ಉರಗ ಬನ ಜಗತ್ತಿನ ಉಳಿವಿಗಾಗಿ ಶಿವನು ಅಂದು ನಂಜನ್ನು ಕುಡಿದ. ಇಂದು ಹಾವುಗಳ ಉಳಿವಿಗಾಗಿ... ಜಗತ್ತಿನ ಉಳಿವಿಗಾಗಿ ಶಿವನು ಅಂದು ನಂಜನ್ನು ಕುಡಿದ. ಇಂದು ಹಾವುಗಳ ಉಳಿವಿಗಾಗಿ ಪುತ್ತೂರಿನ ಉರಗತಜ್ಞ ಡಾ. ರವೀಂದ್ರನಾಥ ಐತಾಳರು ಜನರ ನಂಜು ಮನಸ್ಸನ್ನು ತಿದ್ದುತ್ತಿದ್ದಾರೆ. ಜನರು ಅನವಶ್ಯಕವಾಗಿ ಹಾವುಗಳನ್ನು ಕೊಲ್ಲುವುದನ್ನು ನಿಲ್ಲಿಸಬೇಕೆಂಬ ಉದ್ದೇಶದಿಂದ ಮನೆಯಲ್ಲಿಯೇ 24 ಜಾತಿಯ ಹಾವುಗಳನ್ನು ಸಾಕುತ್ತಾ ಸಾರ್ವಜನಿಕರಿಗೆ ಅದರ ಬಗ್ಗೆ ತಿಳಿಸುವ ಮಹತ್ ಕಾರ್ಯ ಮಾಡುತ್ತಿದ್ದಾರೆ ಐತಾಳರು. ಅದಲ್ಲದೇ ಸಾರ್ವಜನಿಕ ಸ್ಥಳಗಳಿಗೆ, ಮನೆಗಳಿಗೆ ಹಾವು ಬಂದರೆ ಅದನ್ನು ಹಿಡಿದು ರಕ್ಷಿತಾರಣ್ಯಕ್ಕೆ ಬಿಡುವುದು, ಪೆಟ್ಟಾದ, ಅಸೌಖ್ಯ ಹೊಂದಿದ ಹಾವುಗಳಿಗೆ ಚಿಕಿತ್ಸೆ ನೀಡಿ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವುದು ಅಥವಾ ಮನೆಗೆ ತಂದು ಸಾಕುವುದು ಇವರ ನಿತ್ಯ ಕೈಂಕರ್ಯ. ಶಾಲಾ- ಕಾಲೇಜುಗಳು, ಸಂಘ-ಸಂಸ್ಥೆಗಳು ಸೇರಿದಂತೆ ಹಲವಾರು ಕಡೆಗಳಲ್ಲಿ ಹಾವುಗಳ ಕುರಿತು 2000 ಕ್ಕೂ ಮಿಕ್ಕಿ ಪ್ರಾತ್ಯಕ್ಷಿಕೆ, ಉಪನ್ಯಾಸ ನೀಡಿದ್ದಾರೆ. ಸಂವಾದಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ಕೊಡುತ್ತಿದ್ದಾರೆ. ಹಾವುಗಳ ಕುರಿತು ಜನರಲ್ಲಿರುವ ತಪ್ಪು ಕಲ್ಪನೆ ಮತ್ತು ಭೀತಿಯನ್ನು ಹೋಗಲಾಡಿಸುವುದು ಮತ್ತು ಅಳಿವಿನ ಅಂಚಿನಲ್ಲಿರುವ ಹಾವುಗಳ ರಕ್ಷಣೆಯೇ ಇವರ ಉದ್ದೇಶ. ಸಾವಿನ ಬದಲು ಸಾಧನೆ ಲೇಸು ಐತಾಳರ ಬದುಕಿನ ಹಿಂದೆ ದುಃಖದ ಕತೆ ಇದೆ. ಅವರು ಚಿಕ್ಕವರಿದ್ದಾಗ ತಂದೆ ಯಾರಿಂದಲೋ ಮೋಸಕ್ಕೆ ಒಳಗಾಗಿ ಎಲ್ಲ ಆಸ್ತಿಯನ್ನು ಕಳೆದುಕೊಳ್ಳಬೇಕಾಯಿತು. ಮುಂದೇನು ಎಂದು ಯೋಚಿಸುತ್ತಾ ಹೊಟ್ಟೆಪಾಡಿಗಾಗಿ 5 ನೇ ತರಗತಿಯಿಂದ ಪದವಿವರೆಗೆ ವಾಚು, ರೇಡಿಯೋ ರಿಪೇರಿ, ಜಾಬ್ ಟೈಪಿಂಗ್, ಫೋಟೋಗ್ರಫಿ, ಪಿಗ್ಮಿ ಕಲೆಕ್ಷನ್ ಹೀಗೆ ನಾನಾ ಕೆಲಸಗಳನ್ನು ಮಾಡುತ್ತಾ ಬಂದರು. ಇದರಿಂದ ನೊಂದು ಒಂದು ದಿನ ಜೀವ ಕಳೆದುಕೊಳ್ಳುವ ತೀರ್ಮಾನಕ್ಕೂ ಬಂದರು. ಆ ಸಮಯದಲ್ಲಿ ಅವರಿಗೆ ಹೊಳೆದದ್ದೇನೆಂದರೆ... ಸಾಯುವುದಕ್ಕಿಂತ ಯಾರೂ ಮಾಡದ ಕೆಲಸವನ್ನು ಮಾಡಿ ಏನನ್ನಾದರೂ ಸಾಧಿಸಬೇಕು ಎಂದು. ಆಗ ಅವರ ಕಣ್ಣಿಗೆ ಕಂಡದ್ದೇ ಹಾವುಗಳು. 