ಫಾಲ್ಸ್ ಬೆಳಗಾವಿ ಎಂದಾಕ್ಷಣ ಥಟ್ಟನೆ ನೆನಪಾಗೋದೇ ಕುಂದಾ, ಗೋಕಾಕಿನ ಕರದಂಟು... ಬೆಳಗಾವಿ ಎಂದಾಕ್ಷಣ ಥಟ್ಟನೆ ನೆನಪಾಗೋದೇ ಕುಂದಾ, ಗೋಕಾಕಿನ ಕರದಂಟು. ಅಷ್ಟೇ ಸಿಹಿ ಅನುಭವ ಕೊಡುವ ಹಲವು ಜಲಪಾತಗಳೂ ಜಿಲ್ಲೆಯಲ್ಲಿವೆ. ಅವುಗಳಲ್ಲಿ ಮುಖ್ಯಾಕರ್ಷಣೆ ಗೋಕಾಕ್ ಮತ್ತು ಗೊಡಚಿನಮಲ್ಕಿ ಫಾಲ್ಸ್. ಒಂದು ಮನೆಯಂಗಳದ ರಂಗೋಲಿಯಂತೆ ಹರಡಿಕೊಂಡು ಚಿತ್ತಾರ ಮೂಡಿಸಿದರೆ, ಮತ್ತೊಂದು ನಾರಿಯ ನೀಳ ಜಡೆಯಂತೆ ಗೋಚರವಾಗುತ್ತೆ. ಘಟಪ್ರಭಾ ನದಿಯ ಗೋಕಾಕ್ ಫಾಲ್ಸ್, ಮಾರ್ಕಂಡೇಯ ನದಿಯ ಗೊಡಚಿನಮಲ್ಕಿ ಜಲಪಾತಗಳು ಸೌಂದರ್ಯದಲ್ಲಿ ಅವಳಿ ಸಹೋದರಿಯರಂತಿವೆ. ಗೊಡಚಿನಮಲ್ಕಿ ಜಲಪಾತ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳೆರಡೂ ಹರಿಯುವುದು ಪೂರ್ವಾಭಿಮುಖವಾಗಿ. ಉದಯಿಸುವ ಸೂರ್ಯನನ್ನು ನೋಡೋದಕ್ಕೆ ಧಾವಿಸಿ ಬರುತ್ತಿವೆ ಅನ್ನುವ ಹಾಗೇ ಹರಿಯುವ ಘಟಪ್ರಭಾ, ಮಾರ್ಕಂಡೇಯ ನದಿಗಳು ಮಹಾರಾಷ್ಟ್ರ- ಕರ್ನಾಟಕದಲ್ಲಿ ಹಲವು ಜಲಪಾತಗಳನ್ನು ಸೃಷ್ಟಿಸಿವೆ. ಅವುಗಳಲ್ಲಿ ಮುಖ್ಯವಾದವು ಈ ಎರಡು ಜಲಪಾತಗಳು. ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಜಲಪಾತ ಬೆಳಗಾವಿ ನಗರದಿಂದ 40 ಕಿ.ಮೀ. ಹಾಗೂ ಗೋಕಾಕ್‌ನಿಂದ 16 ಕಿ.ಮೀ. ದೂರದಲ್ಲಿದೆ. ಗೊಡಚಿನಮಲ್ಕಿಯಿಂದ ಒಂದು ಕಿ.ಮೀ. ಕಾಲುದಾರಿಯಲ್ಲಿ ಸಾಗಿ ಗೊಡಚಿನಮಲ್ಕಿ ಜಲಪಾತ ಸೇರಬೇಕು. ಮಾರ್ಕಂಡೇಯ ನದಿಯಲ್ಲಿರುವ ಕಲ್ಲುಗಳ ಮೇಲೆ ನಗೆ ಚೆಲ್ಲಿ ಧುಮ್ಮಿಕ್ಕುವ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಜಲಪಾತವು ಕಲ್ಲಿನ ಹಾಸಿಗೆ ಮೇಲೆ ಹಂತ ಹಂತವಾಗಿ ಚಾಚಿಕೊಂಡು ಹರಿದು, 40 ಅಡಿ ಎತ್ತರದಿಂದ ಧುಮ್ಮಿಕ್ಕುವ ದೃಶ್ಯ ನೋಡುಗರ ಮೈ ಮರೆಸುತ್ತದೆ. ಇಲ್ಲಿ ನೀರಿನಲ್ಲಿ ಆಟವಾಡಬಹುದು. ಗೋಕಾಕ್ ಜಲಪಾತ ಗೋಕಾಕ್‌ನಿಂದ 6 ಕಿ.