ಪೌರವನ ಇಲ್ಲೆಲ್ಲಾ ಬಳ್ಳಾರಿ ಜಾಲಿಯದ್ದೇ ಕಾರುಬಾರು. ಈ ಜಾಗ, ನೀರಿನ ಟ್ಯಾಂಕ್‌ನಿಂದ ಸೋರಿ ಅನೇಕರ ಪಾಲಿಗೆ... ಇಲ್ಲೆಲ್ಲಾ ಬಳ್ಳಾರಿ ಜಾಲಿಯದ್ದೇ ಕಾರುಬಾರು. ಈ ಜಾಗ, ನೀರಿನ ಟ್ಯಾಂಕ್‌ನಿಂದ ಸೋರಿ ಅನೇಕರ ಪಾಲಿಗೆ ಬೆಳಗಿನ ಸಂಕಟ ತೀರಿಸಿಕೊಳ್ಳುವುದಕ್ಕೆ ಮೀಸಲಾಗಿತ್ತು. ಬಿಟ್ಟರೆ ಊರ ತ್ಯಾಜ್ಯ ವಸ್ತುಗಳಿಂದ ತುಂಬಿ ತುಳುಕುತ್ತಿತ್ತು. ಹೀಗಾಗಿ ಇಲ್ಲಿ ದಾರಿಹೋಕರು ಅಕ್ಷರಶಃ ತಲೆ ತಗ್ಗಿಸಿ, ಮೂಗು ಮುಚ್ಚಿಕೊಂಡು ಓಡಾಡುವ ಕರ್ಮ. ಆದರೆ, ಇಂದು ಅದೇ ಜಾಗ ಮಿನಿ ಫಾರೆಸ್ಟ್. ಇಲ್ಲೆಲ್ಲಾ ಆಳೆತ್ತರದ ಮರ- ಗಿಡಗಳದ್ದೇ ಸುಂದರ ಲೋಕ. ವನದ ಅಷ್ಟ ದಿಕ್ಕುಗಳಲ್ಲೂ ಹಸಿರೇ- ಹಸಿರು. ಬಣ್ಣ- ಬಣ್ಣದ ಚಿಟ್ಟೆ, ಪಕ್ಷಿಗಳಿಗೆ ನೆಲೆ. ಹೀಗಾಗಿ ಈ ತಾಣ ನಂದನವನ. ಹತ್ತಾರು ವಿದ್ಯಾರ್ಥಿಗಳ ಪಾಲಿಗೆ ಬಿಡುವಿನ ವೇಳೆಯಲ್ಲಿ ಓದುವ, ವಿಶ್ರಾಂತಿಯ ತಾಣ. ಅಂದ ಹಾಗೆ ಈ ಹಸಿರು ವನ ತಲೆ ಎತ್ತಿರುವುದು ಕಾಡು ಬಂಡೆಗಳ ಮೇಲೆ. ಅದೂ ಶೂನ್ಯ ಬಂಡವಾಳದಲ್ಲಿ! ಹಸಿರು ಚಮತ್ಕಾರ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜು ರಸ್ತೆಗೆ ಹೊಂದಿಕೊಂಡಿರುವ ನೀರಿನ ಟ್ಯಾಂಕ್ ಆವರಣದಲ್ಲಿಯೇ ಇಂತಹ ಹಸಿರು ಚಮತ್ಕಾರ ನಡೆದಿದೆ. ಕೊಟ್ಟೂರು ಪಟ್ಟಣ ಪಂಚಾಯಿತಿ ನೀರು ಸರಬರಾಜು ಘಟಕದಲ್ಲಿ ಕೆಲಸ ಮಾಡುತ್ತಿರುವ ಮೂವರು ಪೌರ ಕಾರ್ಮಿಕರೇ ಈ ಹಸಿರು ಸಿರಿಯ ರೂವಾರಿಗಳು. ಬಳ್ಳಾರಿ ಕೊಟ್ರೇಶ್, ಮೋರಗೇರಿ ಬಸವರಾಜ್ ಮತ್ತು ಗುಬ್ಬಿ ಲಕ್ಷ್ಮಪ್ಪ ಆ ಪೌರ ಕಾರ್ಮಿಕರು. ಇವರೆಲ್ಲಾ ಬಿಡುವು ಸಿಕ್ಕಾಗ ಈ ವನದಲ್ಲಿ ಸ್ವಯಂಪ್ರೇರಿತವಾಗಿ ಕೈತೋಟದ ಆರೈಕೆ ಮಾಡುತ್ತಾರೆ. ಮೊದಲು ಹೇಗಿತ್ತು ಗೊತ್ತೆ? 