ಬದುಕು ನೀಡಿದ ಬಸ್ ನಿಲ್ದಾಣ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಸ್‌ನಿಲ್ದಾಣಕ್ಕೆ ಬಸ್ ಬಂದು ನಿಲ್ಲುತ್ತಿದ್ದಂತೆ ಅಲ್ಲೊಂದಿಷ್ಟು ಜೀವಗಳ ಬದುಕಿಗೆ ರೆಕ್ಕೆ ಅಂಟಿಕೊಳ್ಳುತ್ತದೆ. ಐದಾರು ವೃದ್ಧೆಯರು ಕಿಟಕಿ ಪಕ್ಕ ಬಂದು ಬುಟ್ಟಿಯಲ್ಲಿನ ಸಿಹಿಹಣ್ಣು, ಘಮ ಘಮ ಮಲ್ಲಿಗೆ, ಕನಕಾಂಬರ ಹೂಗಳ ಮಾಲೆ ಮಾರಲು ಮುಂದಾಗುತ್ತಾರೆ. ಬಸ್ಸು ನಿಲ್ದಾಣಕ್ಕೆ ಬಂದರಷ್ಟೇ ಇವರ ಬದುಕು ಸುಂದರ. ಇವರು ಹಾಲಕ್ಕಿಗಳು. ಭಿನ್ನಭಾಷೆ, ಹಗಲಿರುಳು ಶ್ರಮಸುರಿಯುವವರು. ಬೇಸಿಗೆಯಲ್ಲಿ ಮಾವು, ಜೂನ್‌ನಲ್ಲಿ ನೇರಳೆ,ಪೇರಳೆ, ಕಿತ್ತಳೆ, ಕವಳೆ ಹಣ್ಣುಗಳು- ಹೀಗೆ ಆಯಾ ಋತುಗಳಲ್ಲಿ ಕಾಡು- ಗುಡ್ಡಗಳಲಿ ಅಲೆದಾಡಿ ಸಿಗೋ ರುಚಿಕರ ಹಣ್ಣುಗಳನ್ನು ಕಷ್ಟಪಟ್ಟು ತಂದು ಪ್ರಯಾಣಿಕರ ನಾಲಗೆಯನ್ನು ಸಿಹಿಮಾಡುತ್ತಾರೆ. ಅಂದಹಾಗೆ, ಹಾಲಕ್ಕಿಗಳು ಇಲ್ಲಿನ ಮೂಲ ನಿವಾಸಿಗಳು. ಇವರು ಪಟ್ಟಣವನ್ನು ನಂಬುವುದು ಕೇವಲ ವ್ಯಾಪಾರಕ್ಕಷ್ಟೇ. ಜೀವನಾಗತ್ಯ ವಸ್ತುಗಳೆಲ್ಲ ಇವರಿಗೆ ಕಾಡಿನಲ್ಲೇ ಸಿಗುತ್ತದೆ. ಅಷ್ಟಕ್ಕೂ ಇವರೇನು ಜಾಸ್ತಿ ದುಡ್ಡು ಪಡೆಯಲಾರರು. ಕೇವಲ 5 ರುಪಾಯಿಗೆ ಒಂದು ಪೊಟ್ಟಣದ ತುಂಬ ಹಣ್ಣುಗಳನ್ನು ಕಟ್ಟಿಕೊಡುತ್ತಾರೆ. 10 ರುಪಾಯಿಗೆ ಘಮಘಮಿಸುವ ಮಲ್ಲಿಗೆಯ ಮೊಗ್ಗಿನ ಮಾಲೆ ಕೊಡುವರು. ಹೀಗೆ ಅಂಕೋಲಾ ಬಸ್‌ನಿಲ್ದಾಣ ಈ ಹಾಲಕ್ಕಿ ಜನಾಂಗಕ್ಕೆ ಸ್ವಾವಲಂಬನೆಯ ಬಲ ನೀಡಿದೆ. - ಸುರೇಶ ಜಾಲಹಳ್ಳಿ