ಮೂಡುಗಲ್ಲು ಶಿವ ದಟ್ಟ ಕಾನನದ ನಡುವೆ 50 ಅಡಿ ಉದ್ದದ ಕೆಂಪುಗಲ್ಲ ಗುಹೆ. ನೀರಿನೊಳಗೇ ಸಾಗಿದರೆ ಸಿಗುವ ಗುಹಾಂತರ ದೇವಸ್ಥಾನ. ಅಲ್ಲಿ ಕೇಶವನಾಥನ ಉದ್ಭವ ಲಿಂಗ. ಕುಂದಾಪುರ ತಾಲೂಕಿನ ಕೆರಾಡಿ ಎಂಬಲ್ಲಿನ ಕುಗ್ರಾಮ ಮೂಡುಗಲ್ಲು ಎಂಬಲ್ಲಿದೆ ಈ ವಿಶಿಷ್ಟ ದೇವಸ್ಥಾನ. ಸಮುದ್ರ ಮಟ್ಟಕ್ಕೆ ಸಮನಾಗಿ ಇಂತಹ ಅಪರೂಪದ ತಾಣವೊಂದು ಇದೆ ಎನ್ನುವುದೇ ಹೊರಜಗತ್ತಿಗೆ ಗೊತ್ತಿಲ್ಲ. ಇಲ್ಲಿನ ವಿಶೇಷಗಳ ಬಗ್ಗೆ ಏನೆಂದು ಹೇಳುವುದು? ಗುಹೆಯ ನೀರಿನಲ್ಲಿ ಸಾಕಷ್ಟು ಮೀನುಗಳು, ಹಾವುಗಳಿವೆ. ಅವು ಯಾರಿಗೂ ಏನೂ ತೊಂದರೆ ಮಾಡಿದ ಘಟನೆಯನ್ನು ಇದುವರೆಗೆ ಕೇಳಿದವರಿಲ್ಲ. ಅಲ್ಲದೇ ಈ ಗುಹೆಗೆ ಸಮಾನಾಂತರವಾಗಿ ಅಶ್ವಥಕಟ್ಟೆಯಿದ್ದು, ಅಶ್ವಥಕಟ್ಟೆಗೂ ಗುಹೆಗೂ ನೇರ ಬೆಳಕಿನ ರೇಖೆಗಳು ಹಾದು ಹೋಗುತ್ತವೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ಇನ್ನೊಂದು ವಿಶೇಷ ಎಂದರೆ ಗುಹೆಯಲ್ಲಿರುವ ನೀರು ಎಲ್ಲಾ ಋತುಮಾನಗಳಲ್ಲೂ ಒಂದೇ ರೀತಿಯಾಗಿರುತ್ತದೆ. ಮಳೆಗಾಲದಲ್ಲಿ ಇಲ್ಲಿನ ನೀರು ನಾಲ್ಕು ಇಂಚುಗಳಷ್ಟು ಜಾಸ್ತಿಯಾಗುತ್ತದೆಯೇ ವಿನಾ ಶಿವಲಿಂಗ ಮುಳುಗುವುದಿಲ್ಲ. ಇಲ್ಲಿನ ಮೀನುಗಳು ಮಳೆಗಾಲದಲ್ಲಿ ಬೇರೆ ನದಿಗಳಿಗೆ ಹೋಗಿ ಮತ್ತೆ ಇಲ್ಲಿಗೆ ಮರಳುತ್ತವೆಯಂತೆ. ಇಷ್ಟೆಲ್ಲಾ ಮೀನುಗಳ ನಡುವೆ ಒಂದು ದೇವರ ಮೀನು ಇದ್ದು ಆ ಮೀನಿಗೆ ಮೂಗುತಿ ಚುಚ್ಚಲಾಗಿದೆ. ಅದು ಅಪರೂಪಕ್ಕೆ ದರ್ಶನ ನೀಡುತ್ತದೆಯಂತೆ. ಈ ಕ್ಷೇತ್ರ ಬಗ್ಗೆ ಲಿಖಿತ ದಾಖಲೆಗಳು ಸಿಗುವುದಿಲ್ಲ. ಇದೊಂದು ಪ್ರಾಚೀನ ಗುಹಾಂತರ ದೇವಾಲಯ. ಶಿವ ಈ ಗುಹೆಯನ್ನು ಆಶ್ರಯಿಸಿ ಕಾಶಿಯನ್ನು ತಲುಪಿದ್ದಾನೆ ಎನ್ನುವ ಪ್ರತೀತಿ ಇದೆ. ಬ್ರಿಟಿಷ್ ಅಧಿಕಾರಿ ಕರ್ನಲ್ ಲಾರ್ಡ್ ಮೆಕ್ಕಿಂಜೆ ಇಲ್ಲಿಗೆ ಭೇಟಿ ನೀಡಿದ್ದರು ಎನ್ನುವ ಬಗ್ಗೆ ಮಾತ್ರ ಕೆಲವು ಉಲ್ಲೇಖಗಳು ಸಿಗುತ್ತವೆ. ಇಲ್ಲಿಂದ ಸುಮಾರು ಒಂದುವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಪ್ಪುಕಲ್ಲುಗಳಿಂದ ನಿರ್ಮಿಸಿದ ಕೋಟೆ ಈಗಲೂ ಇದೆ. ನಾಡಿನ ಬಹುತೇಕ ಕಡೆ ಇರುವ ಕೋಟೆಗಳೆಲ್ಲವೂ ಅವಶೇಷಗೊಂಡಿದ್ದರೂ ಇಲ್ಲಿನ ಕೋಟೆ ಮಾತ್ರ ಇಂದಿಗೂ ಕಿಂಚಿತ್ತೂ ಲೋಪವಾಗದೇ ಹಾಗೆಯೇ ಉಳಿದಿದೆ. ಜನವರಿ ತಿಂಗಳಂದು ಬರುವ ಎಳ್ಳಮವಾಸ್ಯೆಯಂದು ಇಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಆ ದಿನ ಮೇಲ್ಯ ಎನ್ನುವ ಕೆರೆಯಲ್ಲಿ ಹೂವಿನ ಎಸಳುಗಳು ತೇಲುವುದನ್ನು ಕಾಣಬಹುದು. ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಭಕ್ತಾದಿಗಳು ಆ ದಿನ ದುರ್ಗಮ ಹಾದಿಯಲ್ಲೇ ಕಾಲ್ನಡಿಗೆಯಲ್ಲಿ ಬಂದು ಬೆಳಿಗ್ಗೆ 4 ಗಂಟೆಯಿಂದಲೇ ತೀರ್ಥ ಸ್ನಾನಕ್ಕೆ ನಿರತರಾಗುತ್ತಾರೆ. ಚಾರಣ ಮಾಡಿ ಇಲ್ಲಿಗೆ ಬಂದವರು ಕೇವಲ ಇದೊಂದು ಸ್ಥಳವನ್ನು ಮಾತ್ರ ನೋಡಿ ಹಿಂದಿರುಗಬೇಕೆಂದೇನೂ ಇಲ್ಲ. ಏಕೆಂದರೆ ಇಲ್ಲಿಂದ ಕೊಡಚಾದ್ರಿ ಬೆಟ್ಟದ ನಡುವಲ್ಲಿ ಹರಿಯುವ ಬೆಣಗಲ ತೀರ್ಥ ಎನ್ನುವ ಜಲಪಾತಕ್ಕೆ ಚಾರಣ ಕೈಗೊಳ್ಳಬಹುದು. ಮೂಲಸೌಲಭ್ಯದ್ದೇ ಕೊರತೆ ಮೂಡುಗಲ್ಲು ಕೆರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಗ್ರಾಮ. ಪ್ರಕೃತಿದತ್ತವಾಗಿರುವ ಈ ವಿಶಿಷ್ಟ ಸ್ಥಳಕ್ಕೆ ಬರುವುದೇ ಒಂದು ಸಾಹಸ. ಇಲ್ಲಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಚಿತ್ತ ಹರಿಸಿಲ್ಲ. ಈ ಗ್ರಾಮಕ್ಕೆ ಬರಲು ಒಳ್ಳೆಯ ರಸ್ತೆಗಳಿಲ್ಲ. ಸುಮಾರು 3 ಕಿ.ಮೀ. ಕ್ರಮಿಸಿ ಬರಬೇಕಿದ್ದರೆ ಜನರು ತಮ್ಮ ಪ್ರಾಣ ಕೈಯಲ್ಲಿ ಹಿಡಿದೇ ಓಡಾಡಬೇಕಾದ ಪರಿಸ್ಥಿತಿ. ಮಳೆಗಾಲದಲ್ಲಿ ಅನಾರೋಗ್ಯ ಕಾಡಿದರಂತೂ ಬೇಗನೇ ಆಸ್ಪತ್ರೆಗೆ ಸಾಗಿಸಲು ಸಾಧ್ಯವಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ. ರಾತ್ರಿ ಸಮಯದಲ್ಲಿ ಕಾಡು ಪ್ರಾಣಿಗಳ ಭಯ. ಹೀಗೆ ಬನ್ನಿ ಉಡುಪಿಯಿಂದ ಕುಂದಾಪುರಕ್ಕೆ ಬರಬೇಕು. 40 ಕಿ.ಮೀ. ಕ್ರಮಿಸಿದರೆ ಕೆರಾಡಿ ಸಿಗುತ್ತದೆ. ಅಲ್ಲಿಂದ ಮೂಡುಗಲ್ಲು 4 ಕಿ.ಮೀ. - ಅಶ್ವಿನಿ ಎನ್. ಹಕ್ಲಾಡಿ