ಕಸ್ಟಮೈಸ್ಡ್ ರೋವರ್ ಮನೆಯಲ್ಲಿ ಹೆಂಡತಿಯನ್ನು ಬಿಟ್ಟು ಪ್ರತಿಯೊಂದನ್ನೂ ನೀವು ಹೇಳಿದಂತೆ ಕೇಳಿಸುವ ಕಾಲ ಬರಬಹುದು. ಈಗಾಗಲೇ ಕೈನಲ್ಲಿರುವ ಸ್ಮಾರ್ಟ್‌ಫೋನ್ ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ಮನೆಯಲ್ಲಿನ ಪ್ರತಿ ವಿನ್ಯಾಸ ಹಾಗೂ ಸುರಕ್ಷಾ ಕ್ರಮಗಳನ್ನು ಅದೇ ರೀತಿ ಮಾಡಬಹುದಾದ ತಂತ್ರಜ್ಞಾನಗಳು ಲಭ್ಯವಿವೆ. ಇನ್ನು ಬಾಕಿ ಉಳಿದಿರುವುದು ವಾಹನ ಮಾತ್ರ. ನಿಮಗೆಲ್ಲ ತಿಳಿದಂತೆ ಚಾಲಕ ರಹಿತ ಕಾರನ್ನು ಈಗಾಗಲೇ ಪ್ರಯೋಗಾರ್ಥವಾಗಿ ಗೂಗಲ್ ಓಡಿಸಿದೆ. ಆದರೆ ವಾಹನ ಚಲಾಯಿಸುವ ಮಜಾ ಅದರಲ್ಲಿ ಸಿಗುವುದಿಲ್ಲ. ನಿಮ್ಮ 'ಚಾಲಕ'ತನಕ್ಕೆ ಇನ್ನಷ್ಟು ಸಹಕಾರಿಯಾಗುವ ನಿಟ್ಟಿನಲ್ಲಿ ಜಾಗ್ವಾರ್ ರೇಂಜ್ ರೋವರ್ ಅದ್ಭುತವಾದ ಕಾನ್ಸೆಪ್ಟ್‌ವೊಂದನ್ನು ಬಿಟ್ಟಿದೆ. ನಿಮ್ಮ ಕಾರೂ ನೀವು ಹೇಳಿದಂತೆ ಕೇಳುತ್ತದೆ, ಹಾಗೆಯೇ ನಿಮ್ಮನ್ನು ನೋಡಿದ ತಕ್ಷಣ ನಿಮಗೆ ಬೇಕಾದ ಹಾಗೆ ಬದಲಾಗುತ್ತದೆ. ದಿಲೀಪ್ ಛಾಬ್ರಿಯಾ ಅವರ ಕಸ್ಟಮೈಸ್ಡ್ ಕಾರು ನೋಡಿರುತ್ತೀರಿ. ಇದು ಕೇವಲ ವಿನ್ಯಾಸಕ್ಕೆ ಸೀಮಿತವಾಗಿತ್ತು. ಆದರೆ ಜಾಗ್ವರ್‌ನ ಈ ನೂತನ ಕಾನ್ಸೆಪ್ಟ್ ಕಾರನ್ನು ನಿಮಗೆ ಹಾಗೂ ನಿಮ್ಮ ಆಲೋಚನೆಗೆ ತಕ್ಕಂತೆ ಕಸ್ಟಮೈಸ್ಡ್ ಮಾಡಿಕೊಳ್ಳಬಹುದು. ಆದರೆ ವಿನ್ಯಾಸದಲ್ಲಲ್ಲ, ಬದಲಾಗಿ ಕಾರಿನ ಸಾಫ್ಟ್‌ವೇರ್ ಮೂಲಕ ನಿಮಗೆ ಬೇಕಾದಂತೆ ರೂಪಿಸಿಕೊಳ್ಳಬಹುದು. ನಿಮ್ಮನ್ನು ನೋಡಿದ ತಕ್ಷಣವೇ 'ಓಹ್ ನನ್ನ ಯಜಮಾನ ಬಂದ' ಎಂದು ಗಾಡಿ ಅನ್‌ಲಾಕ್ ಆಗುತ್ತದೆ. ನೀವು ಬಾಗಿಲು ತೆಗೆದ ತಕ್ಷಣ ಸ್ಟಿಯರಿಂಗ್, ಗೇರ್, ಸೀಟು, ಟೆಂಪರೇಚರ್, ಮ್ಯೂಸಿಕ್ ಪ್ರತಿಯೊಂದು ನಿಮ್ಮ ಆಯ್ಕೆಯ ಅಥವಾ ಇಷ್ಟದ ತಕ್ಕಂತೆ ಬದಲಾಗಿರುತ್ತದೆ. ನಿಮ್ಮ ಸ್ಪರ್ಶವಾಗುತ್ತಿದ್ದಂತೆ ಗಾಡಿ ಇಷ್ಟೆಲ್ಲ ಬದಲಾವಣೆ ಕಾಣುತ್ತದೆ. ಮನೆಯಲ್ಲಿ ಹೆಂಡತಿ ಅಥವಾ ಗೆಳತಿಯೂ ಕ್ಷಣಾರ್ಧದಲ್ಲಿ ಇಷ್ಟೊಂದು ಹೊಂದಿಕೊಂಡು ಹೋಗುವುದು ಕಷ್ಟವಾದೀತು ಅಲ್ಲವೇ? ಈ ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಲಾಗುತ್ತದೆ. ಗಾಡಿಯ ಚಾಲಕ ಅಥವಾ ಯಜಮಾನನ ಸ್ಟಾರ್ಟಿ ಈ ಕಾರಿನ ಸಾಫ್ಟವೇರ್‌ನೊಂದಿಗೆ ಇಂಟಿಗ್ರೇಟ್ ಆಗಿರುತ್ತದೆ. ಕಾರಿನ ಹತ್ತಿರ ಬಂದ ತಕ್ಷಣ ಸ್ಮಾರ್ಟ್‌ಪೋನ್‌ನ್ನು ಗ್ರಹಿಸಿ ಈ ರೀತಿಯ ಬದಲಾವಣೆ ಕಾರಲ್ಲಿ ಆಗುತ್ತದೆ. ಈ ಕಾನ್ಸೆಪ್ಟ್ ಕಾರಿನ ತಂತ್ರಜ್ಞಾನ ಇಷ್ಟಕ್ಕೆ ಮುಗಿದಿಲ್ಲ. ಬದಲಾಗಿ ನೀವು ಚಲಿಸುತ್ತಿರುವ ಮಾರ್ಗದಲ್ಲಿನ ಸಂಚಾರ ದಟ್ಟಣೆ, ಪರ್ಯಾಯ ಮಾರ್ಗದ ಬಗೆಗೂ ಸಲಹೆ ನೀಡುತ್ತದೆ. ಇನ್ನು ಕೆಲವರಿಗೆ ಇಂಧನ ಟ್ಯಾಂಕ್ ಖಾಲಿಯಾಗಿ ದೂಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗುವವರೆಗೂ ತುಂಬಿಸುವ ರೂಢಿಯಿರುವುದಿಲ್ಲ. ಅದಕ್ಕಾಗಿ 'ಹೇ ಯಜಮಾನ, ಇಲ್ಲೇ ಪೆಟ್ರೋಲ್ ಬಂಕ್ ಇದೆ, ತುಸು ಜೇಬು ಖಾಲಿ ಮಾಡ್ಕೊ' ಎಂದು ಕಾರೇ ನಿಮಗೆ ಬುದ್ಧಿ ಹೇಳುತ್ತದೆ! ಇನ್ನು ದಿನಾ ಬೆಳಗ್ಗೆದ್ದು ಕಚೇರಿಗೆ ಹೋಗುವಾಗ ಅಥವಾ ಬರುವಾಗ ಗರ್ಲ್‌ಫ್ರೆಂಡ್/ ಹೆಂಡತಿಗೆ ಕರೆ ಮಾಡುವ ಅಭ್ಯಾಸ ಇದೆ ಎಂದಿಟ್ಟುಕೊಳ್ಳಿ. ಒಂದು ದಿನ ಯಾವುದೇ ಕೆಲಸದಲ್ಲಿ ಮರೆತರೆ ಕಾರಿನಲ್ಲಿನ ಗ್ಯಾಜೆಟ್ ನಿಮಗೆ 'ಕರೆ ಮಾಡು ಗೆಳೆಯ' ಎಂದು ಎಚ್ಚರಿಸುತ್ತದೆ. ಆಕೆಯಿಂದ ಮಂತ್ರಾಕ್ಷತೆ ಹಾಕಿಸಿಕೊಳ್ಳುವ ಮೊದಲೇ ಮಾತನಾಡಿ ಖುಷಿ ಪಡಿಸಬಹುದು, ಏನಾದರೂ ಯಡವಟ್ಟಾಗಿದ್ದರೆ ಬೈಸಿಕೊಳ್ಳಲು ಸಾಧ್ಯವಿದೆ!