ಬಾದಾಮಿ ಹಾಲು! ಬಾದಾಮಿ ಕೇವಲ ದೇಗುಲಗಳ ಬೀಡಲ್ಲ. ಇಲ್ಲೊಂದು ಜಲಪಾತ ಕೂಡ ಇದೆ. ಊರಿನ ಹೆಸರನ್ನೇ ಇಟ್ಟುಕೊಂಡ ಬಾದಾಮಿ ಫಾಲ್ಸ್. ಹೌದು. ಬಾದಾಮಿಯ ಬಿರುಬಂಡೆಗಳ ಮೇಲೂ ಮಲೆನಾಡಿನಲ್ಲಿ ಕಾಣುವಂಥ ಅಪರೂಪದ ಜಲಪಾತವಿದೆ ಎಂಬುದು ಸುಳ್ಳಲ್ಲ. ಆದರೆ, ಈ ಪ್ರಕೃತಿ ಸಿರಿ ನಿಮಗೆ ಒಲಿಯುವುದು ಮಳೆಗಾಲದಲ್ಲಿ ಮಾತ್ರ. ಒಂದೆಡೆ ಶಿಲ್ಪಕಲೆ, ಚಿತ್ರಕಲೆ, ವಾಸ್ತುಶಿಲ್ಪಗಳನ್ನು ಸವಿಯುತ್ತಾ ಮತ್ತೊಂದೆಡೆ ಶಿವನ ಜಡೆಯಿಂದ ಗಂಗೆ ಹರಿದು ಬರುತ್ತಿರುವಳೇನೋ ಎನ್ನುವ ಅನುಭವ ನೀಡುವ ಬಾದಾಮಿ ಜಲಧಾರೆ ಸವಿಯುವ ಅದೃಷ್ಟ ನಿಮ್ಮದಾಗುವುದು ಅಪರೂಪವೇ ಸರಿ. ಇಲ್ಲಿನ ಭೂತನಾಥ ಗುಡಿಯ ಹಿಂದಿನ ಬೆಟ್ಟದಲ್ಲಿ ಮಳೆಗಾಲದ ಅತಿಥಿ ರೂಪದಲ್ಲಿ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಒಂದೆರೆಡು ಗಂಟೆ ಧೋ ಎಂದು ಒಂದೇ ಸಮನೆ ಸುರಿವ ಮಳೆ ಇಲ್ಲಿ ಜಲಪಾತ ಸೃಷ್ಟಿಸುತ್ತದೆ. ಈ ಗುಡಿಯ ಹಿಂದೆ ಅರಳಿತೀರ್ಥ ಹೆಸರಿನ ಊರಿತ್ತು. ಅದೇ ಸ್ಥಳದಲ್ಲಿಯೇ ಮಳೆ ನೀರು ಶೇಖರಣೆಯಾಗಿ, ಹೆಚ್ಚುವರಿ ನೀರು ಬೆಟ್ಟದಿಂದ ಧುಮ್ಮಿಕ್ಕುತ್ತದೆ. ಈ ಜಲಪಾತ ಪ್ರಾರಂಭದಲ್ಲಿ ಎರಡು ಕವಲಾಗಿ ಬೀಳುವುದು ವಿಶೇಷ. ಅದಕ್ಕೆ 'ಅಕ್ಕ-ತಂಗಿ ಜಿಡುಗ' ಎಂದು ಹೆಸರು. 70-80 ಅಡಿ ಎತ್ತರದಿಂದ ನೀರು ಧುಮ್ಮಿಕ್ಕಿದರೂ ಜಲಪಾತದ ಉಗಮ ಸ್ಥಾನದದ ಪ್ರಾರಂಭದ 18-20 ಅಡಿಗಳಲ್ಲಿ 8-10 ಅಡಿ ಅಗಲದಲ್ಲಿ ರಭಸದಿಂದ ಬೀಳುವ ನೀರು ನೋಡುಗರಿಗೆ ರಸದೌತಣ. ಈ ನೀರು ಅಗಸ್ತ್ಯ ತೀರ್ಥಕ್ಕೆ ಸೇರುವ ಮೂಲಕ ಇಡೀ ಬಾದಾಮಿಯ ಕಲಾತ್ಮಕ ಲೋಕದ ವಿಹಂಗಮ ನೋಟಕ್ಕೆ ಹೊಸ ಸ್ಪರ್ಶ ನೀಡುತ್ತದೆ. ಬೇಸಿಗೆ, ಚಳಿಗಾಲದಲ್ಲಿ ಬೋಳುಬೆಟ್ಟವಾಗಿ ಕಾಣುವ ಇಲ್ಲಿನ ಗಿರಿಗಳು ಮಳೆಗಾಲದಲ್ಲಿ ಅಲ್ಲಲ್ಲಿ ಹಸಿರು ಹೊತ್ತು ನಿಂತಿರುತ್ತವೆ. ಈ ಮಧ್ಯೆ ಜಲಪಾತ ಹೊಸ ಕಳೆ ತರುತ್ತದೆ. ಜಲಪಾತದ ನೀರು ಅಗಸ್ತ್ಯ ಸರೋವರದಲ್ಲಿ ಭರ್ತಿಯಾಗಿ, ತನ್ನ ಸುತ್ತಲಿನ ಪರಿಸರ ಅಂದವಾಗಿಡುವ ಮೂಲಕ ಮೊಗೆದಷ್ಟೂ ಮುಗಿಯದ, ಬಣ್ಣಿಸದಷ್ಟೂ ತೀರದ ನಿಸರ್ಗ ದೇವತೆಯ ಸಾಕ್ಷಾತ್ಕಾರವನ್ನು ಅನುದಿನವೂ ಒದಗಿಸುತ್ತದೆ. ಅದಕ್ಕೆಂದೇ ಬಾದಾಮಿಯಲ್ಲಿ ಭರ್ಜರಿ ಮಳೆಯಾದರೆ ಈ ಜಲಪಾತ ನೋಡಲು ಜನಜಾತ್ರೆ. ಭೂತನಾಥ, ಯಲ್ಲಮ್ಮನ ಗುಡಿ ಬಳಸಿಕೊಂಡು ಸಪ್ತಮಾತೃಕೆ, ಮಂಟಪದ ಬಳಿ ನಿಂತರೆ ಜಲಪಾತ ಮೈಮನ ತುಂಬಿಕೊಳ್ಳಬಹುದು. ಕೆಲವರು ಅಗಸ್ತ್ಯ ಸರೋವರದ ಸುತ್ತ ಇರುವ ಕಟ್ಟೆಗಳ ಮೇಲೆ ಕೂತು ಆನಂದಿಸುತ್ತಾರೆ. ಅಂದಹಾಗೆ, ಈ ಜಲಪಾತದ ಮೋಡಿಗೆ ಹುಚ್ಚೆದ್ದು, ಮೈಯೊಡ್ಡಲು ಹೋದೀರಿ, ಎಚ್ಚರ. ನೀರಿನ ರಭಸಕ್ಕೆ ಬೆಟ್ಟದ ಮೇಲಿಂದ ಕೆಲವೊಮ್ಮೆ ಕಲ್ಲುಗಳೂ ಬಿದ್ದಾವು. ರೂಟ್‌ಮ್ಯಾಪ್ ಬೆಂಗಳೂರಿನಿಂದ ಬಾಗಲಕೋಟೆಗೆ ಸುಮಾರು ಏಳೂವರೆ ತಾಸು ಪಯಣ. 485 ಕಿ.ಮೀ ಆಗುತ್ತದೆ. ಬಾಗಲಕೋಟೆಯಿಂದ ಮುಕ್ಕಾಲು ಗಂಟೆಯಲ್ಲಿ 31 ಕಿ.ಮೀ. ಸಾಗಿದರೆ ಬಾದಾಮಿ ತಲುಪಬಹುದು. ಬಾದಾಮಿಗೆ ಸಮರ್ಪಕ ಬಸ್ ವ್ಯವಸ್ಥೆ ಇದೆ. ಹತ್ತಿರದ ರೇಲ್ವೆ ನಿಲ್ದಾಣವೆಂದರೆ ಹುಬ್ಬಳ್ಳಿ. ನಿಜಾಮುದ್ದೀನ್ ಎಕ್ಸ್‌ಪ್ರೆಸ್, ರಾಣಿ ಚೆನ್ನಮ್ಮ, ಜೋಧ್‌ಪುರ್ ಎಕ್ಸ್‌ಪ್ರೆಸ್, ವಾಸ್ಕೋ, ಹುಬ್ಬಳ್ಳಿ, ಬೆಂಗಳೂರು ಎಕ್ಸ್‌ಪ್ರೆಸ್, ಚಾಲುಕ್ಯ ಎಕ್ಸ್‌ಪ್ರೆಸ್, ಚೆನ್ನೈ ಎಕ್ಸ್‌ಪ್ರೆಸ್, ಜನ್‌ಶತಾಬ್ದಿ ಎಕ್ಸ್‌ಪ್ರೆಸ್, ಹೌರಾ ಎಕ್ಸ್‌ಪ್ರೆಸ್ ರೈಲುಗಳು ಹುಬ್ಬಳ್ಳಿಯನ್ನು ಸಂಪರ್ಕಿಸುತ್ತವೆ. ಬಾದಾಮಿಯಿಂದ 5 ಕಿಮೀ. ಅಂತರದಲ್ಲೂ ಸಣ್ಣ ರೇಲ್ವೆ ಸ್ಟೇಷನ್ ಇದೆ. ಹುಬ್ಬಳ್ಳಿಯಿಂದ ಬಾದಾಮಿಗೆ 94 ಕಿ.ಮೀ. ಪ್ರಮುಖವಾಗಿ ಬಿಜಾಪುರ- ಹುಬ್ಬಳ್ಳಿ, ಬೆಂಗಳೂರು- ಬಾದಾಮಿ ಮಾರ್ಗವಾಗಿಯೂ ಚಲಿಸಬಹುದು. - ಚಿತ್ರ-ಲೇಖನ: ಸ್ವರೂಪಾನಂದ ಎಂ. ಕೊಟ್ಟೂರು .kottur112@.