ಭಾರತ ಹುಣ್ಣಿಮೆ ಬೆಳಗಾವಿಯಿಂದ 70 ಕಿ.ಮೀ. ದೂರದಲ್ಲಿರುವ ಸವದತ್ತಿ ಯಲ್ಲಮ್ಮ ಅಥವಾ ರೇಣುಕಾ ಯಲ್ಲಮ್ಮ ದೇಗುಲ ಪುರಾತನವಾದ ಶಕ್ತಿಕೇಂದ್ರಗಳಲ್ಲೊಂದು. ಚಾಲುಕ್ಯ ಮತ್ತು ರಾಷ್ಟ್ರಕೂಟ ಶೈಲಿಯಲ್ಲಿದ್ದು, ಸುಂದರ ಕೆತ್ತನೆಗಳಿಂದ ಕೂಡಿದೆ. ಜೈನ ವಾಸ್ತುಶಿಲ್ಪಸಮ್ಮಿಳತ ಇದರ ಇನ್ನೊಂದು ವಿಶೇಷ. ಈ ದೇವಸ್ಥಾನವನ್ನು ರಾಯಭಾಗದ ಬೊಮಪ್ಪ ನಾಯಕ್ 1514ರಲ್ಲಿ ನಿರ್ಮಿಸಿದರಂತೆ. ಮಹಾದ್ವಾರದ ಒಳಗೆ ಗಣೇಶ, ಮಲ್ಲಿಕಾರ್ಜುನ, ಏಕನಾಥ, ಪರಶುರಾಮ, ಸಿದ್ದೇಶ್ವರ... ಹೀಗೆ ಹಲವು ದೇಗುಲಗಳಿವೆ. ಇಲ್ಲಿ ನಡೆಯುವ ಜಾತ್ರೆಗೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಹಾಗೂ ರಾಜ್ಯದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಎಲ್ಲಮ್ಮನ ಗುಡ್ಡದಲ್ಲಿ ಸಿದ್ದರಕೊಳ್ಳ, ಪರಸಗಡಕೊಳ್ಳ, ಗೋರವನಕೊಳ್ಳ, ತಮ್ಮಣ್ಣನಕೊಳ್ಳ, ಮಾವಿನಕೊಳ್ಳ, ಸಂಗಪ್ಪನಕೊಳ್ಳ, ಬೋರೇಸಾಬನ ಕೊಳ್ಳ... ಒಟ್ಟು ಏಳು ಕೊಳ್ಳಗಳಿವೆ. ಹಾಗೆಯೇ ಮುರಗೋಡ, ಸೊಗಲ, ನವಿಲುತೀರ್ಥ, ಪರಸಗಡ, ಸವದತ್ತಿ, ಮುನವಳ್ಳಿ, ಎಲ್ಲಮ್ಮನಗುಡ್ಡ ಹೀಗೆ ಏಳು (ಬೆಟ್ಟ) ಪರ್ವತಗಳೂ ಇಲ್ಲಿವೆ. ಸವದತ್ತಿ ಊರಿನಿಂದ 5 ಕಿ.ಮೀ. ದೂರದಲ್ಲಿ ಸಿದ್ದಾಂಚಲ ಪರ್ವತದ ಮೇಲೆ ಸ್ಥಾಪಿತಗೊಂಡಿದೆ ಯಲ್ಲಮ್ಮನಗುಡ್ಡ. ಭಕ್ತರಿಗೆ ವಸತಿ ಸೌಕರ್ಯವೂ ಉಂಟು. ದೇಗುಲದ ಮುಂದೆ ದೊಡ್ಡ ದೀಪ ಸ್ತಂಭ ಆಕರ್ಷಕ. ಬಲಭಾಗಕ್ಕೆ ಚಿಕ್ಕ ದ್ವಾರ. ಅಲ್ಲಿಂದ 5 ನಿಮಿಷ ನಡೆದರೆ ವಿಶಾಲ ನೀರಿನ ಹೊಂಡಗಳ ದರ್ಶನ. ಇಲ್ಲೊಂದು