ಸಿಟಿಗೆ ಸಾಟಿ ಆಗುತ್ತಾ ಸೀಯಾಝ್? ಈ ವರ್ಷದ ಮಾರುಕಟ್ಟೆಯ ಮೊದಲಾರ್ಧದಲ್ಲಿ ಹೋಂಡಾ ಕಂಪನಿಯ ಅಮೇಝ್ ಹಾಗೂ ಸಿಟಿ ಭರ್ಜರಿ ಸದ್ದು ಮಾಡಿದವು. ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನವನ್ನು ಮುಂದುವರಿಸಿಕೊಂಡರೂ ಮಾರುತಿ ಸುಝುಕಿ ಅಂಥ ಸುದ್ದಿ ಮಾಡಿರಲಿಲ್ಲ. ಆದರೆ ಈಗ ಹೋಂಡಾ ಸಿಟಿಗೆ ವಿರುದ್ಧವಾಗಿ ಸೀಯಾಝ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಸೆಡಾನ್ ಮಾದರಿಯ ಸೆಮಿ ಐಷಾರಾಮಿ ಕಾರಿದು. ಜನಸಾಮಾನ್ಯರ ಕಾರು ಎಂದೇ ಹೆಸರಾಗಿರುವ ಮಾರುತಿ, ಹೋಂಡಾ ಸಿಟಿಗಿಂತ ಕಡಿಮೆ ದರದಲ್ಲೇ ಅದೇ ಗುಣಮಟ್ಟದ ಫೀಚರ್ಸ್ ಹಾಗೂ ಸೌಲಭ್ಯವನ್ನು ಸೀಯಾಝ್‌ನಲ್ಲಿ ನೀಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಓಪನಿಂಗ್ ಕಂಡಿರುವ ಸೀಯಾಝ್ ಸೆಡಾನ್ ಮಾರುಕಟ್ಟೆಗೆ ಜೀವ ತುಂಬುವ ಸಾಧ್ಯತೆಯಿದೆ. ಆದರೆ ಕಾರಿನಲ್ಲಿ ಹೇಳಿಕೊಳ್ಳುವ ಯಾವುದೇ ವಿಶೇಷತೆಗಳಿಲ್ಲ. ಒಂದು ಕ್ಷಣಕ್ಕೆ ಹಳೆಯ ಹೋಂಡಾ ಸಿಟಿ ನೋಡಿದಂತೆ ಭಾಸವಾಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳಲ್ಲಿ ಇದು ಲಭ್ಯವಿದ್ದು, 6.99 ಲಕ್ಷದಿಂದ 9.80 ಲಕ್ಷದವರೆಗೆ ಲಭ್ಯವಿದೆ. ಪೆಟ್ರೋಲ್‌ನಲ್ಲಿ ಮಾತ್ರ ಆಟೋ ಗೇರ್ ಅವಕಾಶ ನೀಡಲಾಗಿದ್ದು, ಡೀಸೆಲ್‌ನಲ್ಲಿ ನೀಡದಿರುವುದು ಒಂತರಹ ಡ್ರಾಬ್ಯಾಕ್ ಎನ್ನಬಹುದು. ಜತೆಗೆ ಟಾಟಾ ಕಂಪನಿಯ ಜೆಸ್ಟ್‌ನಲ್ಲೇ ಇಕೋ, ಸ್ಪೋರ್ಟ್ ಹಾಗೂ ಸಿಟಿ ಎಂಬ ಮೋಡ್‌ಗಳನ್ನು ನೀಡಲಾಗಿದೆ. ಈ ಕಾರಿನಲ್ಲಿ ಅಂಥ ಯಾವುದೇ ಸೌಲಭ್ಯಗಳಿಲ್ಲ. ಆದರೆ ಮಾರುತಿ ಪ್ರಿಯರು ಇಷ್ಟಪಡಬಹುದಾದ ಹಾಗೂ ಸೆಡಾನ್‌ನಲ್ಲಿ ಕಡಿಮೆ ದರದಲ್ಲಿ ಕೆಲ ಉತ್ತಮ ಫಿಚರ್ಸ್‌ಗಳು ಇರುವ ಕಾರು ಇದಾಗಿದೆ. ಅಂದಹಾಗೆ, ಈ ಕಾರಿನಲ್ಲಿ ಡಚ್‌ಸ್ಕ್ರೀನ್ ಕನ್ಸೋಲ್ ನೀಡಲಾಗಿದೆ. ಮಲ್ಟಿ ಕಲರ್ ಇಂಟಿರಿಯರ್ ಇದೆ. ಲೆಗ್ ಹಾಗೂ ಡಿಕ್ಕಿ ಸ್ಪೇಸ್‌ಗಳು ಕೂಡ ಉತ್ತಮವಾಗಿದೆ.