳು ಹಾಗೂ ಪ್ರಕಾಶಕರು ಡಿಟಿಟಲ್ ಪುಸ್ತಕ ಸೇವೆಯನ್ನು ಆರಂಭಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಅ-ಅಮ್ಮನಿಂದ ಹಿಡಿದು ಜ್ಞ-ಯಜ್ಞದವರೆಗೆ ಸ್ಮಾರ್ಟ್‌ಫೋನಿನಲ್ಲಿ ಕಲಿಯಬಹುದು. ಮಕ್ಕಳಿಗೆ ಗೇಮ್ ಡೌನ್‌ಲೋಡ್ ಮಾಡಿಕೊಳ್ಳುವುದರ ಜತೆಗೆ ಕನ್ನಡ ಲರ್ನಿಂಗ್ ಆ್ಯಪ್ ಅನ್ನೂ ಡೌನ್‌ಲೋಡ್ ಮಾಡಿಬಿಡಿ. ಭಾಷೆಯ ಮೇಲಿನ ಪ್ರೀತಿಗಿಂತಲೂ ಮೊಬೈಲ್ ಮೇಲಿನ ಪ್ರೀತಿ ಇಲ್ಲಿ ಕನ್ನಡ ಕಲಿಸಲು ನೆರವಾಗಬಹುದು. -ರಾಜೀವ ಹೆಗಡೆ .@.