ಬ್ರಹ್ಮ ಗಿರಿ ನಿಶ್ಶಬ್ದ! ಈ ಹೆಬ್ಬಾಗಿಲು ಶಂಖ ನಾದ ಹೊರಡಿಸುವ ಸಮಯ, ಸಿಂಹದಂತೆ ಗರ್ಜಿಸುವ ಸಮಯ... ಕಿವಿಗೊಟ್ಟು ಆಲಿಸಿ... ಹೌದು. ಮೊಳಕಾಲ್ಮುರು ತಾಲೂಕಿನ ಅಶೋಕ ಸಿದ್ದಾಪುರ ಸಮೀಪದ ಐತಿಹಾಸಿಕ ಬ್ರಹ್ಮಗಿರಿ ಬೆಟ್ಟ ಉತ್ತಮ ಪ್ರವಾಸಿ ತಾಣವಾಗಿದ್ದು, ಇಲ್ಲಿನ ಸಿದ್ದೇಶ್ವರ ಮಠದ ಹೆಬ್ಬಾಗಿಲು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸುವಂಥ ವಿಶೇಷ ಶಬ್ದ ಹೊಮ್ಮಿಸುವ ಮೂಲಕ ಕುತೂಹಲದ ಕೇಂದ್ರವಾಗಿದೆ. ಮೌರ್ಯ ಸಾಮ್ರಾಜ್ಯದ ದಕ್ಷಿಣ ತುದಿ ಮತ್ತು ಅಶೋಕನ ಮೂರು ಶಾಸನಗಳಿರುವ ತಾಣದ ಖ್ಯಾತಿವುಳ್ಳ ಇಲ್ಲಿನ ಬೆಟ್ಟದ ಮೇಲೆ 200 ವರ್ಷಗಳಿಗೂ ಹಳೆಯ ಆಕರ್ಷಕ ಮಹಲ್ ಇದೆ. ಇದರ ಹೆಬ್ಬಾಗಿಲುಗಳಲ್ಲಿ ಬಲ ಬಾಗಿಲು ತೆರೆಯುವಾಗ ಶಂಖ ನಾದ ಹೊರಹೊಮ್ಮುತ್ತದೆ. ಎಡ ಬಾಗಿಲು ಮುಚ್ಚುವಾಗ ಗುಹೆಯೊಳಗೆ ಅಡಗಿರುವ ಸಿಂಹ ಗರ್ಜಿಸುತ್ತಲ್ಲ, ಅಂಥ ಧ್ವನಿ ಕೇಳಿಸುತ್ತದೆ! ಅನಾದಿ ಕಾಲದಲ್ಲಿ ಮೊದಲಿಗೆ ಇಲ್ಲಿದ್ದ ಸ್ವಾಮೀಜಿ ಮಠದಿಂದ ಹೊರಗೆ ಹೊರಟಲ್ಲಿ ಬಾಗಿಲಿನಲ್ಲಿ ಹೊರಡುವ ಶಂಖ ನಾದ ಬೆಟ್ಟದ ಕೆಳಭಾಗದವರಿಗೂ ಪಸರಿಸಿ ಸ್ವಾಮೀಜಿಯ ಚಲನವಲನವನ್ನು ತಿಳಿಸುತ್ತಿತ್ತು. ಸಂಜೆ ಸ್ವಾಮೀಜಿ ಮಠದ ಒಳಕ್ಕೆ ಹೋಗಿ ಬಾಗಿಲು ಮುಚ್ಚಿದಾಗ ಗುಹೆ ಹೊಕ್ಕ ಸಿಂಹದ ಗರ್ಜನೆ ಕೇಳಸುತ್ತಿತ್ತು. ಈ ಎರಡು ಶಬ್ದಗಳಿಂದ ಮಠದಲ್ಲಿ ಸ್ವಾಮೀಜಿಯ ಉಪಸ್ಥಿತಿ ಇದೆ ಎಂಬುದು ಜನರಿಗೆ ತಿಳಿಯುತ್ತಿತ್ತು ಎಂಬ ಪ್ರತೀತಿ ಇದೆ. ಕಡಿಮೆಯಾಗಿದೆ ಶಬ್ದ! ಇದಕ್ಕೂ ಮೊದಲು ದೂರದವರೆಗೂ ಕೇಳಿಸುತ್ತಿದ್ದ ಈ ಶಬ್ದ ಇತ್ತೀಚೆಗೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಗರ್ಜನೆಯಲ್ಲಿ ಮಾತ್ರ ಇದುವರೆಗೂ ವ್ಯತ್ಯಾಸ ಆಗದಿರುವುದು ಹಿಂದಿನ ಕಾಲದವರ ಕಲಾ ಕೌಶಲ ಹಾಗೂ ಶ್ರದ್ಧೆಗೆ ಸಾಕ್ಷಿ. ಇಲ್ಲಿನ ಸಿದ್ದೇಶ್ವರ, ಗಂಗಾಧರ ದೇಗುಲಗಳಿಗೆ ಭಕ್ತರು ನಿತ್ಯವೂ ಪೂಜೆ ಸಲ್ಲಿಸುತ್ತಾರೆ. ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ನೂರಾರು ಭಕ್ತರು ಇಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ನೆರೆಯ ಆಂಧ್ರಪ್ರದೇಶದಲ್ಲೂ ಈ ಮಠದ ಭಕ್ತರಿದ್ದಾರೆ ಎನ್ನುತ್ತಾರೆ ಮಠದ ಮಹದೇವ ತಾತ ಮತ್ತು ಸೋಮಣ್ಣ ಸ್ವಾಮೀಜಿ. ಬೆಟ್ಟದ ಮೇಲೆ ಹೊಂಡವಿದ್ದು, ಇದರಲ್ಲಿ ಸದಾ ಕುಡಿಯಲು ಹಿತವೆನಿಸುವ ಸಿಹಿ ತಣ್ಣೀರಿದೆ. ಇಲ್ಲಿ ಭಕ್ತಾದಿಗಳು ನೀಡಿದ ಜಿಂಕೆ, ಸಾರಂಗಗಳನ್ನು ಸಾಕಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕರಡಿಗಳೂ ಇವೆ. ಈ ಕರಡಿಗಳು ಎಂದೂ ಹಾವಳಿ ಮಾಡಿಲ್ಲ! ಬೆಟ್ಟದಲ್ಲಿ ಗುಹೆಗಳಿದ್ದು, ಇಲ್ಲಿ ಅನಾದಿಕಾಲದ ರೇಖಾಚಿತ್ರಗಳಿವೆ. ದಿನವೂ ದಾಸೋಹ ಇಲ್ಲಿ ನಿತ್ಯ ಅನ್ನದಾಸೋಹ ಇದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ಸ್ಥಳ ಕಡೆಗಣಿಸಿರುವುದರಿಂದ ಈ ಸ್ಥಳ ಇಂದಿಗೂ ಪ್ರಚಾರದ ಕೊರತೆ ಅನುಭವಿಸುತ್ತಿದೆ. ಬೆಟ್ಟ ಹತ್ತುವ ಮೆಟ್ಟಿಲುಗಳು ಸಂಪೂರ್ಣ ಹಾಳಾಗಿವೆ. ರಸ್ತೆಯಿಂದ ಬೆಟ್ಟದ ಬುಡದವರೆಗಾದರೂ ಸೂಕ್ತ ರಸ್ತೆ ನಿರ್ಮಿಸುವ ಅಗತ್ಯವಿದೆ. ಮನಸೆಳೆಯುವ ಈ ಪ್ರದೇಶವನ್ನು ಸರ್ಕಾರ ಅಭಿವೃದ್ಧಿಪಡಿಸಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ತಾಲೂಕಿಗೆ ಹೆಸರು ಬರಲು ಸಾಧ್ಯವಿದೆ. - ಚಿತ್ರ, ಲೇಖನ: ಬಿ.ಜಿ. ಕೆರೆ ಬಸವರಾಜ @.