ಅರೆಕ್ಕಾನ ಫಾಲ್ಸ್ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯನ್ನು ಬೇರ್ಪಡಿಸುವ ಸಂಪಾಜೆ ಘಾಟಿನಲ್ಲಿ ಕೊಡಗಿನಿಂದ ಹರಿದು ಬರುವ ಅನೇಕ ನದಿ, ಉಪ ನದಿಗಳು ಹಲವು ಜಲಪಾತಗಳನ್ನು ಸೃಷ್ಟಿಸುತ್ತವೆ. ಇವುಗಳಲ್ಲಿ ಸಂಪಾಜೆ ಸಮೀಪದ ಅರೆಕ್ಕಾನ ಜಲಪಾತವೂ ಒಂದು. ಕಲ್ಪನೆಗಳನ್ನು ಹುಟ್ಟುಹಾಕುವಂಥ ನಿಸರ್ಗ ಸಿರಿ ಇಲ್ಲಿನದು. ರಸ್ತೆಯ ಇಕ್ಕೆಲಗಳಲ್ಲಿ ರಬ್ಬರ್ ತೋಟ, ದಟ್ಟಾರಣ್ಯ, ಅಡಿಕೆ ತೋಟಗಳಿವೆ. ಆನೆ, ಕಾಡುಕೋಣಗಳು ಸಂಚರಿಸುತ್ತವೆ. ಮೈ ಮರಗಟ್ಟುವಷ್ಟು ತಂಪು ನೀರು. ಜಲಪಾತ ಸುತ್ತ ಹಸಿರು ಹುಲ್ಲು, ಬಣ್ಣದ ಚಿಟ್ಟೆಗಳು ಮುದ ತರಿಸುತ್ತವೆ. ಈ ಜಲಪಾತಕ್ಕೆ ಗದ್ದೆ, ತೋಟ, ತಗ್ಗು-ದಿಣ್ಣಗಳನ್ನೇರಿ ಸಾಗಬೇಕಿದೆ. ಬಲ್ಲವರಿದ್ದರೆ ಈ ಫಾಲ್ಸ್ ಬಳಿಗೆ ತೆರಳುವುದು ಸುಲಭ. ಊಟ-ತಿಂಡಿ ವ್ಯವಸ್ಥೆ ಚಾರಣಕ್ಕೆ ಹೊರಡುವಾಗಲೇ ಮಾಡಿಕೊಂಡಿರಬೇಕು. ಮಳೆಗಾಲದಲ್ಲಿ ಜಲಪಾತದ ಸೊಬಗು ಮತ್ತಷ್ಟು ಹೆಚ್ಚಾಗಿರುತ್ತದೆ. ಆದರೆ, ಹರಿವು ಹೆಚ್ಚಾಗಿರುವುದರಿಂದ ಜಲಪಾತದ ಬದಿಯಲ್ಲಿ ನಿಂತು ಸಂಭ್ರಮಿಸಬಹುದಷ್ಟೆ. ಜಿಗಣೆಯ ಕಾಟ ಇಲ್ಲ ಎನ್ನುವಂತಿಲ್ಲ. ಅಕ್ಟೋಬರ್‌ನಿಂದ ಜನವರಿವರೆಗಿನ ಪ್ರವಾಸ ಉತ್ತಮ. ಈ ಧಬೆಧಬೆಯ ನೀರೇ ಹತ್ತಿರದ ನಿವಾಸಿಗಳ ದಾಹ ತಣಿಸುತ್ತಿದೆ. ಜಲಧಾರೆ ಪರಿಸರ ಹಾಳುಗೈಯುತ್ತಾರೆಂಬ ಆತಂಕ ಸ್ಥಳೀಯರಲ್ಲಿದೆ. ಈ ಬಗ್ಗೆ ಕಾಳಜಿ ಪ್ರವಾಸಿಗರಲ್ಲಿದ್ದರೆ ಒಳಿತು. ಇಲ್ಲಿನ ಪರಿಸರ ಹಾಳುಗೈದಿದ್ದರಿಂದ ಹಲವಾರು ತಂಡಗಳು ಗ್ರಾಮಸ್ಥರ ವಿರೋಧ ಎದುರಿಸಿ ಹಿಂದಿರುಗಿರುವ ಉದಾಹರಣೆ ಇದೆ. ಹೀಗೆ ಬನ್ನಿ ಸುಳ್ಯದಿಂದ ಮಡಿಕೇರಿ ಮಾರ್ಗದಲ್ಲಿ ಸುಮಾರು 20 ಕಿ.ಮೀ. ಸಾಗಿದರೆ ತಲುಪಬಹುದು. ಸಂಪಾಜೆ ಚೆಕ್‌ಪೋಸ್ಟ್‌ನಿಂದ ಅಲ್ಲಲ್ಲಿ ಗುಂಡಿಬಿದ್ದ ರಸ್ತೆಯಲ್ಲಿ ಬಂದು ಸಂಪಾಜೆ ಸೊಸೈಟಿ ಬಳಿ ಬರಬೇಕು. ಎಡಕ್ಕೆ ತಿರುಗಿ ಪುನಃ ಐದಾರು ಕಿ.ಮೀ. ಸಾಗಿದರೆ ಅರೆಕ್ಕಾನ ತಲುಪಬಹುದು. ಸಂಪಾಜೆಯಿಂದ ಅರೆಕ್ಕಾನಕ್ಕೆ ತೆರಳಲು ಜೀಪಿನ ವ್ಯವಸ್ಥೆಯಿದೆ. < -ಚಿತ್ರ ಲೇಖನ: ಅಭಿಷೇಕ್ ಡಿ.ಪುಂಡಿತ್ತೂರು