ತುಳಸಿಗೇರಿ ಚಾಲುಕ್ಯರು, ರಾಷ್ಟ್ರಕೂಟರ ಆಳ್ವಿಕೆಯಿಂದ ತನ್ನದೇ ಐತಿಹಾಸಿಕ ಮಹತ್ವ ಹೊಂದಿರುವ ಬಾಗಲಕೋಟೆ ಜಿಲ್ಲೆಗೆ ನಿತ್ಯ ಸಹಸ್ರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂಥವರು ಅಲ್ಲಿನ ತುಳಸಿಗೇರಿ ಗ್ರಾಮದ ಆಂಜನೇಯ ಗುಡಿಯನ್ನು ಖಂಡಿತಾ ಮರೆಯುವುದಿಲ್ಲ. ಇಲ್ಲಿ ತಿರುಪತಿ ತಿಮ್ಮಪ್ಪನ ಅವತಾರ ರೂಪದಲ್ಲಿ ಆಂಜನೇಯನನ್ನು ಪೂಜಿಸಲಾಗುತ್ತದೆ. ತುಳಸಿಗೇರಿ ಬೆಟ್ಟ ಪ್ರದೇಶ. ಇಲ್ಲಿ ಮೊದಲು ತುಳಸಿ ಗಿಡಗಳು ಅಪಾರ ಪ್ರಮಾಣದಲ್ಲಿದ್ದವಂತೆ. ನೀರ ಬೂದಿಹಾಳದ ದೇಸಾಯರು ತಿರುಪತಿ ತಿಮ್ಮಪ್ಪನ ಭಕ್ತರು. ಇವರು ಪ್ರತಿ ವರ್ಷ ವಿಜಯದಶಮಿ ಸಂದರ್ಭ ತಿರುಪತಿಗೆ ಚಿನ್ನ, ಬೆಳ್ಳಿನಾಣ್ಯಗಳನ್ನು ಅಶ್ವಗಳ ಮೇಲೆ ಹೇರಿಕೊಂಡು ಅಲ್ಲಿ ನಡೆಯುವ ಬ್ರಹ್ಮೋತ್ಸವಕ್ಕೆ ಅರ್ಪಿಸುವ ಪರಂಪರೆ ಹೊಂದಿದ್ದರಂತೆ. ಒಮ್ಮೆ ಕನಸಿನಲ್ಲಿ ದೇಸಾಯಿ ಅವರಿಗೆ ತಿಮ್ಮಪ್ಪ ಕಾಣಿಸಿಕೊಂಡು, 'ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಇಷ್ಟು ದೂರದಿಂದ ಆಗಮಿಸುವ ನಿನಗೆ ಇನ್ನು ನಿಮ್ಮೂರಲ್ಲೇ ದರ್ಶನ ಭಾಗ್ಯ ನೀಡುತ್ತೇನೆ' ಎಂದನಂತೆ. ದೇಸಾಯಿ ಅವರಿಗೆ ನಿತ್ಯ ಅಚ್ಚರಿಯೊಂದಿಗೆ, ಚಿಂತೆಯೂ ಶುರುವಾಯಿತು. ತಿಮ್ಮಪ್ಪ ತಮ್ಮ ಊರ ಹತ್ತಿರ ಯಾವ ರೂಪದಲ್ಲಿ ಪೂಜಿಸಲು ಸಿಗಬಹುದು ಎಂದೆಲ್ಲಾ ಆಲೋಚನೆ ಕಾಡಿತು. ಅವರ ಮನೆಯಲ್ಲಿ ಹಸುಗಳನ್ನು ಸಾಕಿದ್ದರು. ಅವುಗಳನ್ನು ಕಾಯಲೆಂದು ಒಬ್ಬ ಗೋಪಾಲಕನನ್ನು ನೇಮಿಸಿದ್ದರು. ದಿನವೂ ಆತ ಈ ತುಳಸಿ ವನದತ್ತ ಗೋವುಗಳನ್ನು ಮೇಯಿಸಲೆಂದು ಹೋಗುತ್ತಿದ್ದ. ಅವುಗಳಲ್ಲಿ ಒಂದು ಹಸು ದಿನವೂ ತುಳಸಿ ವನಗಳ ಮಧ್ಯೆ ಕೆಲಹೊತ್ತು