ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳನ್ನೇ ನಂಬಿ ಕುಳಿತಿದ್ದ ಹೋಂಡಾ, 'ಅಮೇಜ್‌' ಮೂಲಕ ಡೀಸೆಲ್ ಕಾರು ಪರಿಚಯಿಸಿದೆ. 'ತಡವಾಗಿ ಬಂದರೂ ಜಬರ್ದಸ್ತ್ ಆಗಿ ಬಂತು' (ದೇರ್ ಆಯೆ, ಮಗರ್ ದುರುಸ್ತ್ ಆಯೇ) ಎಂಬ ಮಾತು ಹೋಂಡಾ ಕಂಪನಿಗೆ ಅತ್ಯಂತ ಸೂಕ್ತವಾಗಿ ಹೋಲುತ್ತದೆ. ಡೀಸೆಲ್ ಕಾರುಗಳ ಮಾರುಕಟ್ಟೆ ಕಾರು ಉತ್ಪಾದಕರ ನಿರೀಕ್ಷೆಯನ್ನೂ ಮೀರಿ ಬೆಳೆಯುತ್ತಿದೆ. ಪೆಟ್ರೋಲ್ ಕಾರುಗಳು ಮಾರಾಟವಾಗದೇ ಉಳಿಯುತ್ತಿವೆ. ಹೀಗಿದ್ದರೂ ಹೋಂಡಾ ಕಂಪನಿ ಭಾರತದಲ್ಲಿ ಒಂದೇ ಒಂದು ಡೀಸೆಲ್ ಕಾರನ್ನೂ ಮಾರುಕಟ್ಟೆಗೆ ಪರಿಚಯಿಸಿರಲಿಲ್ಲ. ಪೆಟ್ರೋಲ್ ಕಾರುಗಳನ್ನೇ ನೆಚ್ಚಿಕೊಂಡು ಕುಳಿತಿತ್ತು. ಆದರೆ ಭಾರತೀಯ ಗ್ರಾಹಕರ ಡೀಸೆಲ್ ಪ್ರೀತಿಗೆ ಹೋಂಡಾ ಕಂಪನಿ ತಲೆಬಾಗಲೇಬೇಕಾಯಿತು. ಅಂತೂ ಹೊಂಡಾ ಕಂಪನಿ 'ಅಮೇಜ್‌' ಹೆಸರಿನ ಕಾರಿನ ಮೂಲಕ ಭರ್ಜರಿ ರಂಗಪ್ರವೇಶ ಮಾಡಿದೆ. ಹೊಸ ತಂತ್ರಜ್ಞಾನದ 1.5 ಲೀ. ಎಂಜಿನ್, ಪ್ರತಿ ಲೀಟರ್ ಡೀಸೆಲ್‌ಗೆ 23-25 ಕಿ.ಮೀ., ಆಕರ್ಷಕ ಆಂತರಿಕ ಮತ್ತು ಬಾಹ್ಯ ವಿನ್ಯಾಸ, ಅತ್ಯಂತ ಆರಾಮದಾಯಕ ಸೀಟುಗಳು, ತನ್ನ ಪೈಪೋಟಿಯ ಕಾರಿಗಿಂತ ಹೆಚ್ಚು ಸ್ಥಳಾವಕಾಶ ಮತ್ತು ಅದಕ್ಕೆ ಸರಿಸಮನಾದ ದರದ ಮೂಲಕ ಗ್ರಾಹಕರನ್ನು ಸೆಳೆಯಲು ಸಿದ್ಧವಾಗಿದೆ. ಹೋಂಡಾ ಸಂಸ್ಥೆ ಕಾರುಗಳು ಗುಣಮಟ್ಟಕ್ಕೆ ಹೆಸರುವಾಸಿ. ಆದರೆ ಹೋಂಡಾ ಕಾರುಗಳ ಒಂದೇ ಒಂದು ಸಮಸ್ಯೆಯೆಂದರೆ ಗ್ರೌಂಡ್ ಕ್ಲಿಯರೆನ್ಸ್. ಹಿಮಾಲಯಕ್ಕೆ ಪೈಪೋಟಿ ನೀಡುವ ಬೆಂಗಳೂರಿನ ರೋಡ್‌ಹಂಪ್‌ಗಳನ್ನು (ವೇಗ ನಿಯಂತ್ರಕ) ದಾಟುವಾಗ ಮಾಲೀಕರ ಹೃದಯ ಬಾಯಿಗೆ ಬಂದಂತಾಗುತ್ತದೆ. 