ಗೋ ಮ್ಯೂಸಿಯಂ ಸರ್ಕಾರಿ ಪಶು ಆಸ್ಪತ್ರೆ ಅಂದರೆ ಅದು ನಿರ್ಲಕ್ಷ್ಯ ಧಾಮ. ಸಕಾಲದಲ್ಲಿ ವೈದ್ಯರು ಸಿಗದಿರುವುದು, ಕಳಪೆ ಗುಣಮಟ್ಟದ ಚಿಕಿತ್ಸೆ, ಔಷಧಿಗಳ ಪರಿಚಯವಿಲ್ಲದ ವೈದ್ಯರು... ಹೀಗೆ ಈ ಗೌರ್ಮೆಂಟ್ ಆಸ್ಪತ್ರೆ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಇಲ್ಲ. ಆದರೆ, ಇಂಥ ಪಶು ಆಸ್ಪತ್ರೆಯನ್ನು ಮಾದರಿ ಕೇಂದ್ರವಾಗಿಸುವ ಶಕ್ತಿಯಂತೂ ಅಲ್ಲಿನ ವೈದ್ಯರಿಗಿದೆ. ಡಾ. ಕ.ದಾ. ಕೃಷ್ಣರಾಜು ಅಂಥ ಪರಿವರ್ತಕರಲ್ಲೊಬ್ಬರು. ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ಸರ್ಕಾರಿ ಪಶು ಆಸ್ಪತ್ರೆ ಹೀಗೊಂದು ಮಾದರಿ. ಇದು ಕೇವಲ ಚಿಕಿತ್ಸಾ ಕೇಂದ್ರವಾಗಿ ಉಳಿದಿಲ್ಲ. ಈ ಆಸ್ಪತ್ರೆಯಲ್ಲಿ ಗೋವಿನ ವಿಶ್ವರೂಪವನ್ನೇ ಕಾಣಬಹುದು. ಅದು ಪಕ್ಕಾ ಪಶುಗಳ ವಿವಿಧ ಪರಿಕರಗಳ ಮ್ಯೂಸಿಯಂ. ಏನಿದೆ ಅಂಥದ್ದು? ಯಾವ ಸರ್ಕಾರಿ ಆಸ್ಪತ್ರೆಯಲ್ಲೂ ಇರದೇ ಇರುವ ವಿಶೇಷತೆ ಇಲ್ಲಿದೆ. ಇಲ್ಲಿ ಗೋವಿನ ಪರಿಕರಗಳ ಬೃಹತ್ ಸಂಗ್ರಹವಿದೆ. ಗೋವಿನ ಚರ್ಮದ ಕೃಷಿ ವಸ್ತುಗಳು, 250 ವರ್ಷದ ನೊಗ, 100 ವರ್ಷದ ಗೋವಿನ ತುಪ್ಪ ಸಂಗ್ರಹದ ಮಡಿಕೆ, 150 ವರ್ಷದ ಚಿತ್ರದ ಜೊತೆಗೆ, 200 ವರ್ಷದ ಮರದ ಗಂಟೆ... ಹೀಗೆ ಅಸಂಖ್ಯಾತ ಗೋವುಗಳಿಗೆ ಬಳಸುತ್ತಿದ್ದ ಪರಿಕರಗಳು ಇಲ್ಲಿವೆ. ಗೋ ಗಡಿಯಾರ! ಗೋಬರ್ ಗ್ಯಾಸ್ ವ್ಯವಸ್ಥೆ, ವಿಶೇಷ ಮಾದರಿಯ ಗೊಬ್ಬರ ಸಂಗ್ರಾಹಕ, ಗಂಜಲದಿಂದ ತಯಾರಿಸಬಹುದಾದ ಕೃಷಿ ಔಷಧಗಳು, ಮನುಷ್ಯರಿಗೆ ಬೇಕಾದ ಔಷಧಗಳು, ಕೃಷಿ ಬೀಜ ಸಂರಕ್ಷಣಾ ಮಾದರಿ, ಸಗಣಿಯಿಂದ ತಯಾರಿಸಿದ ಸೊಳ್ಳೆಬತ್ತಿ, ಧೂಪದ ಬತ್ತಿ... ಹೀಗೆ ಹಲವು ಮಾದರಿಗಳನ್ನು ಇಲ್ಲಿ ಕೃಷ್ಣರಾಜು ಪ್ರದರ್ಶನಕ್ಕಿಟ್ಟಿದ್ದಾರೆ. ಸುಲಭದಲ್ಲಿ ಗೋಮೂತ್ರದ ಶುದ್ಧೀಕರಣ, ಸಮತೋಲಿತ ಪಶು ಆಹಾರ ಮತ್ತು ಒಣಹುಲ್ಲಿನ ಪರಿಷ್ಕರಣೆ ತರಬೇತಿಯೂ ಇಲ್ಲಿ ನಡೆಯುತ್ತದೆ. ಸಗಣಿಯಿಂದ ಅಲಂಕಾರಿಕ ವಸ್ತು, ವಿದ್ಯುತ್‌ಗಾರ, ಸಗಣಿ ಗಡಿಯಾರ, ಗೋಮೂತ್ರ ಗಡಿಯಾರ, ಹುಳಿ ಮಜ್ಜಿಗೆ ಗಡಿಯಾರವೂ ಇಲ್ಲಿನ ವಿಶೇಷಗಳೇ. ಔಷಧಿ ವನ ಈ ಆಸ್ಪತ್ರೆಯ ವರಾಂಡದಲ್ಲಿ ಔಷಧಿ ವನವೂ ಇದೆ. ನೆಲಬೇವು, ಒಂದೆಲಗ, ಅಜೋಲ, ಭೃಂಗರಾಜ, ಬಜೆ, ಲಕ್ಕಿ, ಆಡುಸೋಗೆ, ಶತಾವರಿ, ನಿತ್ಯಪುಷ್ಪ, ತುಳಸಿ, ಸರ್ಪಗಂಧ... ಹೀಗೆ ಹಲವು ಬಗೆಯ ಔಷಧಿ ಸಸ್ಯಗಳನ್ನು ಬೆಳೆಸಿದ್ದಾರೆ ಕೃಷ್ಣರಾಜು. ಸರ್ಕಾರಿ ವೈದ್ಯನ ಈ ಕಾಳಜಿಗೆ ನೀವೂ ಶುಭಾಶಯ ಕೋರಬಹುದು... ಅವರ ಮೊ. 9448073711. ಕೊಂಬಿನ ಕಹಳೆ! ಕೃಷ್ಣರಾಜು ಗೋವಿನ ಕೊಂಬುಗಳಿಂದ ಕಹಳೆ, ಶಹನಾಯಿ, ಬೊಂಬಾರು... ಹೀಗೆ ಹಲವು ಪ್ರಕಾರದ ಪರಿಕರಗಳನ್ನು ಸಿದ್ಧಪಡಿಸಿ ಅವುಗಳ ನಾದದಿಂದ ಸಂಗೀತ ಸುಧೆಯನ್ನು ಮೊಳಗಿಸುತ್ತಿದ್ದಾರೆ. ವಿವಿಧೆಡೆ ಮಠ- ಮಂದಿರಗಳಿಗೆ ಹೋದಾಗ ಪೂಜಾ ಕೈಂಕರ್ಯಗಳಿಗೆ ಬಳಸುವ ಸಂಗೀತೋಪಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರಂತೆ. ಅಂಥ ವಿಶಿಷ್ಟ ಪರಿಕರಗಳನ್ನು ಗೋವಿನಿಂದಲೂ ಪಡೆಯಲು ಸಾಧ್ಯ ಎಂಬುದನ್ನು ಅಲ್ಲೇ ಮನಗಂಡರು. ಹೊರರಾಜ್ಯಗಳಲ್ಲಿನ ಗೋವಿನ ಕೊಂಬುಗಳನ್ನು ತರಿಸಿ, ಅದನ್ನು ಪಾಪಣ್ಣಾಚಾರರ ಕಲ್ಪನೆಯಂತೆ ಅರಳಿಸಿ, ಈಗಿಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಚಿತ್ರ- ಬರಹ: ಗಣಪತಿ ಹಾಸ್ಪುರ