ಫತೇಪುರಾಣ ಆಗ್ರಾದಿಂದ 30 ಕಿ.ಮೀ. ದೂದರಲ್ಲಿರುವ 'ಫತೇಪುರ್ ಸಿಕ್ರಿ' ಅಕ್ಬರ್‌ನ ಕನಸಿನ ನಗರ. ಉತ್ತರ ಭಾರತದ ಪ್ರವಾಸಿ ತಾಣಗಳಲ್ಲಿ ಮರೆಯಲಾಗದಂಥ ಸ್ಥಲಗಳಲ್ಲಿ 'ಫತೇಪುರ್ ಸಿಕ್ರಿ'ಯೂ ಒಂದು. ಅಕ್ಬರ್ ಚಿತ್ತೂರು ಮತ್ತು ರಣಥಂಬೋರ್ ಗೆಲುವಿನ ಬಳಿಕ ಮುತುವರ್ಜಿ ವಹಿಸಿ 15 ವರ್ಷಗಳ ಕಾಲ ಈ ನಗರವನ್ನು ನಿರ್ಮಿಸಿ ರಾಜಧಾನಿಯನ್ನು ಫತೇಪುರ್ ಸಿಕ್ರಿಗೆ ಬದಲಾಯಿಸಿದ. ಇದು ಗೆಲುವಿನ ಸಂಕೇತವಾಗಿಯೂ, ಸಂತ ಸಲೀಂ ಚಿಸ್ತಿಯವರ ಸ್ಮರಣಾರ್ಥವಾಗಿಯೂ ಹಾಗೂ ರಾಜಧಾನಿಯನ್ನು ಬದಲಾಯಿಸುವ ಉದ್ದೇಶದಿಂದ ನಿರ್ಮಾಣವಾದ ನಗರ. ಕ್ರಿ.ಶ. 1571-1585ರವರೆಗೆ ಇದು ಮೊಘಲರ ರಾಜಧಾನಿ. ಈ ಕೋಟೆಯು ಇಂಡೋ-ಪರ್ಷಿಯನ್ ಶೈಲಿಯಲ್ಲಿ ನಿರ್ಮಾಣಗೊಂಡು ಅದ್ಭುತ ಶಿಲ್ಪಕಲಾ ವೈಭವದಿಂದ ಮೆರೆಯುತ್ತಿದೆ. ಫತೇಪುರ ಮತ್ತು ಆಗ್ರಾಗಳಲ್ಲಿ ಕೆಂಪು ಮರಳು ಶಿಲೆ ಧಾರಾಳವಾಗಿ ಲಭ್ಯವಿದ್ದುದರಿಂದ ಕಟ್ಟಗಳಿಗೆ ಇದನ್ನೇ ಬಳಸಲಾಗಿದೆ. 3 ಕಿ.ಮೀ. ಉದ್ದ, 1 ಕಿ.ಮೀ ಅಗಲ ವಿಸ್ತೀರ್ಣ ಹೊಂದಿರುವ ಇದು, ಮೂರು ಕಡೆಗಳಲ್ಲಿ ಎತ್ತರವಾದ ಗೋಡೆಗಳು ಒಂದು ಕಡೆ ಕೃತಕವಾದ ಸರೋವರದಿಂದ ಆವೃತವಾಗಿದೆ. ಬುಲಂದ್ ದರ್ವಾಜಾ ಅಕ್ಬರ್ ತನ್ನ ಗುಜರಾತ್ ಅಕ್ರಮಣದ ಯಶಸ್ಸಿನ ನೆನಪಿಗೆ ಇಲ್ಲಿನ ಪ್ರಮುಖ ಬೃಹತ್ ಹೆಬ್ಬಾಗಿಲಾದ 'ಬುಲಂದ್ ದರ್ವಾಜ' ನಿರ್ಮಿಸಿದ. 176 ಅಡಿ ಎತ್ತರದ ಪ್ರಮುಖ ವಿಜಯ ದ್ವಾರವಿದು. ನಮ್ಮ ದೇಶದ ಹೆಬ್ಬಾಗಿಲುಗಳಲೆಲ್ಲ ವಾಸ್ತು