ಹೆಚ್ ಎಎಲ್ ನಿಂದ ಹೆಚ್ ಟಿಟಿ-40 ಮೊದಲ ಮಾದರಿ ಬಿಡುಗಡೆ: ಮೇಕ್ ಇನ್ ಇಂಡಿಯಾ ಸಂಬಂಧ ಮಹತ್ವದ ಹೆಜ್ಜೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್ ) ಹಿಂದುಸ್ಥಾನ್ ಟರ್ಬೊ ಪ್ರೋಪ್ ಟ್ರೈನರ್( ಹೆಚ್ ಟಿಟಿ-40 ) ರ ಮೊದಲ ಮಾದರಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್) ಹಿಂದುಸ್ಥಾನ್ ಟರ್ಬೊ ಪ್ರೋಪ್ ಟ್ರೈನರ್( ಹೆಚ್ ಟಿಟಿ-40 ) ರ ಮೊದಲ ಮಾದರಿಯನ್ನು ಬಿಡುಗಡೆ ಮಾಡಿದೆ. ಹೆಚ್ ಟಿ ಟಿ-40 ತರಬೇತಿ ನೀಡುವುದಕ್ಕೆ ಬಳಸಲಾಗುವ ವಿಮಾನವಾಗಿದ್ದು ಎರಡು ಆಸನಗಳನ್ನು ಮಾತ್ರ ಹೊಂದಿದೆ. ಹೆಚ್ ಟಿಟಿ-40 ಬಗ್ಗೆ ಹೆಚ್‌ಎಎಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು ಮಾತನಾಡಿದ್ದು, ಹೆಚ್ ಟಿಟಿ-40 ಮೊದಲ ಮಾದರಿಯ ನಿರ್ಮಾಣದ ಶ್ರಮ ಹೆಚ್ ಎಎಲ್ ನಲ್ಲಿ ನಡೆಯುತ್ತಿರುವ ನವೀಕೃತ ಹಾಗೂ ಪುನಶ್ಚೇತನಗೊಳಿಸುವ ವಿಧಾನಗಳ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗಿರುವ ಹೆಚ್ ಟಿಟಿ-40 ನ್ನು ಮತ್ತಷ್ಟು ಆಧುನಿಕಗೊಳಿಸಿ ಶಸ್ತ್ರಸಜ್ಜಿತಗೊಳಿಸಲಾಗುವುದು ಎಂದು ಟಿ ಸುವರ್ಣ ರಾಜು ತಿಳಿಸಿದ್ದಾರೆ. ಟರ್ಬೊ ಪ್ರೋಪ್ ಟ್ರೈನರ್ ಬಿಡುಗಡೆ ವೇಳೆ ಹೆಚ್ ಎ ಎಲ್ ನ ಆಡಳಿತಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪ್ರಾಥಮಿಕ ಹಂತದ ಹಾರಾಟಕ್ಕೆ ಟರ್ಬೊ ಪ್ರೋಪ್ ಟ್ರೈನರ್ ಸಿದ್ಧಗೊಂಡಿದ್ದು, ರೂಕಿ ಪೈಲಟ್ ಗಳಿಗೆ ಮೊದಲ ಹಂತದ ತರಬೇತಿ ನೀಡಲು ಹೆಚ್ ಟಿ ಟಿ-40 ಯನ್ನು ಬಳಕೆ ಮಾಡಲಾಗುತ್ತದೆ. ಹೆಚ್ ಟಿ ಟಿ-40 ಬಿಡುಗಡೆ ಮೇಕ್ ಇನ್ ಇಂಡಿಯಾಗೆ ಸಂಬಂಧಿಸಿದಂತೆ ಹೆಚ್ಎಎಲ್ ನ ಮಹತ್ವದ ಹೆಜ್ಜೆಯಾಗಿದೆ.