ಸಂಗೀತ ದೀಪಿಕಾ 'ನೀನಿಲ್ಲದೆ.. ಬಾಳೊಂದು ಬಾಳೇ ಕೃಷ್ಣಾ..' ಎಂದು ಈ ಹುಡುಗಿ ಹಾಡುತ್ತಿದ್ದರೆ ಶ್ರೋತೃಗಳು ಮಂತ್ರ ಮುಗ್ಧರಾಗುತ್ತಾರೆ. ಸುಶ್ರಾವ್ಯ ಕಂಠದ ಬಹುಮುಖ ಪ್ರತಿಭೆ ದೀಪಿಕಾ ಸುಳ್ಳಿ. ಈಕೆ ಕೃಷಿ ಕಾರ್ಮಿಕ ಕೇಶವ- ಲೀಲಾವತಿ ದಂಪತಿಯ ಏಕಮಾತ್ರ ಪುತ್ರಿ. ಪ್ರಸ್ತುತ ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. ಶಾಸ್ತ್ರೀಯ ಸಂಗೀತದ ಸೀನಿಯರ್ ಕಲಿಯುತ್ತಿರುವ ಸಂಗೀತ ಪ್ರತಿಭೆ. ಇಷ್ಟು ಮಾತ್ರ ಆದರೆ ಅದೇನೂ ವಿಶೇಷತೆ ಎನಿಸುವುದಿಲ್ಲ. ಆದರೆ ದಲಿತ ಕುಟುಂಬದಿಂದ ಬಂದವಳು ದೀಪಿಕಾ. ಶಾಸ್ತ್ರೀಯ ರೀತಿಯಲ್ಲಿ ಅಧ್ಯಯನ ಕೈಗೊಂಡು, ಸಂಗೀತ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿರುವುದು ಸಣ್ಣ ಸಂಗತಿಯೇನಲ್ಲ. ಬಾಲ್ಯದಿಂದಲೇ ಕಲಿಕೆ ಈಕೆಗೆ 4ನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆ ನಾರ್ಣಕಜೆಯಲ್ಲಿ ನಡೆದ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಹಾಡು ಹೇಳುವ ಅವಕಾಶ ಸಿಕ್ಕಿತು. ಹಾಡು ಕೇಳಿದ ಹೊನ್ನಡಿ ಶ್ರೀಕೃಷ್ಣ ಭಟ್ಟರು ದೀಪಿಕಾಳ ತಂದೆ ಕೇಶವ ಸುಳ್ಳಿಯವರಲ್ಲಿ 'ಈಕೆಗೆ ಉಜ್ವಲ ಭವಿಷ್ಯವಿದೆ. ಸಂಗೀತ ಶಿಕ್ಷಣ ನೀಡಿ' ಎಂದರು. ಹಾಗೆಯೇ ತಮ್ಮ ನಾದಿನಿ ರೇಖಾ ಅವರಲ್ಲಿ ಸಂಗೀತ ಶಿಕ್ಷಣ ಪಡೆಯುವಂತೆಯೂ ಸೂಚಿಸಿದರು. 2005ರಲ್ಲಿ ಸಂಗೀತ ಶಿಕ್ಷಣ ಆರಂಭಿಸಿದ ದೀಪಿಕಾ, 2009ರ ವೇಳೆಗೆ ಸಂಗೀತದ ಜೂನಿಯರ್ ಹಂತವನ್ನು ಪ್ರಥಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದಳು. ಪ್ರಸ್ತುತ 3 ವರ್ಷದಿಂದ ಸಂಗೀತ ಗುರು ವಿದ್ವಾನ್ ಕಾಂಚನ ಈಶ್ವರ ಭಟ್ ಅವರಲ್ಲಿ ಸೀನಿಯರ್ (ಮಾಧ್ಯಮಿಕ ಹಂತ) ಅಭ್ಯಾಸ ಮಾಡುತ್ತಿದ್ದಾಳೆ. ಅವಕಾಶ ಈ ಮಧ್ಯೆ ಈಕೆಯ ಗಾಯನ ಪ್ರತಿಭೆ ಗುರುತಿಸಿ, ಅನೇಕರು ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗೆಯೇ ಪುತ್ತೂರಿನ ಡಿಂಡಿಮ ಬಳಗದ ನಿರ್ದೇಶಕ ಚಿದಾನಂದ ಕಾಮತ್ ಕಾಸರಗೋಡು, ಈಕೆಗೆ ತಂಡದಲ್ಲಿ ಹಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ಹಲವಾರು ಕಡೆ ತನ್ನ ಗಾಯನ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ. ಸಂಗೀತದೊಂದಿಗೆ ಓದಿನಲ್ಲೂ ಮುಂದಿರುವ ಈಕೆಗೆ ಪೋಷಕರಲ್ಲದೆ ಊರವರ ಪ್ರೋತ್ಸಾಹವೂ ಇದೆ. ಉತ್ತಮ ಗಾಯಕಿಯಾಗಬೇಕು ಸಂಗೀತ ಶಿಕ್ಷಣ ಮುಗಿಸಿ ಉತ್ತಮ ಗಾಯಕಿಯಾಗಿ ಹೊರಹೊಮ್ಮಬೇಕು ಎಂಬುದು ನನ್ನ ಗುರಿ. ಇದರ ಜತೆಗೆ ನಾನು ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದು, ಬ್ಯಾಂಕ್ ಉದ್ಯೋಗಿ ಆಗಬೇಕೆಂಬ ಆಸೆ. -ದೀಪಿಕಾ ದೀಪಿಕಾ ಒಳ್ಳೆಯ ಸಂಗೀತ ಪ್ರತಿಭೆ. ಆಕೆಗೆ ಉತ್ತಮ ಕಂಠವಿದೆ. ಕಲಿಯುವ ಹುಮ್ಮಸ್ಸೂ ಇದೆ. ಅವರ ಸಮುದಾಯದವರು ಈ ಕಲಿಕೆಗೆ ಬರುವುದು ಬಹಳ ಕಡಿಮೆ, ಪ್ರೋತ್ಸಾಹಿಸುವವರೂ ಕಡಿಮೆ. ನಿಜಕ್ಕೂ ಆಕೆ ಪ್ರತಿಭಾವಂತೆ. -ಕಾಂಚನ ಈಶ್ವರ ಭಟ್, ಸಂಗೀತ ಗುರು ದೀಪಿಕಾ ನಮ್ಮ ಡಿಂಡಿಮ ಬಳಗದ ಒಳ್ಳೆಯ ಗಾಯಕಿ ಹಾಗೂ ಶಿಸ್ತಿನ ಹುಡುಗಿ. ಆಕೆಯಲ್ಲಿ ಸಂಗೀತ ಪ್ರತಿಭೆಯೂ ಇದೆ, ವಿದ್ಯೆಯೂ ಇದೆ. ಹೀಗಾಗಿ ಈ ಎರಡೂ ಕ್ಷೇತ್ರದಲ್ಲಿ ಅವಳಿಗೆ ಉತ್ತಮ ಭವಿಷ್ಯವಿದೆ. -ಚಿದಾನಂದ ಕಾಮತ್, ಡಿಂಡಿಮ ಬಳಗದ ನಿರ್ದೇಶಕ -ದುರ್ಗಾ ಕುಮಾರ್ ನಾಯರ್‌ಕೆರೆ