'ಹಾವುಗಳು ಉಳಿಯಬೇಕು... ಇಲ್ಲಾ ನಾನು ಸಾಯಬೇಕು...' ಎಂದು ತೀರ್ಮಾನಿಸಿ ಆ ಕ್ಷಣವೇ ದೃಢಸಂಕಲ್ಪ ಮಾಡಿದರು. ಇವರು ಕೆಲಸ ನಿಮಿತ್ತ ಪುತ್ತೂರಿಗೆ ಬಂದ ಸಮಯದಲ್ಲಿ ಈಗಿನ ಬಾಲವನದ ಮನೆಯಲ್ಲಿ ವಾಸವಾಗಿದ್ದ ಮನ್ಮಥ ಕುಮಾರ್ ಹಾವು ಹಿಡಿಯುವುದರಲ್ಲಿ ಹೆಸರುವಾಸಿಯಾಗಿದ್ದರು. ಅವರ ಬಳಿ 'ಹಾವು ಹಿಡಿಯುವುದನ್ನು ಹೇಳಿ ಕೊಡಿ' ಎಂದು ಕೇಳಿಕೊಂಡಾಗ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದರು. ಆದರೂ ಧೃತಿಗೆಡದ ಐತಾಳರು ಛಲ ಬಿಡದ ತ್ರಿವಿಕ್ರಮನಂತೆ ಹಾವು ಹಿಡಿಯುವುದನ್ನು ತನ್ನ ಶೈಲಿಯಲ್ಲಿಯೇ ಕಲಿತರು. ನಂತರ ಅದನ್ನು ಮನೆಗೆ ತಂದು ಸಾಕುವುದು, ಚಿಕಿತ್ಸೆ ಕೊಡುವುದು, ರಕ್ಷಿತಾರಣ್ಯಕ್ಕೆ ಬಿಡುವುದು ಹವ್ಯಾಸವಾಯಿತು. ಈಗ ಐತಾಳರ ಮನೆಯಲ್ಲಿ ಸುಮಾರು 24 ಜಾತಿಯ ವಿವಿಧ ಹಾವುಗಳಿವೆ. ಇವುಗಳಿಗೆ ತಿನ್ನಲು ವಾರಕ್ಕೆ 20 ಇಲಿ, 60 ಹಲ್ಲಿ, 2 ಕೋಳಿ, 10 ಕೋಳಿ ಮರಿ, 20 ಮೊಟ್ಟೆ, 4 ಕೇರೆ ಹಾವು, 10 ಕಪ್ಪೆಗಳು ಬೇಕಾಗುತ್ತವೆ. ಇದಕ್ಕೆಲ್ಲಾ ಸಾರ್ವಜನಿಕರೇ ಸಹಾಯ ಮಾಡುತ್ತಾರೆ. ವಿಶೇಷವಾಗಿ ಇವರ ಮನೆಯಲ್ಲಿ ಬಿಳಿ ನೀರೊಳ್ಳೆ ಎಂಬ ಹಾವಿದೆ. ಇದು ಜಗತ್ತಿನ ಬೇರೆ ಯಾವ ಹಾವು ಸಂಗ್ರಹಗಾರರಲ್ಲೂ ಇಲ್ಲ. ಈ ಹಾವಿಗೆ ಈಗ 4 ವರ್ಷ. ಇನ್ನೂ ವಿಶೇಷವೆಂದರೆ ಈ ಹಾವು ಮನೆಯಲ್ಲಿಯೇ ಮೊಟ್ಟೆ ಒಡೆದು ಮರಿಯಾದಂತದ್ದು. 1999 ರಲ್ಲಿ ಶೇಷವನ ಚಾರಿಟೇಬಲ್ ಟ್ರಸ್ಟ್‌ನಡಿ ಸರ್ಕಾರದಿಂದ ಹಾವುಗಳ ಚಿಕಿತ್ಸೆ ಮತ್ತು ಹಾವು ಕಡಿಸಿಕೊಂಡವರಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧೀಯ ಗಿಡ, ಮರಗಳನ್ನು ಬೆಳೆಸಿದ್ದಾರೆ. ಇದು ಪುತ್ತೂರಿನಿಂದ 5 ಕಿ.