ಪುಟ್ಟ ಹೊಂಡವಿದ್ದು, ಇಲ್ಲಿ ಮಲಪ್ರಭಾ ನದಿಯ ನೀರು ಉದ್ಭವವಾಗುತ್ತದೆ. ಇದು 'ಎಣ್ಣೆಹೊಂಡ' ಅಂತಲೇ ಪ್ರಸಿದ್ಧಿ. ಇಲ್ಲಿ ನಡೆಯುವ 'ಭಾರತ ಹುಣ್ಣಿಮೆ' ತುಂಬಾ ಹೆಸರುವಾಸಿ. ಪ್ರತಿವರ್ಷ ಫೆಬ್ರವರಿಯಲ್ಲಿ ನಡೆಯುವ ಈ ಭಾರತ ಹುಣ್ಣಿಮೆಗೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಹಳದಿ ಭಂಡಾರ ತೂರಿ ಉಧೋ ಉಧೋ ಎನ್ನುತ್ತಾ ಜೋಗಮ್ಮ, ಜೋಗಪ್ಪರು ಚೌಡಕಿ ಬಾರಿಸುತ್ತಾ, ಹಾಡುತ್ತಾ, ಕುಣಿಯುತ್ತಾ ತೆರಳುವುದು ಕಣ್ಣಿಗೆ ಆಕರ್ಷಕ. 'ಭಂಡಾರ ಹಾಕುವುದು' ಈ ಹುಣ್ಣಿಮೆಯ ವಿಶೇಷತೆ. ವರ್ಷದಲ್ಲಿ 2 ಬಾರಿ ನಡೆಯುವ ಜಾತ್ರೆಯಲ್ಲಿ ಹರಕೆ ಹೊತ್ತವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಚಿಕ್ಕಚಿಕ್ಕ ಮಕ್ಕಳನ್ನು ಜೋಗತಿಯಾಗಿಸಲಾಗುತ್ತದೆ. ಹುಡುಗಿಯರು ಯಲ್ಲಮ್ಮ ದೇವಿಯ ಸೇವೆ ಮಾಡುತ್ತಾ ದಿನ ದೂಡಬೇಕು. ಇವರಿಗೆ ಜೋಗವ್ವ ಎಂತಲೂ ಕರೆಯಲಾಗುತ್ತದೆ. ಇದೇ ರೀತಿ ಹುಡುಗರನ್ನು ದೇವಿಯ ಸೇವೆಗೆ ಅರ್ಪಿಸಿದರೆ ಅವರಿಗೆ ಜೋಗಪ್ಪ ಎಂತಲೂ ಕರೆಯಲಾಗುತ್ತದೆ. ಈ ಎಲ್ಲ ಜೋಗಪ್ಪ, ಜೋಗವ್ವರು ಬುಟ್ಟಿಯಲ್ಲಿ ಯಲ್ಲಮ್ಮನ ಬೆಳ್ಳಿ ಮುಖವಾಡ, ಚಿಕ್ಕದಾದ ಚೀಲದಲ್ಲಿ ಭಂಡಾರವಿಟ್ಟುಕೊಂಡು, ಕೈಯಲ್ಲಿ ಚೌಡಕಿ ಬಾರಿಸುತ್ತಾ ಯಾವಾಗಲೂ ಹಾಡು, ಭಜನೆಯಲ್ಲಿಯೇ ನಿರತರಾಗಿರುತ್ತಾರೆ. ಗುಡ್ಡದಲ್ಲಿ ಎಲ್ಲಿ ನೋಡಿದರೂ ಎತ್ತಿನ ಬಂಡಿಗಳದ್ದೇ ಸಾಮ್ರಾಜ್ಯ. ಈ ಜಾತ್ರೆಯ ವೈಭವ ನೋಡಲು ವಿದೇಶಿಯರೂ ಆಗಮಿಸುವುದು ವಿಶೇಷ. - ಚಿತ್ರ-ಲೇಖನ: ಆಶಾ ಎಸ್.ಕೆ.