ಮೀ. ಮತ್ತು ಗೋಕಾಕ್ ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿರುವ ಗೋಕಾಕ ಜಲಪಾತವು ಘಟಪ್ರಭಾ ನದಿ ಕಣಿವೆಯಿಂದ 71 ಅಡಿ ಎತ್ತರದಿಂದ ಧುಮ್ಮಿಕ್ಕುವ ನೋಟ ಗಮನ ಸೆಳೆಯುತ್ತದೆ. 581 ಅಡಿ ವಿಶಾಲವಾಗಿ ಧುಮ್ಮಿಕ್ಕುವ ಜಲಪಾತ ಹಾಲಿನ ನೊರೆಯಂತೆ ಕಾಣುತ್ತದೆ. ಘಟಪ್ರಭಾ ನದಿಯ ಒಂದು ಬದಿಯಿಂದ ಇನ್ನೊಂದು ಬದಿ ಸೇರಲು 659 ಅಡಿ ಉದ್ದದ ತೂಗುಸೇತುವೆ ಇದ್ದು ಅದರ ಮೇಲೆ ನಡೆಯುವುದೇ ರೋಮಾಂಚನ. ನದಿ ದಂಡೆಯಲ್ಲಿ ಕಟ್ಟಿದ ಮಹಾಲಿಂಗೇಶ್ವರ ದೇಗುಲ ಭಕ್ತರ ಶ್ರದ್ಧಾಕೇಂದ್ರವೂ ಹೌದು. ಜಲಪಾತದ ಒಂದು ಬದಿಯಲ್ಲಿ ವಿದ್ಯುತ್ ಉತ್ಪಾದನೆ ಕಾರ್ಯಗಾರ 1887ರಿಂದಲೇ ವಿದ್ಯುತ್ ಉತ್ಪಾದಿಸುತ್ತಿರುವುದು ಗಮನಾರ್ಹ. ಜಲ ಮಾರ್ಗ ಯಾವುದು? ಜೂನ್ ಆರಂಭದಿಂದ ಅಕ್ಟೋಬರ್ ಕೊನೆವರೆಗೂ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತವೆ. ಬೆಳಗಾವಿಯಿಂದ ಗೋಕಾಕ್‌ವರೆಗೆ 66 ಕಿ.ಮೀ. ಬಸ್ಸಿನಲ್ಲಿ ಅಥವಾ ಗೋಕಾಕ್ ರಸ್ತೆಯವರೆಗೆ 53 ಕಿ.ಮೀ. ರೈಲಿನಲ್ಲಿ ಬಂದು ನಂತರ ಸಿಟಿ ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಸಾಗಿ ಎರಡು ಜಲಪಾತಗಳನ್ನು ತಲುಪಬಹುದು. ಗೋಕಾಕ್‌ನಲ್ಲಿ ವಸತಿ ಸೌಲಭ್ಯವಿದೆ. ಜಲಪಾತದ ಬಳಿ ಉಪಹಾರ, ಊಟ ದೊರೆಯುತ್ತದೆ. ಆದರೆ ಗೋಡಚಿನಮಲ್ಕಿಯಲ್ಲಿ ಯಾವುದೇ ಸೌಲಭ್ಯ ಇಲ್ಲ. ಅದಕ್ಕಾಗಿ ಪಾರ್ಸೆಲ್ ತೆಗೆದುಕೊಂಡು ಹೋಗುವದು ಒಳ್ಳೆಯದು. ಎರಡು ಜಲಪಾತಗಳು ಆಯಕಟ್ಟಿನ ಸ್ಥಳಗಳಲ್ಲಿರುವುದರಿಂದ ದೂರದಿಂದ ವೀಕ್ಷಿಸಬೇಕು. ಚಿತ್ರ, ಲೇಖನ: ಮಲ್ಲಿಕಾರ್ಜುನ ದಾನನ್ನವರ