ಶಿಲ್ಪದ ದೃಷ್ಟಿಯಿಂದ ಇದು ಮಹೋನ್ನತವೆನಿಸಿದೆ. ಜಾಮಿ ಮಸೀದಿಯು ಸಂಪೂರ್ಣವಾಗಿ ಅಮೃತ ಶಿಲೆಯಿಂದ ನಿರ್ಮಾಣಗೊಂಡಿದೆ. ಸಂತ ಸಲೀಂ ಚಿಸ್ತಿಯವರ ಬಗ್ಗೆ ಅಪಾರ ಗೌರವವಿದ್ದ ಅಕ್ಬರನು ತನ್ನ ಮಗನಿಗೆ ಅವರ ಹೆಸರನ್ನು ಇಡುವುದರೊಂದಿಗೆ ಮಸೀದಿಯ ಒಳಗಿನ ಆವರಣದಲ್ಲಿ ಸಂಪೂರ್ಣ ಅಮೃತ ಶಿಲೆಯಿಂದ ಅವರ ಸಮಾಧಿ ನಿರ್ಮಿಸಿದ್ದಾನೆ. ಇದು ಗುಜರಾತಿನ ಸುಲ್ತಾನರ ವಾಸ್ತುಶೈಲಿಯನ್ನು ಹೊಂದಿದೆ. ಪುಂಚಮಹಲ್-ಇದು ತೆರೆದ ಪ್ರಾಂಗಣದ ಐದು ಅಂತಸ್ತುಳ್ಳ ಪಿರಾಮಿಡ್ ಆಕಾರದ ಕಟ್ಟಡ. ನೆಲದ ಹಂತದಲ್ಲಿ 84 ಸ್ತಂಭಗಳನ್ನು ಹೊಂದಿದ್ದು, ಮೇಲಕ್ಕೆ ಹೋದಂತೆ ಕಡಿಮೆಯಾಗುತ್ತಾ ಹೋಗಿವೆ. ತುದಿಯಲ್ಲಿ ನಾಲ್ಕು ಸ್ತಂಭಗಳಿದ್ದು ಅವುಗಳ ಮೇಲೆ ಹೂಬಳ್ಳಿ, ಗಂಟೆ ಮತ್ತಿತರ ಚಿತ್ರಗಳಿವೆ. ಅರಮನೆ ವಿಶಾಲವಾಗಿದ್ದು, ಗಿಡಮರ, ಚಿಟ್ಟೆಗಳು ಮತ್ತು ಸಾಂಪ್ರದಾಯಿಕ ಆಕೃತಿಗಳಿವೆ. ನೌಬತ್ ಖಾನ್ ಸಂಗೀತಗಾರರಿರುವ ಕಟ್ಟವಾಗಿದ್ದು, ಚಕ್ರವರ್ತಿ ಆಸ್ಥಾನಕ್ಕೆ ಇತರ ಮಹತ್ವದ ಕಾರ್ಯಗಳಿಗೆ ಹೊರಟಾಗ ಸಂಗೀತ ವಾದ್ಯಗಳು ಮೊಳಗುತ್ತಿದ್ದವು. ಮುಸ್ಲಿಂ ಪತ್ನಿಯರ ಅಂತಃಪುರ. ಗುಜರಾತ್ ವಾಸ್ತು ಶಿಲ್ಪದ ರಜಪೂತ್ ಪತ್ನಿಯರ ನಿವಾಸ, ಮತ್ತು ಜೋಧಾಬಾಯಿ ಮಹಲ್ ಮುಂತಾದ ಭವ್ಯ ಕಟ್ಟಗಳಿವೆ. ದಫ್ತರ್ ಖಾನಾ, ಟರ್ಕಿ ಶೈಲಿಯ ಸ್ನಾನ ಗೃಹಗಳು, ಗ್ರಂಥಾಲಯ, ಖಜಾನ, ಕಲ್ಯಾಣ್ ಮಹಲ್, ತಕ್ಸಲ್ ಕಟ್ಟಡಗಳು ಎಲ್ಲವೂ ಮನಸೂರೆಗೊಳ್ಳುತ್ತವೆ. -ಸೀತಾ ಎಸ್.ನಾರಾಯಣ