ಬೇಸರ ಕಳೆಯುವ ಬೇಕಲ ಅನುಪಮ ಸೌಂದರ್ಯದ ಬೇಕಲ ಕೋಟೆಗೀಗ ಆಧುನಿಕತೆಯ ಸ್ಪರ್ಶ.. ಅನುಪಮ ಸೌಂದರ್ಯದ ಬೇಕಲ ಕೋಟೆಗೀಗ ಆಧುನಿಕತೆಯ ಸ್ಪರ್ಶ. ಕೋಟೆ ಆವರಣದಲ್ಲಿ ಎದ್ದು ನಿಂತಿದೆ ಮುದ ನೀಡುವ ಉದ್ಯಾನ. ಅದರೊಳಕ್ಕೆ ನಡೆದಾಡಲು ವಾಕಿಂಗ್ ಟ್ರ್ಯಾಕ್. ಮಂಗಳೂರು ಕಡೆ ಬಂದವರು ಪುರುಸೊತ್ತು ಮಾಡಿಕೊಂಡು ಭೇಟಿ ಕೊಡಲೇಬೇಕಾದ, ದಿನಿವಿಡೀ ಕಳೆಯಬಹುದಾದ ತಾಣವಿದು. ಕೋಟೆಯ ಸುತ್ತ ನಡೆದರೆ ಕೆಲವು ಕಿಲೋ ಮೀಟರ್‌ಗಳೇ ಆಗಬಹುದು. ಆದರೆ ಆಯಾಸವಂತೂ ತಿಳಿಯುವುದಿಲ್ಲ. ಕಾಸರಗೋಡಿನಿಂದ ದಕ್ಷಿಣಕ್ಕೆ ಹದಿನಾರು ಕಿ.ಮೀ. ದೂರದಲ್ಲಿರುವ ಈ ಕೋಟೆ. ಕೇರಳ ಪ್ರವಾಸೋದ್ಯಮ ಇಲಾಖೆ ಸುಪರ್ದಿಯಲ್ಲಿದ್ದರೂ ನಿರ್ವಹಣೆ ಚೆನ್ನಾಗಿದೆ. ಮಣ್ಣಿನ ತಳದಲ್ಲಿರುವ ಶಿಲೆ. ಅದರ ಮೇಲೆ ಮುರಕಲ್ಲಿನಿಂದ ಬಹು ಭುಜಾಕೃತಿಯ ಕೋಟೆ. ಕೋಟೆಯು ಸುತ್ತಲೂ ಬೃಹತ್ ಕಂದಕಗಳು. ಇಲ್ಲಿರುವ ಮುಖ್ಯ ನಿರ್ಮಾಣಗಳೆಂದರೆ, ಮೆಟ್ಟಿಲುಗಳುಳ್ಳ ಕೊಳ, ಸಮುದ್ರಾಭಿಮುಖವಾಗಿರುವ ಸುರಂಗ, ಯುದ್ಧ ಸಾಮಗ್ರಿಗಳನ್ನಿಡುವ ಶಸ್ತ್ರ ಶಾಲೆ, ಪರಿವೀಕ್ಷಣಾ ಗೋಪುರ. ಪ್ರವೇಶ ಶುಲ್ಕವಾಗಿ ಐದು ರುಪಾಯಿ ತೆತ್ತು ಒಳ ಸಾಗಿದರೆ, ನಮ್ಮನ್ನು ಎದುರುಗೊಳ್ಳುವುದು ಎಲ್ಲೆಲ್ಲೂ ಹಸಿರಿನಿಂದ ಕೂಡಿದ ಸುಂದರ ಉದ್ಯಾನ. ಕಣ್ಣು ಹಾಯಿಸಿದಷ್ಟು ದೂರವೂ ಕಂಗೊಳಿಸುವ ನಾನಾ ಬಣ್ಣದ ಹೂಗಳು. ಮುರಕಲ್ಲಿನಿಂದ ನಿರ್ಮಿಸಿದ ವಾಕಿಂಗ್ ಟ್ರ್ಯಾಕ್‌ನಿಂದ ಇಡೀ ಉದ್ಯಾನದ ಸೌಂದರ್ಯ ಸವಿಯಲು ಅನುಕೂಲ. ಕೋಟೆಯ ಹೊರಬದಿಗೂ ಟ್ರ್ಯಾಕ್ ನಿರ್ಮಾಣ ಕಾರ್ಯ ಸಾಗುತ್ತಿದೆ. ಕೋಟೆಯ ಮಧ್ಯ ಭಾಗದಲ್ಲಿ ಪುಟ್ಟಪುಟ್ಟ ಕಿಂಡಿಗಳುಳ್ಳ ಆಕರ್ಷಕವಾದ ಪರಿವೀಕ್ಷಣಾ ಗೋಪುರ. ಇಳಿಜಾರಾದ ರ್ಯಾಂಪ್‌ನಲ್ಲಿ ಇದನ್ನು ಏರುವುದೇ ಒಂದು ಮಜಾ. ಇಲ್ಲಿಂದ ಇಡೀ ಕೋಟೆಯನ್ನು ವೀಕ್ಷಿಸಬಹುದು. ವಿಶಾಲವಾದ ಸಮುದ್ರ ಹಾಗೂ ಉದ್ಯಾನದ ನೋಟಕ್ಕೆ ಸಾಟಿಯೇ ಅಲ್ಲ. ಅಪರೂಪಕ್ಕೆ ಕಾಮನಬಿಲ್ಲಿನ ದರ್ಶನ ಭಾಗ್ಯ. ಕೋಟೆಯ ಸುತ್ತಲೂ ಹತ್ತು ಕಿರು ಗೋಪುರಗಳಿವೆ. ಅವುಗಳ ಗೋಡೆಯಲ್ಲಿ ಚಿಕ್ಕ ಚಿಕ್ಕ ಕಿಂಡಿಗಳಿವೆ. ಪಶ್ಚಿಮ ಭಾಗದಲ್ಲಿ ಈ ಕಿಂಡಿಗಳಿಂದ ಕಾಣುವ ನೀಲ ಸಮುದ್ರ ಪ್ರವಾಸಿಗರ ಕಣ್ಣಿಗೆ ಹಬ್ಬ. ಪ್ರಕೃತಿ ಅವಕಾಶ ಕೊಟ್ಟರೆ, ಸಂಜೆಯ ಸುಂದರ ಸೂರ್ಯಾಸ್ತವನ್ನೂ ವೀಕ್ಷಿಸಬಹುದು. ಅದನ್ನು ನೋಡುವವರಿಗಾಗಿ ಆಸನ ವ್ಯವಸ್ಥೆಯೂ ಇದೆ. ಆದರೆ ಸಮುದ್ರಕ್ಕೆ ಇಳಿಯುವುದು ಅಪಾಯಕ್ಕೆ ಆಹ್ವಾನ. ಅಲ್ಲಲ್ಲಿ ಎಚ್ಚರಿಕಾ ಫಲಕಗಳನ್ನು ಹಾಕಲಾಗಿದ್ದು, ಸೆಕ್ಯುರಿಟಿಯವರು ಆಗಾಗ್ಗೆ ಎಚ್ಚರಿಸುತ್ತಿರುತ್ತಾರೆ. ದಕ್ಷಿಣ ಭಾಗದಲ್ಲಿ ಉದ್ದಕ್ಕೂ ಚಾಚಿರುವ ಕಡಲ ಕಿನಾರೆಯಲ್ಲಿ ಸಾಲಾಗಿ ನಿಂತಿರುವ ದೋಣಿಗಳ ರಮಣೀಯ ದೃಶ್ಯದ ಅವಕಾಶವಿದೆ. ಇಲ್ಲಿ ಗೈಡ್‌ಗಳ ವ್ಯವಸ್ಥೆ ಇಲ್ಲ. ಪ್ರವೇಶ ದ್ವಾರದಲ್ಲೇ ಫಲಕಗಳ ಮೂಲಕ ಮಾಹಿತಿಯನ್ನು ನೀಡಲಾಗಿದೆ. ಸಂಜೆ 5.30ಕ್ಕೆ ಪ್ರವೇಶಾವಕಾಶ ಮುಕ್ತಾಯ. ಹನುಮನನ್ನೂ ನೋಡಿ ಮುಖ್ಯ ಪ್ರವೇಶ ದ್ವಾರದ ಮೂಲಕ ಒಳ ಪ್ರವೇಶಿಸಿದ ಕೂಡಲೇ ಸುಂದರವಾದ ಹನುಮನ ಗುಡಿಯೊಂದು ಕಾಣ ಸಿಗುತ್ತದೆ. ಅಲ್ಲಿನ ಮೌನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ರಾಮಾಯಣದ ವಿವಿಧ ಸನ್ನಿವೇಶಗಳನ್ನು ಉಬ್ಬು ಶಿಲ್ಪಗಳಲ್ಲಿ ಕೆತ್ತಲಾಗಿದ್ದು, ನೋಡುಗರ ಮನ ಸೆಳೆಯುತ್ತದೆ. ಕದಂಬರ ನಾಡು ಹಿಂದೆ ಬೇಕಲವು ಕರ್ನಾಟಕದ ಕದಂಬ ರಾಜಮನೆತನದ ಆಳ್ವಿಕೆಯಲ್ಲಿತ್ತು. ಕೊಲತುನಾಡು ರಾಜರ ಆಳ್ವಿಕೆಯ ಸಂದರ್ಭದಲ್ಲಿ ಬೇಕಲವು ಕೇರಳದ ಪ್ರಸಿದ್ಧ ನಗರವಾಯಿತು. ಅದೇ ಸಂದರ್ಭದಲ್ಲಿ ವಿಜಯನಗರ ಮತ್ತು ಪೋರ್ಚುಗೀಸ್, ಯುರೋಪ್ ದೇಶಗಳೊಂದಿಗೆ ವಾಣಿಜ್ಯ ಸಂಪರ್ಕ ಇತ್ತು. ವಿಜಯನಗರದ ಚಕ್ರಾಧಿಪತ್ಯ ಪತನಗೊಂಡ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡಿನ ಒಂದು ಭಾಗ ಕೆಳದಿ ನಾಯಕರ ಪಾಲಾಯಿತು. 1650 ಕ್ರಿ.ಶ.ದಲ್ಲಿ ಬಿದನೂರಿನ ಶಿವಪ್ಪ ನಾಯಕನು (1645-1660) ಈ ಕೋಟೆಯನ್ನು ನಿರ್ಮಿಸಿದ. ಕ್ರಿ.ಶ. 1763ರಲ್ಲಿ ಈ ಕೋಟೆ ಹೈದರ್ ಆಲಿಯ ವಶವಾಯಿತು. ಟಿಪ್ಪುವಿನ ಆಡಳಿತಾವಧಿಯಲ್ಲಿ ಇದು ತುಳುನಾಡು ಹಾಗು ಮಲಬಾರ್ ಪ್ರದೇಶದ ಆಡಳಿತ ಕೇಂದ್ರವಾಗಿತ್ತು. ಟಿಪ್ಪುವಿನ ನಿಧನ ನಂತರ ಬ್ರಿಟಿಷರ ಪಾಲಾಯಿತು. ಇದು ಬೇಕಲ ಕೋಟೆಯ ಚರಿತ್ರೆ. ಹೀಗೆ ಬನ್ನಿ ಮಂಗಳೂರಿನಿಂದ ಬೇಕಲಕೋಟೆಗೆ 65 ಕಿ.ಮೀ. ಕಾಸರಗೋಡಿನಿಂದ ದಕ್ಷಿಣಕ್ಕೆ 16 ಕಿ.ಮೀ. ಬೇಕಲಕ್ಕೆ ಹೋಗುವಾಗ ಮಾರ್ಗಮಧ್ಯದಲ್ಲಿ ಕಾಸರಗೋಡಿನಿಂದ 7 ಕಿ.ಮೀ. ದೂರದಲ್ಲಿ ಪ್ರಸಿದ್ಧವಾದ ಮಧೂರು ಸಿದ್ಧಿವಿನಾಯಕ ದೇವಸ್ಥಾನಕ್ಕೂ ಭೇಟಿ ಕೊಡಬಹುದು. -ಚಿತ್ರ-ಲೇಖನ: ಎನ್.ಸ್ವಾತಿ