ದೇಹದ ರಕ್ತ ಪರಿಚಲನೆಯ ಮೇಲೆ ಚಳಿಗಾಲದ ಪರಿಣಾಮ ಚಳಿಗಾಲದಲ್ಲಿ ನಾವು ಸಂತಸ ಪಡುವಂತೆ ಮತ್ತು ಕ್ರಿಸ್‍ಮಸ್‍ನಿಂದ ಹೊಸ ವರ್ಷದ ಹಬ್ಬದ ವಾತಾವರಣದಲ್ಲಿ ಖುಷಿಪಡುವಂತೆಯೇ ಈ ಸೀಸನ್ ಕೆಲವು ಆರೋಗ್ಯ ಸಮಸ್ಯೆಗಳನ್ನೂ ಹೊತ್ತು ತರುತ್ತದೆ. ಚಳಿಗಾಲದಲ್ಲಿ ನಾವು ಸಂತಸ ಪಡುವಂತೆ ಮತ್ತು ಕ್ರಿಸ್‍ಮಸ್‍ನಿಂದ ಹೊಸ ವರ್ಷದ ಹಬ್ಬದ ವಾತಾವರಣದಲ್ಲಿ ಖುಷಿಪಡುವಂತೆಯೇ ಈ ಸೀಸನ್ ಕೆಲವು ಆರೋಗ್ಯ ಸಮಸ್ಯೆಗಳನ್ನೂ ಹೊತ್ತು ತರುತ್ತದೆ. ಈ ಪೈಕಿ ಬೆಂಗಳೂರಿಗರ ಒಂದು ದೂರು ಏನೆಂದರೆ, ಚಳಿಗಾಲದಲ್ಲಿ ಮಾಂಸಖಂಡಗಳು ಹಿಡಿದುಕೊಳ್ಳುವುದು ಮತ್ತು ಬೆರಳುಗಳು ಹೆಪ್ಪುಗಟ್ಟುವುದಾಗಿದೆ. ಶೀತಗಟ್ಟಿದ ಕೈಗಳು ಮತ್ತು ಕಾಲುಗಳು ರಕ್ತ ಪರಿಚಲನೆಯ ಸಮಸ್ಯೆಯನ್ನು ಎದುರಿಸುತ್ತದೆ. ಅದರಲ್ಲೂ ಸಾಮಾನ್ಯವಾಗಿ ಬೆರಳುಗಳು ಚಲಿಸದಂತಾಗುತ್ತವೆ. “ಶೀತ ವಾತಾವರಣವು ಹರದಯದ ಮೇಲೆ ಒತ್ತಡವನ್ನು ಹಾಕುತ್ತದೆ ಮತ್ತು ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ದೇಹದ ವಿವಿದ ಭಾಗಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ. ಹೀಗಾಗಿ ಕೈ ಹಾಗೂ ಕಾಲಿನ ಬೆರಳುಗಳು, ಕಿವಿಗಳು ಹಾಗೂ ಮೂಗು ಹೆಪ್ಪುಗಟ್ಟುತ್ತವೆ. ದೇಹದ ಅತಿ ಸಣ್ಣ ರಕ್ತನಾಳಗಳಿಗೆ ರಕ್ತದ ಪೂರೈಕೆಯ ಮೇಲೆ ಪರಿಣಾಮ ಉಂಟಾಗುತ್ತದೆ” ಎಂದು ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ಸ್ ವಿಭಾಗದ ಕನ್ಸಲ್ಟಂಟ್ ಡಾ. ರವಿ ಕುಮಾರ್ ವಿ.ಎನ್ ವಿವರಿಸಿದ್ದಾರೆ. ರಕ್ತ ಪರಿಚಲನೆಯ ಸಮಸ್ಯೆಯು ಚಳಿಗಾಲದಲ್ಲಿ ಅತ್ಯಂತ ಸಾಮಾನ್ಯವಾಗಿರುತ್ತದೆ. ಆದರೆ ಕೆಲವು ಎಲ್ಲ ಸಮಯದಲ್ಲೂ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಜೀವನ ಶೈಲಿಯ ಹವ್ಯಾಸ ಅಥವಾ ಆರೋಗ್ಯ ಸ್ಥಿತಿಗಳಾದ ಧೂಮಪಾನ, ಅಧಿಕ ರಕ್ತದೊತ್ತಡ, ಡಯಾಬಿಟೀಸ್ ಮತ್ತು ವೃದ್ಧಾಪ್ಯವೂ ಕಾರಣವಾಗಬಹುದು. ಚಳಿಗಾಲದಲ್ಲಿ ರಕ್ತ ಪರಿಚಲನೆ ಸಮಸ್ಯೆಯ ಸಾಮಾನ್ಯ ಗುಣಲಕ್ಷಣಗಳೆಂದರೆ ಕೈ ಮತ್ತು ಕಾಲು ನೀಲಿಯಾಗುವುದು, ಅಂಗಗಳು