ಜೈನಕಾಶಿ ಕಮಠಾಣಾ ಎಲ್ಲ ಧರ್ಮದವರನ್ನು ತನ್ನೊಡಲಿನಲ್ಲಿಟ್ಟುಕೊಂಡ ಶರಣರ ಬೀಡು ಕಮಠಾಣಾ. ಬೀದರ್‌ನ ಜಿಲ್ಲಾ ಕೇಂದ್ರದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. 11ನೇ ಶತಮಾನದಲ್ಲಿ ಜೈನ ಧರ್ಮದ ಅತಿಶಯ ಕ್ಷೇತ್ರ ಕಮಠಾಣ. ಇದು ಜೋಡು ಕಂದಕ ಹೊಂದಿದ ದೊಡ್ಡ ಗ್ರಾಮ. ಹಿಂದೆ ಸರ್ವಧರ್ಮ ಸಮನ್ವಯ ಗ್ರಾಮದ ಪ್ರತೀಕ ಎನ್ನಲು ವಿಠಲ ಮಂದಿರ, ಪುರಾತನ ಮಠ ಮತ್ತು ಅನೇಕ ಗುಡಿ ಗುಂಡಾರಗಳು ಸಾಕ್ಷಿ. ಜೈನರ 23ನೇ ತೀರ್ಥಂಕರ ಭಗವಾನ ಪಾರ್ಶ್ವನಾಥರ ಅತಿಶಯ ಕ್ಷೇತ್ರವು ಆಕರ್ಷಕ. ಅರಸರ ಕಾಲದಲ್ಲಿ ನಿರ್ಮಾಣಗೊಂಡ 4.5 ಅಡಿ ಎತ್ತರದ ಪಾರ್ಶ್ವನಾಥರ ಕಪ್ಪು ಶಿಲೆಯ ತಪೋನಿರತಮೂರ್ತಿ ಹೆಸರುವಾಸಿ. ಜೈನರ ಯಾತ್ರಾ ಕ್ಷೇತ್ರವೂ ಹೌದು. ಜಿನಾಯಲಕ್ಕೆ 1.5 ಎಕರೆ ವಿಶಾಲ ಭೂಮಿಯಿದ್ದು ಪೂರ್ವ ಮತ್ತು ದಕ್ಷಿಣಕ್ಕೆ ಮಹಾದ್ವಾರಗಳಿವೆ. 1989ರ ಮಾಘ ಶುದ್ಧ ಪಂಚಮಿವರೆಗೆ ಜಿನಾಲಯದ ನೆಲ ಮಾಳಿಗೆಯಲ್ಲಿದ್ದ ಮೂರ್ತಿಯನ್ನು 108 ಆಚಾರ್ಯ ಶ್ರೀ ಶೃತಸಾಗರ ಮುನಿಗಳು ಎತ್ತರದ ವೇದಿಕೆಯ ಮೇಲೆ ಪ್ರತಿಷ್ಠಾಪನೆ ಮಾಡಿಸಿದರು. ವರ್ಷದ ಎಲ್ಲ ದಿನಗಳಲ್ಲೂ ಭಗವಾನರಿಗೆ ಶಾಶ್ವತ ಧ್ರುವ ನಿಧಿಯಿಂದ ಪಂಚಾಮೃತ ಮಹಾಭಿಷೇಕ ಹಾಗೂ ಪೂಜೆ ನಡೆಯುವ ವ್ಯವಸ್ಥೆ ಇದೆ. ಪ್ರತಿವರ್ಷ ಮಾಘ ಶುದ್ಧ ಪಂಚಮಿಯಿಂದ ಸಪ್ತಮಿವರೆಗೆ ರಥಯಾತ್ರೆ ಜರುಗುತ್ತದೆ. ಈ ಮಹೋತ್ಸವದಲ್ಲಿ 108 ಕಲಶಗಳ ಪೂಜೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಸಾವಿರಾರು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಭಕ್ತಾದಿಗಳಿಗೆ ಆಧುನಿಕ ಪಾಕಶಾಲೆ, ಊಟದ ಮನೆ, ಶೌಚಾಲಯ, ಸ್ನಾನಗೃಹ, 12 ವಸತಿ ಗೃಹಗಳಿವೆ. 200 ಜನ ಕುಳಿತು ಪ್ರವಚನ ಕೇಳಲು ಅನುಕೂಲವಾಗುವಂಥ ಪ್ರವಚನ ಮಂದಿರವಿದ್ದು ಅದಕ್ಕೆ ಮುನಿ ಆರ್ಯ ನಂದಿ ಸ್ಮೃತಿ ಭವನ ಎಂದು ನಾಮಕರಿಸಲಾಗಿದೆ. ಮಂದಿರದ ಎದುರಿಗೆ 35 ಅಡಿ ಎತ್ತರದ ಸುಂದರ ಮಾನಸ್ತಂಭವಿದೆ. ಬೀದರ್ ನಗರದಲ್ಲಿ 70 ಜೈನ ಕುಟುಂಬಗಳಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆ ವ್ಯಾಪಾರಿಗಳು. ಭಗವಾನ ಪಾರ್ಶ್ವನಾಥರು ಕುಳಿತ ವೇದಿಕೆಯ ಕೆಳಗೆ ಒಂದು ನೆಲಮಾಳಿಗೆಯಿದ್ದು ಧ್ಯಾನ ಮಾಡಲು ಹೇಳಿ ಮಾಡಿಸಿದ ಜಾಗ. ಅದಕ್ಕೆ ಒಳಗೆ ಅಂದರೆ ಈ ನೆಲಮಾಳಿಗೆಯಲ್ಲಿ ಮಾಡಿದ ಸುಂದರ ಗಾಜಿನ ಕುಸುರಿ ಕೆಲಸ ಚಿತ್ತಾಕರ್ಷಕ. ಕಮಠಾಣಾ ಗ್ರಾಮಕ್ಕೆ ಜೈನ ಭಕ್ತರು ನಿರಂತರ ಬರುತ್ತಿರುವುದರಿಂದ ಈ ಕ್ಷೇತ್ರವು ಜೀರ್ಣೋದ್ಧಾರವಾಗುತ್ತಿದೆ. ಅಹಿಂಸಾ ತತ್ವದ ಶಾಂತಿಯೋಗದ ಸಂಕೇತದಂತಿರುವ ಕ್ಷೇತ್ರ ಕಮಠಾಣಾವಾಗಿದೆ. ಯಾತ್ರಿಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. -ಮೌಲಾನಾಸಾಬ್