ಸಗರನ ಕೋಟೆ ಮನೆ ನಿರ್ಮಾಣಕ್ಕೆ ಬಳಸುವ ಕಲ್ಲುಗಳ ಬಗ್ಗೆ ಅರಿವಿರುವವರಿಗೆ ಶಹಾಪುರ ಗೊತ್ತು. ಉಳಿದಂತೆ ಈ ಊರು ಬಹುತೇಕ ಅಪರಿಚಿತ.... ಮನೆ ನಿರ್ಮಾಣಕ್ಕೆ ಬಳಸುವ ಕಲ್ಲುಗಳ ಬಗ್ಗೆ ಅರಿವಿರುವವರಿಗೆ ಶಹಾಪುರ ಗೊತ್ತು. ಉಳಿದಂತೆ ಈ ಊರು ಬಹುತೇಕ ಅಪರಿಚಿತ. ಇಲ್ಲಿರುವ ಎಂಟು ಸುತ್ತಿನ ಕೋಟೆ ಎನ್ನುವ ಅದ್ಭುತವಂತೂ ಹೊರಗಿನವರಿರಲಿ, ಈ ಭಾಗದವರಿಗೇ ಅಷ್ಟಾಗಿ ಗೊತ್ತಿಲ್ಲ. ಶಹಾಪುರ ಕೋಟೆಗೆ ಪೌರಾಣಿಕ ಹಿನ್ನಲೆ ಇದೆ. ಸಗರ ಚಕ್ರವರ್ತಿ ಆಳಿದ ನಾಡು ಇದೆಂದೂ, ಇಲ್ಲಿಗೆ ಸಮೀಪದ ಬೆಟ್ಟ ಸಗರಾದ್ರಿ ಬೆಟ್ಟ ಎಂಬ ಐತಿಹ್ಯವಿದೆ. ಶಹಾಪುರ ಕೋಟೆಯನ್ನು ಸಗರ ಚಕ್ರವರ್ತಿಯೇ ನಿರ್ಮಿಸಿದ್ದು ಎಂದು ಹಲವಾರು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ಕೋಟೆ ಕಲ್ಯಾಣ ಚಾಲುಕ್ಯರ ಕಾಲದ್ದು ಎನ್ನುವ ವಾದವೂ ಇದೆ. ಆದರೆ ಆದಿಲ್ ಶಾಹಿಗಳಿಂದ ಕೋಟೆ ಬಲಗೊಂಡಿದೆ ಎನ್ನುವುದು ಇತಿಹಾಸದ ಸತ್ಯ. ಸುರಪುರ ನಾಯಕರ ಕಾಲದಲ್ಲಿ ಇದಕ್ಕೆ ಸುತ್ತು ಸೇರಿಸಿ ಬಲವಾದ ದ್ವಾರಗಳನ್ನು ನಿರ್ಮಿಸಿದವರು ರಾಜಾ ವೆಂಕಟಪ್ಪ ನಾಯಕರು. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ಕೋಟೆ ನೆಲ ಮಟ್ಟದಿಂದ 600 ಅಡಿ ಎತ್ತರದಲ್ಲಿದೆ. ಇದು ಎಂಟು ಸುತ್ತಿನ ಗಿರಿದುರ್ಗವಾಗಿದ್ದು ಅತೀ ಉದ್ದನೆಯ ಚಕ್ರವ್ಯೂಹದ ಕೋಟೆ ಎನಿಸಿದೆ. ಈ ಬೆಟ್ಟದಲ್ಲಿ ಹಲವಾರು ಪವಿತ್ರ ತಾಣಗಳಿವೆ. ಚರಬಸವೇಶ್ವರ ಗದ್ದುಗೆ, ಮೌನೇಶ್ವರ ಅನುಷ್ಠಾನ ಸ್ಥಳ, ಗವಿ ರಂಗನಾಥ, ಸಿದ್ದಲಿಂಗೇಶ್ವರ, ಪಾಂಡವರ ಕಲ್ಲು, ಭೀಮನ ಗವಿ, ದಿಗ್ಗಿ ಸಂಗಮನಾಥ ಮುಂತಾದ ದೇವಾಲಯಗಳಿವೆ. ಚರಬಸವೇಶ್ವರ ದೇವಾಲಯ ಸುಂದರ ವಿನ್ಯಾಸಗಳಿಂದ ಕೂಡಿದೆ. ಚಾಲುಕ್ಯರ ಕಾಲಕ್ಕೆ ಸೇರಿದ 18 ಕೈಗಳಿರುವ ಚಾಮುಂಡಿಯ ಉಗಮ ಮೂರ್ತಿ ಇಲ್ಲಿದೆ. ವಿಶ್ವಕರ್ಮ ಸಮಾಜದವರ ಏಕ ದಂಡಿಗೆ ಮಠದಲ್ಲಿ ವಿಜಯನಗರ (ಕೃಷ್ಣದೇವರಾಯ) ಕಾಲದ ತಾಮ್ರ ಶಾಸನಗಳು ದೊರೆತಿವೆ. ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಶಹಾಪುರದಿಂದ ಭೀಮರಾಯನಗುಡಿ ಮಾರ್ಗದ ರಸ್ತೆಯಲ್ಲಿ ನಿಂತು ನೋಡಿದರೆ ಸಗರಾದ್ರಿ ಪರ್ವತ ಶ್ರೇಣಿಯಲ್ಲಿ ಮುಗಿಲಿನತ್ತ ಮುಖ ಮಾಡಿ ಅಂಗಾತವಾಗಿ ಬುದ್ದ ಮಲಗಿರುವಂತೆ ಕಾಣುತ್ತದೆ. ಶಹಾಪುರ ಪ್ರವಾಸಿ ತಾಣವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿವೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ಜತೆ ಸರ್ಕಾರದ ಪ್ರವಾಸೋದ್ಯಮ ಇಲಾಖೆಯೂ ಅನಾದರ ಹೊಂದಿರುವುದರಿಂದ ಪ್ರವಾಸಿ ತಾಣವಾಗುವುದು ಕನಸಿನ ಗಂಟಾಗಿಯೇ ಉಳಿದಿದೆ. - ರಾಜಶೇಖರ ಜೆ. ವನದುರ್ಗಾ