ಕಲ್ಲಿನ ಮನೆಯಲ್ಲಿ ಚಿತ್ರದುರ್ಗ ಜಿಲ್ಲೆಯ ತುರನೂರು ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಗೂ ಕೂನುಬೇವು ಎಂಬ ಗ್ರಾಮದಲ್ಲಿ ವಾಸಿಸುವ ಅರ್ಧ ಭಾಗದಷ್ಟು ಜನರು ಗ್ರಾಮದ ಸುತ್ತಮುತ್ತ ದೊರೆಯುವ ಬಳಪದ ಕಲ್ಲಿನಲ್ಲಿಯೇ ನಿರ್ಮಾಣವಾದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮನೆಯೊಂದೆ ಅಲ್ಲ ಕಾಂಪೌಂಡ್, ಹೊಲ- ಗದ್ದೆ ತೋಟದಲ್ಲಿನ ನೀರಿನ ತೊಟ್ಟಿ, ಕಂಬಗಳು, ದನದ ಕೊಟ್ಟಿಗೆಗಳು, ಮನೆಯ ನೆಲಕ್ಕೆ ಹಾಸುಗಳು, ಸ್ನಾನದ ಗೃಹ, ಹೊಲದ ರಕ್ಷಣೆ ಮಾಡುವ ಬೇಲಿಯೂ ಸಹ ಈ ಬಳಪದ ಕಲ್ಲುಗಳಿಂದಲೇ ನಿರ್ಮಿಸಲ್ಪಟ್ಟಿವೆ. ಇತ್ತೀಚಿಗೆ ಕಟ್ಟಲ್ಪಡುತ್ತಿರುವ ಕೆಲ ಮನೆಗಳನ್ನು ಬಿಟ್ಟರೆ ಈ ಗ್ರಾಮದಲ್ಲಿ ಇರುವ ಸುಮಾರು ಮನೆಗಳು ಬಳಪದ ಕಲ್ಲುಗಳಿಂದ ಕೂಡಿದ್ದು ಮನೆಯ ಛಾವಣಿಯೂ ಇದೇ ಕಲ್ಲಿನಿಂದ ನಿರ್ಮಿತವಾಗಿವೆ. ಈ ಗ್ರಾಮಾಂತರ ಪ್ರದೇಶದ ಜನರು ಇಲ್ಲಿ ದೊರೆಯುವಬಳಪದ ಕಲ್ಲುಗಳ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡು ಹೇಗೆ ತಮ್ಮ ಜೀವನ ಸಾಗಿಸುತ್ತಿದ್ದಾರೆ ಎಂಬುದೇ ಸೋಜಿಗದ ವಿಷಯ. -ಚಳ್ಳಕೆರೆ ವೀರೇಶ್, ಚಿತ್ರದುರ್ಗ