ವಿಶ್ರಮಿಸುತ್ತಿತ್ತು. ಮನೆಗೆ ಬಂದಾಗ ಎಲ್ಲ ಹಸುಗಳಂತೆ ಅದು ಹಾಲು ಬಿಡುತ್ತಿರಲಿಲ್ಲ. ಇದೊಂದೇ ಯಾಕೆ ಈ ರೀತಿ ಮಾಡುತ್ತಿದೆ ಎಂಬುದನ್ನು ಅರಿಯಲು ಆ ಗೋಪಾಲಕ ಒಮ್ಮೆ ಹಸುವನ್ನು ಹಿಂಬಾಲಿಸಿದ. ಆಗ ಆ ಗೋವು ತುಳಸೀವನದ ಹುತ್ತವೊಂದಕ್ಕೆ ಹಾಲು ಹರಿಸುವ ದೃಶ್ಯ ಕಂಡು ಸೋಜಿಗನಾದ. ಇದು ತನ್ನಷ್ಟಕ್ಕೆ ತಾನೇ ಹುತ್ತಕ್ಕೆ ಹಾಲು ಬಿಡುತ್ತಿದೆಯಲ್ಲ ಎಂದು ಓಡೋಡಿ ಬಂದು ದೇಸಾಯಿಗೆ ಈ ವಿಷಯ ತಿಳಿಸಿದ. ಆಗ ದೇಸಾಯಿ, ತಿರುಪತಿ ತಿಮ್ಮಪ್ಪನ ಆ ಕನಸು ನೆನಪಿಸಿಕೊಂಡು ಆ ಸ್ಥಳಕ್ಕೆ ಬಂದ. ಆಗ ಹುತ್ತದ ಒಳಗೆ ಆಂಜನೇಯನ ಉದ್ಭವ ಮೂರ್ತಿ ಗೋಚರವಾಯಿತು. ಇದು ತಿರುಪತಿ ತಿಮ್ಮಪ್ಪನ ಪ್ರತಿರೂಪ ಎಂದು ತಿಳಿದು ಕ್ರಿ.ಶ. 1102ರಲ್ಲಿ ಈ ತಾಣದಲ್ಲಿ ಹನುಮಾನ್ ಮಂದಿರ ನಿರ್ಮಿಸಿದನಂತೆ. ಈ ರೀತಿ ತುಳಸಿಗೇರಿ ಹನುಮಪ್ಪ ಆ ಭಾಗದ ಭಕ್ತರಿಗೆಲ್ಲ ತಿರುಪತಿ ತಿಮ್ಮಪ್ಪನ ಪ್ರತಿರೂಪ. ಇಂಥ ವೈಶಿಷ್ಟ್ಯಪೂರ್ಣ ಹಿನ್ನೆಲೆಯಿರುವ ತುಳಸಿಗೇರಿಯ ಆಂಜನೇಯ ದೇಗುಲ ಇಂದು ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಧಾರ್ಮಿಕ ಕೇಂದ್ರವಾಗಿಯೂ ಜನರನ್ನು ಆಕರ್ಷಿಸುತ್ತಿದೆ. ಯಾವಾಗಲು ಭಕ್ತರಿಂದ ಕೂಡಿರುತ್ತದೆ. ಹೀಗೆ ಬನ್ನಿ... ಬೆಂಗಳೂರಿನಿಂದ ಬಾಗಲಕೋಟೆಗೆ 485 ಕಿ.ಮೀ. ದೂರವಿದ್ದು, 8 ತಾಸುಗಳ ಜರ್ನಿ. ಇಲ್ಲಿಂದ ಮುಧೋಳ ಮಾರ್ಗದಲ್ಲಿ ಹೋಗುವ ಎಲ್ಲ ಬಸ್‌ಗಳೂ ತುಳಸಿಗೇರಿ (25 ಕಿ.ಮೀ.) ಮೂಲಕವೇ ಸಾಗುತ್ತವೆ. ಈ ಗ್ರಾಮ ಬಾಗಲಕೋಟೆಯಿಂದ 15 ಕಿ.ಮೀ., ಕಲಾದಗಿಯಿಂದ 5 ಕಿ.ಮೀ. ಲೋಕಾಪುರದಿಂದ 22 ಕಿ.ಮೀ ಅಂತರದಲ್ಲಿದೆ. - ಚಿತ್ರ-ಲೇಖನ: ವೈ.ಬಿ.ಕಡಕೋಳ yallappakadakol12@.