ದರೋಜಿ ಕರಡಿ ಕಣ್ಣು ಹಾಯಿಸಿದಷ್ಟೂ ದೂರ ಹಚ್ಚಹಸಿರು. ಸುತ್ತಲೂ ಬಂಡೆಗಳಿಂದ ಆವೃತವಾದ... ಕಣ್ಣು ಹಾಯಿಸಿದಷ್ಟೂ ದೂರ ಹಚ್ಚಹಸಿರು. ಸುತ್ತಲೂ ಕಲ್ಲು ಬಂಡೆಗಳಿಂದ ಆವೃತವಾದ ಬೆಟ್ಟಗಳು, ಕುರುಚಲು ಗಿಡಗಳ ಪೊದೆಗಳಲ್ಲಿ ಹಕ್ಕಿಗಳ ಕಲರವ, ಪ್ರಶಾಂತ ವಾತಾವರಣ, ಅಲ್ಲಲ್ಲಿ ಭರ್ತಿಯಾದ ಕೆರೆಗಳು, ದಾಹ ನೀಗಿಸಿಕೊಳ್ಳಲು ಬರುವ ನಾಟ್ಯ ಮಯೂರಿಗಳ ಸಾಲು ನರ್ತನ, ಮರಿ ಕರಡಿಗಳ ಚಿನ್ನಾಟ, ಕಾಡು ಹಂದಿಗಳು, ತೋಳ, ನರಿ, ಮುಂಗುಸಿ, ಕಾಡು ಕೋಳಿ... ಅಬ್ಬಾ, ಒಂದೇ ಎರಡೇ! ಅಕ್ಷರಶಃ ಅದು ಪ್ರಾಣಿ-ಪಕ್ಷಿ ಸಂಕುಲಗಳ ಬೀಡು. ಇಂಥ ವೈವಿಧ್ಯಮಯ ಜೀವ ಸಂಕುಲದ ತಾಣವನ್ನು ಕಣ್ತುಂಬಿಕೊಳ್ಳಬೇಕೆಂದರೆ ನೀವು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕಿಷ್ಕಿಂದೆಯ ಮಡಿಲಿನ ದರೋಜಿ ಕರಡಿ ಧಾಮಕ್ಕೆ ಭೇಟಿ ನೀಡಬೇಕು. ಬಿರು ಬಿಸಿಲಿಗೆ ಹೆಸರಾದ ಬಳ್ಳಾರಿಯಲ್ಲಿ ಎರಡು ದಶಕಗಳಿಂದ ಇರುವ ಈ ಪ್ರವಾಸಿ ತಾಣ ಬಹುತೇಕರಿಗೆ ಅಪರಿಚಿತ. ವಿಶ್ವವಿಖ್ಯಾತ ಹಂಪಿಗೆ ಕೇವಲ 15 ಕಿ.ಮೀ. ದೂರದಲ್ಲಿರುವ 'ದರೋಜಿ' ಇಡೀ ಏಷ್ಯಾ ಖಂಡದಲ್ಲಿಯೇ ಏಕೈಕ ಕರಡಿ ಧಾಮ. ಹೈದರಾಬಾದ್ ಕರ್ನಾಟಕದಲ್ಲಿಯೇ ಏಕೈಕ ವನ್ಯಧಾಮ. ಖ್ಯಾತ ವನ್ಯಜೀವಿ ಛಾಯಾಗ್ರಾಹಕ, ಮಾಜಿ ಮುಖ್ಯಮಂತ್ರಿ ದಿ. ಎಂ.ವೈ. ಘೋರ್ಪಡೆ ಅವರ ಪರಿಶ್ರಮದ ಫಲ ಈ ಧಾಮ. 1994ರ ಅಕ್ಟೋಬರ್ 17ರಂದು ರಾಜ್ಯ ಸರ್ಕಾರ 5587.30 ಹೆಕ್ಟೇರ್ ಪ್ರದೇಶ ಬಿಳಿಕಲ್ಲು ಸಂರಕ್ಷಿತ ವನವಾಗಿದ್ದ ಈ ಪ್ರದೇಶವನ್ನು ಕರಡಿ ಧಾಮ ಎಂದು ಘೋಷಿಸಿತು. ಪುನಃ 2010ರಲ್ಲಿ ಬುಕ್ಕಸಾಗರ ಕಾಯ್ದಿಟ್ಟ ಅರಣ್ಯದ 268050 ಹೆಕ್ಟೇರನ್ನು ಈ ಧಾಮಕ್ಕೆ ಸೇರಿಸಲಾಗಿದೆ. ಇದು ದರೋಜಿ ಗ್ರಾಮದಿಂದ ಹಿಡಿದು ಹೊಸಪೇಟೆ ತಾಲೂಕಿನ ರಾಮಸಾಗರದವರೆಗೆ ಹರಡಿದೆ. ಇಲ್ಲಿ 140 ಕರಡಿಗಳಿವೆ. ನಿಸರ್ಗದತ್ತ ಗುಹೆಗಳು ಕರಡಿಗಳ ವಾಸ ಮತ್ತು ಸಂತಾನಾಭಿವೃದ್ಧಿಗೆ ಹೇಳಿ ಮಾಡಿಸಿದಂತಿದೆ. ಸರ್ಕಾರ ಹಾಗೂ ಸ್ಥಳೀಯರು ಕರಡಿಗಳ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿರುವುದು ವಿಶೇಷ. ಇಲ್ಲಿನ ವಾಚ್ ಟವರ್ ಏರಿದರೆ ಕರಡಿ ಧಾಮದ ಸಂಪೂರ್ಣ ನೋಟ ಗೋಚರ. ಕರಡಿಗಳು ಆಹಾರಕ್ಕಾಗಿ ಹೊಲಗಳಿಗೆ ದಾಳಿ ಮಾಡಿದ ಪ್ರಮೇಯವೇ ಇಲ್ಲಿಲ್ಲ. ಕಾರೆ, ಕವಳೆ, ಬಿಕ್ಕೆ, ಉಲುಪಿ, ಜಾನೆ, ಬೋರೆ, ನೇರಳೆ ಮುಂತಾದ ಕಾಡು ಹಣ್ಣಿನ ಮರ- ಗಿಡಗಳು ಇಲ್ಲಿ ಯಥೇಚ್ಛ. ಅರಣ್ಯ ಇಲಾಖೆ ಸೀತಾಫಲ, ಮೆಕ್ಕೆಜೋಳ, ಸಿಂಗಾಪುರ ಚೆರ್ರಿ ಮುಂತಾದವುಗಳ ನೆಡುತೋಪುಗಳನ್ನು ಬೆಳೆಸುತ್ತಿದೆ. ಜತೆಗೆ ನಿತ್ಯ ಆಹಾರ ಒದಗಿಸುತ್ತಿದೆ. ಉಳಿದಂತೆ ಗೆದ್ದಲು, ಜೇನಿಗಿಲ್ಲಿ ಕೊರತೆಯಿಲ್ಲ. ಕುಡಿಯುನ ನೀರಿನ ತೊಟ್ಟಿಗಳು, ಚೆಕ್ ಡ್ಯಾಂ ಹಾಗೂ ಪುಟ್ಟ ಕೆರೆಗಳು ಸೇರಿದಂತೆ ಒಟ್ಟು 71 ನೀರಿನ ಶೇಖರಣ ತಗ್ಗು ಪ್ರದೇಶಗಳಿವೆ. ಮತ್ತೇನುಂಟು? ಇದು ಕರಡಿ ಧಾಮವಾಗಿದ್ದರೂ ಇಲ್ಲಿ ಚಿರತೆ, ತೋಳ, ಕತ್ತೆ ಕಿರುಬ, ಕಾಡುಹಂದಿ, ನಕ್ಷತ್ರ ಆಮೆ, ಮುಳ್ಳುಹಂದಿ, ಪಾಂಗೋಲಿನ್, ಉಡ, ಮುಂಗುಸಿ, ನವಿಲು, ಕೌಜುಗ, ಕಾಡುಕೋಳಿ ಮುಂತಾದ ವನ್ಯಜೀವಿಗಳಿವೆ. ಅನೇಕ ಜಾತಿಯ ಸಸ್ಯಗಳು, 150ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು 30ಕ್ಕೂ ಹೆಚ್ಚು ವಿವಿಧ ಚಿಟ್ಟೆಗಳಿವೆ. ವಸತಿ ಕಮಲಾಪುರದಲ್ಲಿ ತಂಗುವ ವ್ಯವಸ್ಥೆ ಇದೆ. 6 ಕಿ.ಮೀ. ಅಂತರದಲ್ಲಿ ದರೋಜಿ ಪ್ರವಾಸಿ ಮಂದಿರವಿದೆ. ನಿಗದಿತ ಶುಲ್ಕ ಪಾವತಿಸಿ ಪ್ರಾಣಿಗಳನ್ನು ವೀಕ್ಷಿಸಬಹುದು. ವ್ಯಾಸನಕೆರೆ ಬಳಿಯ ಅರಣ್ಯ ಇಲಾಖೆ ವಸತಿ ಗೃಹ, ಎಚ್‌ಪಿಸಿ ಗೆಸ್ಟ್ ಹೌಸ್, ಪಿಡಬ್ಲ್ಯೂಡಿ ಗೆಸ್ಟ್ ಹೌಸ್, ಕೆಎಸ್‌ಟಿಡಿಸಿಯ ಮಯೂರ್ ಭುವನೇಶ್ವರಿ, ಟಿ.ಬಿ. ರಸ್ತೆಯ 'ವೈಕುಂಠ'ದಲ್ಲಿ ತಂಗಲು ಅವಕಾಶವಿದೆ. ಟೂರ್‌ಗೆ ಸೂಕ್ತ ಟೈಂ? ಇಲ್ಲಿಗೆ ಭೇಟಿ ನೀಡಲು ಆಗಸ್ಟ್- ಜೂನ್‌ವರೆಗೆ ಸೂಕ್ತ ಕಾಲ. ಬೆಳಗ್ಗೆ 5.30 ರಿಂದ 6.30 ಬಿಟ್ಟರೆ ಸಂಜೆ 4 ರಿಂದ 6.15ರ ವರೆಗೆ ಧಾಮದ ವೀಕ್ಷಣಾ ಗೋಪುರದಲ್ಲಿ ನಿಂತು ಕರಡಿಗಳು ಸೇರಿದಂತೆ ವನ್ಯಜೀವಿಗಳ ದರ್ಶನ ಮಾಡಬಹುದು. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, ಕರಡಿಗಳ ಹಿಂಡೇ ಕಾಣಸಿಗುತ್ತದೆ. ಜೊತೆಗೊಂದು ಬೈನಾಕುಲರ್ ಇದ್ದರೆ ಇನ್ನೂ ಮಜಾ. - ಚಿತ್ರ, ಲೇಖನ: ಸ್ವರೂಪಾನಂದ ಎಂ. ಕೊಟ್ಟೂರು