ಹಿಮಧಾಮ ಹಿಮಾಲಯದಲ್ಲಿ ಹಿಮ ಧಾರಾಕಾರವಾಗಿ ವರ್ಷವಿಡೀ ಸುರಿಯುವುದು ಗೊತ್ತೇ ಇದೆ. ಹಾಗೆಯೇ ಹಿಮವದ್ ಗಿರಿಯಲ್ಲೂ ಸುರಿಯುತ್ತದೆ! ಈ ಗಿರಿ ಹಿಮಾಲಯದಲ್ಲೇನಿಲ್ಲ. ಇಲ್ಲೇ ಇದೆ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಗಡಿಭಾಗಕ್ಕೆ ಹೊಂದಿಕೊಂಡಿದೆ. ಹೀಗೆ ಹಿಮ ಸುರಿಯುವುದು ದಕ್ಷಿಣ ಭಾರತದಲ್ಲೇ ಅಚ್ಚರಿ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸಮೀಪ ಈ ಗಿರಿಧಾಮವಿದೆ. ಇದರ ಸುತ್ತ ಕೇರಳದ ಅರಣ್ಯ ಪ್ರದೇಶಗಳು, ತಮಿಳುನಾಡಿನ ನೀಲಗಿರಿ ಬೆಟ್ಟಗಳು (ಊಟಿ) ಹಾಗೂ ಬಂಡೀಪುರ ಅಭಯಾರಣ್ಯ ಆವರಿಸಿದೆ. ನೀಲಗಿರಿಯ ಬೆಟ್ಟಗಳನ್ನು ಹೊರತುಪಡಿಸಿದರೆ, ಹಿಮವದ್ ಗಿರಿಯೇ ಎತ್ತರವಾಗಿ ಕಾಣಿಸುವುದು. ಸದಾ ಮೋಡ ಕವಿದ ವಾತಾವರಣ. ನೋಡನೋಡುತ್ತಲೇ ಸುರಿಯುವ ಮಂಜಿನ ಹನಿಗಳು, ಸೊಗಸಾದ ತಂಗಾಳಿ, ಚಿಕ್ಕ ಚಿಕ್ಕ ಕೊಳಗಳು (101) ಹೆಜ್ಜೆ ಹೆಜ್ಜೆಗೂ ಇಲ್ಲಿನ ಸೌಂದರ್ಯ ನಮ್ಮನ್ನು ಆವರಿಸಿಕೊಳ್ಳುತ್ತದೆ. ಗಿರಿಯ ಮೇಲೆ ನಿಂತು ಕೆಳಗೆ ನೋಡಿದರೆ, ವಿಮಾನದಲ್ಲಿ ಕುಳಿತ ಅನುಭವ. ಗಿರಿಯ ಮೇಲೊಂದು ಚಿಕ್ಕ ದೇಗುಲವಿದೆ. ಮೇಲೆ ನಿಂತು ನೋಡಿದರೆ ಕೊನೆ ಕಾಣದ ಕಂದರಗಳು ಕಣ್ಣುಗಳನ್ನು ಸೋಲಿಸುತ್ತವೆ. ರಮ್ಯಭರಿತ ಕಂಪು ಚೆಲ್ಲುವ ಗಿಡಮರಗಳ ಸುವಾಸನೆ, ಕಾಲಡಿ ಹುಲ್ಲಿನ ಹಾಸು, ಅದರ ಮೇಲೆ ಆರುವ ತವಕದಲ್ಲಿರುವ ಮೇಲೆ ಮಂಜಿನಹನಿ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಮಾರ್ಗ ಯಾವುದಯ್ಯಾ? ಮೈಸೂರಿನಿಂದ ಊಟಿಗೆ ಹೋಗುವ ದಾರಿ ಮಧ್ಯದಲ್ಲಿ ಈ ಗಿರಿ ಸಿಗುತ್ತದೆ. ಮೈಸೂರಿನಿಂದ ಗುಂಡ್ಲುಪೇಟೆ (60 ಕಿ.ಮೀ.) ಯಿಂದ 18 ಕಿ.ಮೀ. ದೂರದಲ್ಲಿ ಈ ಹಿಮವದ್‌ಗಿರಿ ಸಿಗುತ್ತದೆ. -ಮಂಜು ದಾಸ