ಕೆಜಿವಾಲ ಒಂದೇ ಕೈಯ್ಯಲ್ಲಿ ಕ್ವಿಂಟಾಲ್ ತೂಕದ ಕಲ್ಲು ಎತ್ತುವ ವೀರರು ನಮ್ಮ ಹಳ್ಳಿಗಳಲ್ಲಿ ಇದ್ದಾರೆ... ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಸಾಧನೆ ನೀರಸವಾಗಿದ್ದರೆ ಏನಂತೆ? ಒಂದೇ ಕೈಯ್ಯಲ್ಲಿ ಕ್ವಿಂಟಾಲ್ ತೂಕದ ಕಲ್ಲು ಎತ್ತುವ ವೀರರು ನಮ್ಮ ಹಳ್ಳಿಗಳಲ್ಲಿ ಇದ್ದಾರೆ. ಕಲ್ಲು ಎತ್ತುವುದು, ಸಂಗ್ರಾಣಿ ಎತ್ತುವುದು, ಸಿಡಿ ಹೊಡೆಯುವುದು ಹೀಗೆ ನಾನಾ ರೀತಿಯಲ್ಲಿ ಈ ಗ್ರಾಮೀಣ ಕ್ರೀಡೆಯನ್ನು ಕರೆಯುತ್ತಾರೆ. ಗ್ರಾಮಗಳಲ್ಲಿ ಯುವಕರು ನಿತ್ಯ ಇದನ್ನು ಅಭ್ಯಾಸ ನಡೆಸುತ್ತಾರೆ. ಆದರೆ ಜಾತ್ರೆ, ಪಂಚಮಿಯಂತಹ ಹಬ್ಬಗಳಲ್ಲಿ ಸ್ಪರ್ಧೆ ಮೂಲಕ ಯುವಕರ ಶಕ್ತಿ, ಸಾರ್ಮರ್ಥ್ಯ ಒರೆಗೆ ಹಚ್ಚಲಾಗುತ್ತದೆ. 10 ರಿಂದ 35 ವರ್ಷದವರು ಭಾಗಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನದೇ ಇಡೀ ರಾಜ್ಯದಲ್ಲಿ ಭಾರದ ಕಲ್ಲುಗಳನ್ನು ಎತ್ತುವ ಆಟ ಈಗಲೂ ಇದೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಕೊಂಚ ಹೆಚ್ಚೇ. ಇಲ್ಲಿನ ಬಹುತೇಕ ಗ್ರಾಮಗಳಲ್ಲಿ ಸಿಡಿ ಹೊಡೆಯುವುದು ಪ್ರಚಲಿತದಲ್ಲಿದೆ. ಹಿರಿಯರು ಕಿರಿಯರಿಗೆ ತರಬೇತಿ ನೀಡುವ ದೃಶ್ಯ ನಿತ್ಯ ಸಂಜೆ ಸಾಮಾನ್ಯ. 10 ವರ್ಷದ ಮಕ್ಕಳಿಂದ 35 ವರ್ಷದೊಳಗಿನವರಿಗೆ ತರಬೇತಿ ನೀಡುತ್ತಾರೆ. 20 ಕೆ.ಜಿ.ಯಿಂದ ಪ್ರಾರಂಭವಾಗಿ 180 ಕೆ.ಜಿ.ವರೆಗೂ ಕಲ್ಲುಗಳನ್ನು ಎತ್ತುವ ಕಲೆ ಪ್ರದರ್ಶಿಸಲು ಯುವಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ದಿನವೂ ಕೃಷಿ ಕಾಯಕದಲ್ಲಿ ಮಗ್ನರಾಗುವ ಯುವಕರು ಸಂಜೆಯ ವೇಳೆ, ಮನರಂಜನೆಯೊಂದಿಗೆ ತಮ್ಮ ದೇಹ ಸದೃಢತೆ ಹೆಚ್ಚಿಸಿಕೊಳ್ಳಲು ಇಂತಹ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಗ್ರಾಮೀಣ ಯುವಕರನ್ನು ಸದೃಢಗೊಳಿಸಿ, ಅವರಲ್ಲಿ ಕ್ರೀಡಾ ಮನೋಭಾವನೆ ಮೂಡಿಸುತ್ತಿರುವ ಈ ಅಪ್ಪಟ ಗ್ರಾಮೀಣ ಕ್ರೀಡೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಇಲ್ಲಿಯವರೆಗೂ ಕೇವಲ ಮೋಜಿಗಾಗಿಯೇ ರೂಪಿತವಾಗಿರುವ ಕ್ರೀಡೆಯನ್ನು ದಾಖಲೀಕರಿಸಿ, ಇದಕ್ಕೆ ಅಗತ್ಯ ಮಾರ್ಪಾಡುಗಳನ್ನು ಮಾಡಿದಲ್ಲಿ, ಕ್ರೀಡೆ ಉಳಿಯಲು ಸಾಧ್ಯ. ಅಂತಹ ಪ್ರಯತ್ನಗಳಿಗೆ ಕ್ರೀಡಾ ಇಲಾಖೆ ಗಮನ ನೀಡಲಿ ಎನ್ನುವುದು ಬಹುತೇಕ ಗ್ರಾಮೀಣ ಯುವಕರ ಒತ್ತಾಸೆಯಾಗಿದೆ. ವಿಶೇಷ ಕೆತ್ತನೆ ಈ ರೀತಿ ಭಾರ ಎತ್ತುವ ಕಲ್ಲುಗಳನ್ನು ವಿಶೇಷವಾಗಿಯೇ ವಿನ್ಯಾಸ ಮಾಡಲಾಗಿರುತ್ತದೆ. ಉತ್ತಮ ಗುಣಮಟ್ಟದ ಕಲ್ಲುಗಳಿಂದ ವೃತ್ತಾಕಾರದಲ್ಲಿ ಕೆತ್ತನೆ ಮಾಡಲಾಗಿರುತ್ತದೆ. ಕಲ್ಲನ್ನು ಮೇಲೆತ್ತಲು ಅದರ ಮಧ್ಯ ಭಾಗದಲ್ಲಿ ಹಿಡಿಕೆ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿರುತ್ತದೆ. ಕಲ್ಲನ್ನು ಎತ್ತುವವರ ಕೈಗಳಿಗೆ ತೊಂದರೆಯಾಗದಂತೆ ಕೆತ್ತನೆ ಮಾಡಲಾಗಿರುವುದು ಮತ್ತೊಂದು ವಿಶೇಷ. ಈ ರೀತಿ ಸಂಗ್ರಾಣಿ, ಸಿಡಿ ಹೊಡೆಯುವ ಕಲ್ಲುಗಳನ್ನು (ಕೆತ್ತುವವರು) ನಿರ್ಮಿಸುವವರಿದ್ದು, ಅವರಿಗೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಭಾರಿ ಬೇಡಿಕೆ ಇದೆ. ಒಂದೇ ಕೈ ಅಂತಾರಾಷ್ಟ್ರೀಯ ವೇಟ್ ಲಿಪ್ಟಿಂಗ್‌ನಲ್ಲಿ ಎರಡೂ ಕೈಗಳನ್ನು ಬಳಕೆ ಮಾಡಿಕೊಂಡು ಭಾರ ಎತ್ತಲಾಗುತ್ತದೆ. ಆದರೆ, ಇಲ್ಲಿ ಒಂದೇ ಕೈಯಲ್ಲಿ ಕಲ್ಲನ್ನು ಎತ್ತಬೇಕು. ನೆಲದಿಂದ ಒಮ್ಮೆ ಕಲ್ಲು ಎತ್ತಿದರೆ ಅದು ನೇರವಾಗಿ ತಲೆಯಿಂದ ಮೇಲೆ ಹೋಗಬೇಕು. ಕಲ್ಲು ಎತ್ತಿದ ಕೈ ಕೂಡ ನೇರವಾಗಿಯೇ ಇರಬೇಕು. ಕೈ ಮಡಚಿದಲ್ಲಿ ಅವನಿಗೆ ಕಲ್ಲು ಎತ್ತಲು ಆಗಿಲ್ಲ ಎಂದು ಪರಿಗಣಿಸಲಾಗುತ್ತದೆ. ಎತ್ತಿದ ಕಲ್ಲನ್ನು ಹಾಗೆಯೇ ಹಿಂದೆ ಎಸೆಯಬೇಕು. ಈ ವೇಳೆ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಂಜೆಯ ವೇಳೆಗೆ ಗ್ರಾಮದ ಪ್ರಮುಖ ಸ್ಥಳದಲ್ಲಿ ಸೇರುತ್ತೇವೆ. ಅಲ್ಲಿರುವ ಕಲ್ಲುಗಳನ್ನು ಎತ್ತಲು ಪ್ರಾರಂಭಿಸುತ್ತೇವೆ. ಮೊದಲು ಒಬ್ಬ ವ್ಯಕ್ತಿ ತನ್ನ ಶಕ್ತಿ ಅನುಸಾರ ಕಲ್ಲುಗಳನ್ನು ಎತ್ತುತ್ತಾನೆ. ಅವನು ಎಲ್ಲಿಗೆ ನಿಲ್ಲಿಸುತ್ತಾನೆ (ಭಾರದ ಆಧಾರದಲ್ಲಿ 50, 60, 70, 80 ಕೆ.ಜಿ.) ಅದನ್ನು ಗಮನಿಸಿ, ಅವನಿಗಿಂತ ಹೆಚ್ಚಿನ ಭಾರದ ಕಲ್ಲುನ್ನು ಯಾರು ಎತ್ತುತ್ತಾರೋ ಅವರೇ ಜಯಶಾಲಿಯಾದಂತೆ. ಈ ಮಾದರಿಯಲ್ಲಿ ನಾವು ಕಲ್ಲುಗಳನ್ನು ಎತ್ತುತ್ತೇವೆ. ಇದು ನಮ್ಮಗೊಂದು ಮನರಂಜನೆಯೂ ಹೌದು ಹಾಗೆಯೇ ಆರೋಗ್ಯ ಸುಧಾರಣೆಗೂ ದಾರಿಯಾಗಿದೆ. -ಬಸಪ್ಪ ತಳವಾರ, ನಾಗೇಶ ಮಳಿಕಟ್ಟಿ ರೋಣ ತಾಲೂಕು ಶಾಂತಗೇರಿಯ ಕಲ್ಲು ಎತ್ತುವ ಯುವಕರು - ಶಿವಕುಮಾರ ಕುಷ್ಟಗಿ