12 ವರ್ಷದ ಹಿಂದೆ ಈ ಜಾಗದಲ್ಲಿ ಸುಮಾರು 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಅನ್ನು ಪಟ್ಟಣ ಪಂಚಾಯಿತಿ ನಿರ್ಮಿಸಿತ್ತು. ಇದಕ್ಕೆ ಕಳೆದ ನಾಲ್ಕು ವರ್ಷದ ಇತ್ತೀಚೆಗೆ ಸುತ್ತಲೂ ಸುಮಾರು ಅರ್ಧ ಎಕರೆ ವಿಸ್ತೀರ್ಣದಲ್ಲಿ ಆಳೆತ್ತರದ ಕಾಪೌಂಡ್ ಅನ್ನು ಭಾಗಶಃ ನಿರ್ಮಿಸಿತ್ತು. ಇಲ್ಲಿ ಮಲಮೂತ್ರ, ತ್ಯಾಜ್ಯ ವಿಸರ್ಜನೆ ಮಿತಿ ಮೀರಿತ್ತು. ಇದರಿಂದ ಸಾರ್ವಜನಿಕರಂತೆ ಕಿರಿಕಿರಿ ಅನುಭವಿಸಿದ್ದು ಈ ಪೌರ ಕಾರ್ಮಿಕರು. ನೀರಿನ ವಾಲ್ ತಿರುವಲು ಪದೇ ಪದೇ ಇಲ್ಲಿಗೆ ಧಾವಿಸಬೇಕಾಗಿದ್ದರಿಂದ ಇವರು ಮುಜುಗರಕ್ಕೆ ಈಡಾಗುತ್ತಿದ್ದರು. ಇದಕ್ಕೆ ಒಂದು ದಾರಿ ಹುಡುಕಬೇಕೆಂದು ನಿರ್ಧರಿಸಿದರು. ಆಗ ಇವರಿಗೆ ಕಂಡಿದ್ದು ಅರಣ್ಯ ಇಲಾಖೆ ಪಟ್ಟಣ ವಿವಿಧೆಡೆ ಸಸಿ ನೆಡುತ್ತಿರುವ ದೃಶ್ಯ. ತಡ ಮಾಡಲಿಲ್ಲ. ಸಲಿಕೆ, ಗುದ್ದಲಿ, ಪಿಕಾಸಿ ಹಿಡಿದು ಬಳ್ಳಾರಿ ಜಾಲಿ, ಹುಲ್ಲು, ಕಸ- ಕಡ್ಡಿ ತೆಗೆದು ಜಾಗ ಸ್ವಚ್ಛಗೊಳಿಸಿದರು. ಜಾಗದ ಒಂದು ಬದಿಯಲ್ಲಿ ಸುಮಾರು 60 ಅಡಿಯಷ್ಟು ಉದ್ದ ಕಾಂಪೌಂಡ್ ಕಟ್ಟದೇ ಬಿಟ್ಟ ಜಾಗಕ್ಕೆ ಬಳ್ಳಾರಿ ಜಾಲಿ ಮುಳ್ಳು ಬಡಿದು ಭದ್ರಪಡಿಸಿದರು. ಆದರೆ, ಇವರ ದುರಾದೃಷ್ಟಕ್ಕೆ ಬಂಡೆಯಿಂದ ಆವೃತ್ತವಾಗಿದ್ದ ನೆಲದಲ್ಲಿ ಸಸಿ ನೆಡಲು ಗುಣಿ ತೋಡಲು ಹರಸಾಹಸಪಟ್ಟರು. ಇವರಲ್ಲಿ ಸಂಕಲ್ಪ, ಇಚ್ಛಾಶಕ್ತಿ ಇದ್ದುದರಿಂದ ಆಯಕಟ್ಟಿನ ಸ್ಥಳ ನೋಡಿ ಸಸಿ ನೆಡಲು ಸಿದ್ಧತೆ ಮಾಡಿದರು. ಅರಣ್ಯ ಇಲಾಖೆಯಿಂದ ಸುಮಾರು 60ಕ್ಕೂ ಹೆಚ್ಚು ಸಸಿ ತಂದು ನೆಟ್ಟರು. ಪೈಪ್‌ನಿಂದ ಲೀಕ್ ಆಗಿ, ಚರಂಡಿಗೆ ಸೇರುತ್ತಿದ್ದ ನೀರನ್ನು ಗಿಡಗಳ ಬುಡಕ್ಕೆ ಹರಿಬಿಟ್ಟರು. ಕಾಲ- ಕಾಲಕ್ಕೆ ಗಿಡಗಳ ಆರೈಕೆ ಮಾಡುತ್ತಾ ಬಂದರು. ಸಸ್ಯಕಾಶಿ ಗಿಡಗಳು ನಿರೀಕ್ಷೆಗೂ ಮೀರಿ ಬೆಳೆಯ ತೊಡಗಿದವು. ಇದರೊಂದಿಗೆ ಇವರು ನೀರು ಬಿಡಲು ಹೋದ ಓಣಿಯಲೆಲ್ಲಾ ಕಣ್ಣಿಗೆ ಕಂಡ, ಮನಸ್ಸಿಗೆ ಹಿಡಿಸಿದ ಹೂವಿನ, ಹಣ್ಣಿನ, ಶೋ ಪ್ಲಾಂಟ್ ಗಿಡಗಳನ್ನು ಮಾಲೀಕರಿಂದ ಪಡೆದು ತಂದು ನೆಟ್ಟರು. ಫಲವಾಗಿ ಅರ್ಧ ಎಕರೆ ಜಾಗದಲ್ಲಿ ಕಾಡು ಬಾದಾಮಿ, ಸಿಹಿ ಹುಣಸೆ, ಹಲಸು, ಮಾವು, ಹತ್ತಿ ಹಣ್ಣು, ಅರಳಿ ಮರ ಸೇರಿದಂತೆ ಹತ್ತಾರು ಜಾತಿಯ ಮರ- ಗಿಡಗಳು ಬೆಳೆದು ನಿಂತಿವೆ. ಸರ್ಕಾರ, ಅನ್ಯರ ಸಹಕಾರವಿಲ್ಲದೆ ಇವರು ಸತತ ಮೂರು ವರ್ಷ ಪಟ್ಟ ಪರಿಶ್ರಮದ ಫಲವಾಗಿ ಈ ತಾಣ ನಂದನವನದಂತಾಗಿದೆ. ಸವಾಲಿನ ಕೆಲಸ ಇಷ್ಟೊಂದು ಪರಿಶ್ರಮ ಪಟ್ಟು ಬೆಳೆಸಿದ ಈ ವನಕ್ಕೆ ರಕ್ಷಣೆಯ ಕೊರತೆ ಕಾಡುತ್ತಿದೆ. ಒಂದು ಬದಿಯಲ್ಲಿ ಕಾಂಪೌಂಡ್ ಇಲ್ಲದ್ದರಿಂದ ಕೆಲವರು ಈ ಮಾರ್ಗ ಬಳಸಿ ಈ ತಾಣಕ್ಕೆ ಬಂದು ಗಲೀಜು ಮಾಡುವುದಲ್ಲದೆ, ಮರ- ಗಿಡಗಳ ಬೆಳವಣಿಗೆಗೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಇವರ ಕನಸಿನ ಕೂಸಾದ ಈ ವನ ಅಭಿವೃದ್ಧಿಪಡಿಸುವುದಿರಲಿ, ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅವರ ಹಸಿರು ಕೈಂಕರ್ಯಕ್ಕೆ ಅಭಿನಂದನೆ ಸಲ್ಲಿಸಲು ಬಳ್ಳಾರಿ ಕೊಟ್ರೇಶ್ ಮೊ. 9886947727. - ಸ್ವರೂಪಾನಂದ ಎಂ. ಕೊಟ್ಟೂರು