ಹೆಪ್ಪುಗಟ್ಟುವುದು ಅಥವಾ ಕೈ ಮತ್ತು ಪಾದಗಳು ಶೀತಗಟ್ಟುವುದಾಗಿದೆ. “ಸಾಮಾನ್ಯವಾಗಿ ಅತ್ಯಂತ ತೆಳ್ಳಗಿರುವವರು ಕಾಲು ಮತ್ತು ಕೈ ಬೆರಳುಗಳು ಹೆಪ್ಪುಗಟ್ಟುವ ದೂರು ನೀಡುತ್ತಾರೆ. ಅವರು ಚಳಿಗಾಲದಲ್ಲಿ ಶೀಘ್ರ ಉಷ್ಣವನ್ನು ಕಳೆದುಕೊಳ್ಳುತ್ತಾರೆ. ಹಾಗೆಯೇ, ಕ್ಷೀಣ ಚಯಾಪಚಯ ವ್ಯವಸ್ಥೆಯನ್ನು ಹೊಂದಿರುವ ವ್ಯಕ್ತಿಗಳು ಚಳಿಗಾಲದಲ್ಲಿ ಮಾಂಸಖಂಡಗಳು ಹಿಡಿದುಕೊಳ್ಳುವ ಅನುಭವ ಎದುರಿಸುತ್ತಾರೆ” ಎಂದು ವೈದ್ಯರು ಹೇಳುತ್ತಾರೆ. “ಹೈಪೋಥರ್ಮಿಯಾ ಎಂಬುದು ದೇಹವು 95 ಡಿಗ್ರಿ ಫ್ಯಾರನ್‍ಹೀಟ್‍ಗಿಂತಲೂ ಕಡಿಮೆ ಉಷ್ಣತೆಗೆ ಇಳಿಯುವ ಸ್ಥಿತಿಯಾಗಿದೆ. ಇದರಿಂದ ಚಳಿಗಾಲದ ಸಮಯದಲ್ಲಿ ವೃದ್ಧರಲ್ಲಿ ಸಹಕಾರದ ಕೊರತೆ, ಮಾತಿನಲ್ಲಿ ತೊಂದರೆ, ಗೊಂದಲ, ಉಸಿರಾಟ ಕ್ಷೀಣವಾಗುವುದು ಮತ್ತು ಮಂಪರು ಉಂಟಾಗುತ್ತದೆ. ತೀವ್ರವಾದ ಪ್ರಕರಣಗಳಲ್ಲಿ ಇದು ಫ್ರೋಸ್ಟ್ ಬೈಟ್‍ಗೂ ಕಾರಣವಾಗಬಹುದು” ಎಂದು ವೈದ್ಯರು ಹೇಳಿದ್ದಾರೆ. ರಕ್ತ ಪರಿಚಲನೆ ಸಮಸ್ಯೆಯು ಕ್ಷೀಣ, ತೀವ್ರ ಅಥವಾ ಜೀವಕ್ಕೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆಯನ್ನೂ ಹೊಂದಿರಬಹುದಾಗಿದೆ. ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಜನರು ರಕ್ತ ಪರಿಚಲನೆ ಸಮಸ್ಯೆಯನ್ನು ವರದಿ ಮಾಡುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಅರಿಯುವುದು ಪ್ರಮುಖವಾಗಿದೆ ಮತ್ತು ಪರಿಸ್ಥಿತಿ ತೀವ್ರಗೊಳ್ಳುವ ಮುನ್ನ ಪರಿಣಿತರ ಸಲಹೆ ಪಡೆಯುವುದು ಮುಖ್ಯವಾಗಿದೆ. ಹೈಪೋಥರ್ಮಿಯಾ ಮತ್ತು ಶೀತ ಸನ್ನಿವೇಶದಲ್ಲಿ ಜಾರುವುದು ಮತ್ತು ಬೀಳುವುದು ಸಾಮಾನ್ಯವಾಗಿದೆ. ಶೀತ ಗಾಳಿಯು ಅಸ್ತಮಾ ಮತ್ತು ಮೇಲಿನ ಶ್ವಾಸಕೋಶ ನಾಳಗಳ ಸೋಂಕನ್ನು ವರ್ಧಿಸಬಹುದಾಗಿದೆ. ಈ ಚಳಿಗಾಲದಲ್ಲಿ ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ: • ಹೊರಗೆ ಶೀತವಿದ್ದಾಗ ಬೆಚ್ಚನೆ ಬಟ್ಟೆ ಧರಿಸಿ. ಮನೆ ಒಳಗೆ ಶೀತವಿದ್ದಾಗಲೂ, ನಿಮ್ಮನ್ನು ಸುರಕ್ಷಿತವಾಗಿರಿಸಲು ಹೆಚ್ಚುವರಿ ಬಟ್ಟೆ ಧರಿಸಿ. • ದೀರ್ಘ ಅವಧಿಗೆ ಶಿತ ವಾತಾವರಣದಲ್ಲಿ ಇರಬೇಡಿ • ಕೈಗಳು ಮತ್ತು ಕಾಲುಗಳು ಕ್ಷಿಪ್ರವಾಗಿ ಮಂಜುಗಟ್ಟಿದ ಅನುಭವವಾದರೆ ಕೈ ಮತ್ತು ಕಾಲುಗಳನ್ನು ಉಜ್ಜಿಕೊಳ್ಳಿ. ಬೆಚ್ಚನೆ ಭಾವವು ಸರಿಯಾದ ರಕ್ತ ಪರಿಚಲನೆಗೆ ನೆರವಾಗುತ್ತದೆ. • ಮಾಂಸಖಂಡಗಳು ಹಿಡಿದುಕೊಳ್ಳುವುದನ್ನು ತಡೆಯಲು ವ್ಯಾಯಾಮ ಮಾಡಿ. ಇದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. • ಅಲ್ಕೋಹಾಲಿಕ್ ಪಾನೀಯಗಳು ಬೆಚ್ಚಗಾದ ತಪ್ಪು ಅನುಭವ ನೀಡುತ್ತವೆ. ಹೀಗಾಗಿ ಚಹಾ, ಕಾಫಿ ಅಥವಾ ಬಿಸಿ ಹಾಲನ್ನು ಸೇವಿಸಿ. • ಹಗಲು ಹೊತ್ತಿನಲ್ಲಿ ತೀವ್ರ ಕೆಲಸ ಮಾಡಬೇಡಿ ಮತ್ತು ಆಗಾಗ್ಗೆ ವಿಶ್ರಾಂತಿ ತೆಗೆದುಕೊಳ್ಳಿ • ಪೆರಿಫೆರಲ್ ಆರ್ಟರಿ ರೋಗಕ್ಕೆ ಕಾರಣವಾಗುವುದರಿಂದ ಧೂಮಪಾನ ಮಾಡಬೇಡಿ. ಇದರಿಂ ಕಾಲುಗಳಿಗೆ ರಕ್ತಪರಿಚಲನೆ ಕಡಿಮೆಯಾಗುತ್ತದೆ. • ತೀವ್ರ ಶೀತವಿದ್ದಾಗ ನಿಮ್ಮ ಕೈಬೆರಳುಗಳು, ಕೈಗಳು ಮತ್ತು ಕಾಲುಗಳ ರಕ್ತ ಪರಿಚಲನೆ ಸುಧಾರಿಸಲು ಮಸಾಜ್ ಮಾಡಲು ಪ್ರಯತ್ನಿಸಿ. ಇದು ಕಾಯಂ ಪರಿಹಾರವಾಗಲಾರದು. ಆದರೆ ಬೆರಳುಗಳ ಮಂಜಾಗುವುದನ್ನು ತಪ್ಪಿಸಲು ಸಹಾಯಕಾರಿಯಾದೀತು. • ಉಪ್ಪು, ಕೊಬ್ಬಿನಂಶ ಮತ್ತು ಸಕ್ಕರೆ ಹೆಚ್ಚಿರುವ ಸಂಸ್ಕರಿತ ಆಹಾರದ ಬದಲಿಗೆ ಗೋಧಿಯ ಬ್ರೆಡ್‍ಗಳು, ಕೆಂಪಕ್ಕಿ ಮತ್ತು ಬೇಯಿಸಿದ ಬೀನ್ಸ್ ನಂತಹ ಕಾರ್ಬೊಹೈಡ್ರೇಟ್ಸ್‍ಗಳಿರುವ ಆಹಾರ ಸೇವಿಸಿ. ವಿಟಾಮಿನ್ ಸಿ ಮತ್ತು ವಿಟಾಮಿನ್ ಇ ಇರುವ ಆಹಾರವೂ ರಕ್ತ ಪರಿಚಲನೆಗೆ ಸಹಾಯ ಮಾಡುತ್ತವೆ. • ವೃದ್ಧರು ಗಟ್ಟಿಯಾದ ಸೋಲ್ ಹೊಂದಿರುವ ಬೂಟ್‍ಗಳನ್ನು ಬಳಸುವ ಮೂಲಕ ಜಾರುವಿಕೆ ಮತ್ತು ಬೀಳುವಿಕೆಯನ್ನು ತಡೆಯಬಹುದು • ಅಸ್ತಮಾ ದಾಳಿಯನ್ನು ತಡೆಯಲು ಇರುವ ಒಂದೇ ಮಾರ್ಗವೆಂದರೆ ಮನೆಯ ಒಳಗೇ ಇರುವುದು ಅಥವಾ ಬಾಯಿಗೆ ಸ್ಕಾರ್ಫ್ ಕಟ್ಟಿಕೊಳ್ಳುವುದಾಗಿದೆ. ಇದರಿಂದ ಶೀತಗಾಳಿಯು ದೇಹಕ್ಕೆ ಉಸಿರಾಟದ ಮೂಲಕ ಒಳಗೆ ಹೋಗುವುದಿಲ್ಲ. ಬಾಯಿಯ ಬದಲಿಗೆ ಮೂಗಿನಿಂದ ಉಸಿರಾಟ ಮಾಡುವುದರಿಂದ ಗಾಳಿ ಬೆಚ್ಚಗಾಗುವುದಕ್ಕೆ ಸಹಾಯವಾಗುತ್ತದೆ.