'ಅಮೇಜ್‌'ನಲ್ಲಿ ಕೂಡ ಇದನ್ನು ಸರಿಪಡಿಸಲು ಹೋಂಡಾ ಕಂಪನಿ ವಿಫಲವಾಗಿದೆ. ಇದರಿಂದಾಗಿ 5 ಜನ ಪ್ರಯಾಣಿಕರು ಕುಳಿತು, ಹಿಂದೆ ಡಿಕ್ಕಿಯಲ್ಲಿ ಒಂದಷ್ಟು ಸಾಮಾನು ಇರಿಸಿಬಿಟ್ಟರೆ, ಶಬ್ದ ಬಾರದೇ ಹಂಪ್‌ಗಳನ್ನು ದಾಟುವುದು ಅಸಾಧ್ಯ ಅನಿಸುತ್ತದೆ. ಇದೊಂದು ಅಂಶವನ್ನು ಬಿಟ್ಟರೆ ಉಳಿದಂತೆ ಅಮೇಜ್ ಉತ್ತಮವಾದ ಕಾರು. ಹೋಂಡಾ ಬ್ರಯೋ ಎಂಬ ಸಣ್ಣ ಕಾರು ಈಗಾಗಲೇ ಮಾರುಕಟ್ಟೆಯಲ್ಲಿದೆ. ಅದೇ ಕಾರಿನ ಮುಂಭಾಗ ಇರಿಸಿಕೊಂಡು, ಹಿಂಭಾಗದಲ್ಲಿ ಡಿಕ್ಕಿ ಇರಿಸಲಾಗಿದೆ. ಕಾರಿನ ಮುಂಭಾಗ ಬ್ರಯೋ ಕಾರಿನ ಮುಂಭಾಗವನ್ನು ಹೋಲುತ್ತದಾದರೂ, ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕಾರನ್ನು ರೂಪಿಸುವಾಗ ಡಿಕ್ಕಿಯ ಅಂದಕ್ಕೂ ಹೆಚ್ಚು ಒತ್ತು ನೀಡಲಾಗಿದೆ. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಸ್ವಿಫ್ಟ್ ಡಿಸಾಯರ್ ಕಾರಿಗೆ ಅತ್ಯುತ್ತಮ ಪೈಪೋಟಿ ನೀಡುವ ಕಾರನ್ನು ಹೋಂಡಾ ಕಂಪನಿ ಬಿಡುಗಡೆ ಮಾಡಿದೆ. ಹಲವಾರು ಅಂಶಗಳಲ್ಲಿ ಹೋಂಡಾ ಅಮೇಜ್ ಕಾರು ಸ್ವಿಫ್ಟ್ ಡಿಸಾಯರ್‌ಗಿಂತ ಒಂದು ಹೆಜ್ಜೆ ಮುಂದಿದೆ. ಆದರೆ ಮಲ್ಟಿಜೆಟ್ ಫಿಯೆಟ್ ಎಂಜಿನ್‌ನ ಕಾರ್ಯಕ್ಷಮತೆಯನ್ನು ಮೀರಿಸಲು ಹೋಂಡಾ ಸಂಸ್ಥೆಯ ಐಡಿಟೆಕ್ ಎಂಜಿನ್ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕು. ಡಿಸಾಯರ್ ವರ್ಸಸ್ ಅಮೇಜ್ ಸದ್ಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಡಿಸಾಯರ್ ಮತ್ತು ಹೋಂಡಾ ಸಂಸ್ಥೆಯ ಅಮೇಜ್‌ಗೆ ನೇರ ಸ್ಪರ್ಧೆ ಉಂಟಾಗಿದೆ. ಸ್ವಿಫ್ಟ್ ಡಿಸಾಯರ್‌ಗೆ ಈಗಾಗಲೇ ಗ್ರಾಹಕರ ಮೆಚ್ಚುಗೆ ಗಳಿಸಿದ ಹೆಮ್ಮೆಯಿದ್ದರೆ, ಅಮೇಜ್‌ಗೆ ಹೊಸದು ಎಂಬ ಆಕರ್ಷಣೆಯಿದೆ. ಡಿಸಾಯರ್‌ನಲ್ಲಿರುವ ಫಿಯೆಟ್ ಮಲ್ಟಿಜೆಟ್ ಎಂಜಿನ್ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದ್ದರೆ, ಅಮೇಜ್‌ನಲ್ಲಿರುವ ಐಡಿಟೆಕ್ ಎಂಜಿನ್ ಉತ್ತಮ ಮೈಲೇಜ್‌ನ ಆಕರ್ಷಣೆ ಹೊಂದಿದೆ. ಡಿಸಾಯರ್ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ (170ಎಂಎಂ) ಹೊಂದಿದ್ದರೆ, ಅಮೇಜ್ ಉತ್ತಮ ಸ್ಥಳಾವಕಾಶ ಹೊಂದಿದೆ. ಡಿಸಾಯರ್‌ನಲ್ಲಿ 315 ಲೀ. ಡಿಕ್ಕಿ ಜಾಗ ಹೊಂದಿದ್ದರೆ, ಅಮೇಜ್ 400 ಲೀ. ಡಿಕ್ಕಿ ಸ್ಥಳಾವಕಾಶ ಹೊಂದಿದೆ. ಸೀಟುಗಳ ಹೊಸ ವಿನ್ಯಾಸದ ಮೂಲಕ ಹಿಂಬದಿ ಸೀಟಿನ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸಲಾಗಿದೆ. ಆದರೆ ಡಿಸಾಯರ್‌ನಲ್ಲಿರುನವ ಕ್ಲೈಮೆಟ್ ಕಂಟ್ರೋಲ್ ಮುಂತಾದ ಆಯ್ಕೆಗಳು ಅಮೇಜ್‌ನಲ್ಲಿಲ್ಲ. ಸ್ವಿಫ್ಟ್ ಡಿಸಾಯರ್ ಕಾರಿನ ಹಿಂಭಾಗ ಅಪೂರ್ಣವಾಗಿ ಮುಕ್ತಾಯಗೊಂಡಂತಿದೆ. ಅಮೇಜ್‌ನಲ್ಲಿ ಹೀಗಾಗದಂತೆ ಹೋಂಡಾ ಸಂಸ್ಥೆ ಕಾಳಜಿ ವಹಿಸಿದ್ದು, ಹಿಂಭಾಗದ ಸೌಂದರ್ಯಕ್ಕೂ ಒತ್ತು ನೀಡಿದೆ. ಆದರೆ ಡಿಸಾಯರ್‌ನಲ್ಲಿರುವ ಫಿಯೆಟ್ ಮಲ್ಟಿಜೆಟ್ ಎಂಜಿನ್ (1.3 ಲೀ.) ಕಾರ್ಯಕ್ಷಮತೆಯಲ್ಲಿ ಮುಂದಿದೆ. ಅಮೇಜ್‌ನಲ್ಲಿ 1.5 ಲೀ. ಎಂಜಿನ್ ಇದ್ದರೂ, ಆರಂಭದಿಂದ 100 ಕಿ.ಮೀ. (0-100 ಕಿ.ಮೀ) ವೇಗ ತಲುಪಲು ಡಿಸಾಯರ್‌ಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಇದರರ್ಥ ಆರಂಭಿಕ ವೇಗ ಪಡೆಯುವಲ್ಲಿ ಡಿಸಾಯರ್ ಮುಂದಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಪದೇ ಪದೇ ವಾಹನ ನಿಧಾನಗೊಳಿಸಿ, ವೇಗ ಹೆಚ್ಚಿಸುವ ಸಂದರ್ಭಗಳಲ್ಲಿ ಅಮೇಜ್ ಕೊಂಚ ಹಿಂದೆಬೀಳಬಹುದು. ಆದರೆ ಹೋಂಡಾ ಅಮೇಜ್‌ನ ಎಂಜಿನ್‌ನಲ್ಲಿ ಇಂಧನ ಕ್ಷಮತೆಗೆ ಹೆಚ್ಚು ಒತ್ತು ನೀಡಲಾಗಿದೆ. ಸ್ವಿಫ್ಟ್ ಡಿಸಾಯರ್ ಒಟ್ಟು ಭಾರ 1080 ಕೆಜಿ ಇದ್ದರೆ, ಅಮೇಜ್‌ನ ಭಾರ 965 ಕೆಜಿ ಭಾರವಿದೆ. ಇದು ಕೂಡ ಇಂಧನ ಕ್ಷಮತೆ ಹೆಚ್ಚಲು ಕಾರಣ. ಮಾರುತಿ ಸುಜುಕಿ ಮಾರಾಟ ನಂತರದ ಸೇವೆಯನ್ನು ಸರಿಗಟ್ಟಲು ಹೋಂಡಾ ಸಂಸ್ಥೆಗೆ ಕಷ್ಟವಾಗಬಹುದು. ಹೋಂಡಾ ಸಂಸ್ಥೆ ಉತ್ತಮ ಸೇವಾಕೇಂದ್ರಗಳನ್ನು ಹೊಂದಿದೆಯಾದರೂ, ಸಂಖ್ಯೆಯಲ್ಲಿ ಮಾರುತಿ ಕಂಪನಿಯನ್ನು ಸರಿಗಟ್ಟಲು ಸಾಧ್ಯವಿಲ್ಲ. -ವಕ್ರದಂತ