ಮೀ. ದೂರದ ನೈತಾಡಿ ಎಂಬ ಊರಲ್ಲಿದೆ. ಇದರ ಮೂಲಕ ಶಾಲಾ ಕಾಲೇಜು ಮಕ್ಕಳಿಗೆ ಜೀವಶಾಸ್ತ್ರ ಹಾಗೂ ಆಯುರ್ವೇದ ವ್ಯೆದ್ಯಕೀಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಅವುಗಳ ಔಷಧೀಯ ಮಹತ್ವ, ಗಿಡಗಳ ಪರಿಚಯವನ್ನು ಕಳೆದ 12 ವರ್ಷಗಳಿಂದ ತಿಳಿಸುತ್ತಾ ಬಂದಿದ್ದಾರೆ. ಇಲ್ಲಿ 1600 ಕ್ಕೂ ಮಿಕ್ಕಿ ಔಷಧೀಯ ಗಿಡಗಳಿವೆ. ಪುತ್ತೂರಿನಿಂದ 1 ಕಿ.ಮೀ. ದೂರದ ಕಲ್ಲಾರೆಯಲ್ಲಿರುವ ರಾಘವೇಂದ್ರ ಮಠದ ಎದುರು ಐತಾಳರ ಮನೆ 'ಬನ' ಇದೆ. ಅವರ ಸಂಪರ್ಕ: 9448545823, ... ಸ್ವಯಂ ಪರೀಕ್ಷೆ ಬಳಿಕ ಚಿಕಿತ್ಸೆ ಡಾ. ರವೀಂದ್ರನಾಥ ಐತಾಳರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ದಿ.ಗಣಪಯ್ಯ ಐತಾಳ್ ಮತ್ತು ವಿಮಲಮ್ಮ ದಂಪತಿಯ ಹಿರಿಯ ಪುತ್ರ. ಕೋಟ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದು ನಂತರ ಖಾಸಗಿಯಾಗಿ ಬಿಎ ಪದವಿ ಪಡೆದು ಖಾಸಗಿ ಸಹಕಾರಿ ಬ್ಯಾಂಕ್‌ನಲ್ಲಿ 5 ವರ್ಷ ಸೇವೆ ಸಲ್ಲಿಸಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಮಿಯೋಪತಿಯಲ್ಲಿ ಪದವಿ ಪಡೆದು ಒಂದು ವರ್ಷ ಸೇವೆ ಸಲ್ಲಿಸಿದರು. ಐತಾಳರಿಗೆ ಇದರಲ್ಲೂ ತೃಪ್ತಿ ಸಿಗದೆ ವಂಶಪಾರಂಪರ್ಯವಾಗಿ ಬಂದ ಗಿಡಮೂಲಿಕಾ ವ್ಯೆದ್ಯ ವೃತ್ತಿಯನ್ನು ನಡೆಸುತ್ತಾ ಬಂದಿದ್ದಾರೆ. ಅದರಲ್ಲಿ ಮುಖ್ಯವಾಗಿ ವಿಷ ಚಿಕಿತ್ಸೆ ಮತ್ತು ಸರ್ಪ ಸುತ್ತು ಕಾಯಿಲೆಗೆ ಇವರು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಹಾವು ಕಡಿತಕ್ಕೆ ಚಿಕಿತ್ಸೆಯನ್ನು ತನ್ನ ಸ್ವಂತ ಪರಿಶ್ರಮದಲ್ಲಿ ಕಲಿತಿರುವುದು ಇಲ್ಲಿ ಗಮನಾರ್ಹ. ಆರಂಭದ ಹಂತದಲ್ಲಿ ಹಲವಾರು ಜನಪದ ವಿಷ ವ್ಯೆದ್ಯರನ್ನು ಸಂಪರ್ಕಿಸಿ, ಅದರ ಬಗೆಗಿನ ಗ್ರಂಥಗಳನ್ನು ಓದಿ, ತಾನೇ ಔಷಧಿಗಳನ್ನು ತಯಾರಿಸಿ, ಸ್ವತಃ ಹಾವಿನಿಂದ ಕಡಿಸಿಕೊಂಡು ಈ ಔಷಧಿಗಳನ್ನು ಪ್ರಯೋಗಿಸಿ ಯಶಸ್ಸು ಕಂಡ ನಂತರ ಹಾವಿನ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಟ್ಟರು. ಸರಿಸುಮಾರು 1000 ಜನರ ಪ್ರಾಣ ಉಳಿಸಿದ ಕೀರ್ತಿ ಇವರಿಗಿದೆ. ಇದಲ್ಲದೇ ಹಾವು ಕಡಿದು ಗ್ಯಾಂಗ್ರಿನ್ ಆಗಿ ಆಧುನಿಕ ವ್ಯೆದ್ಯರು ಆ ಭಾಗವನ್ನು ಕತ್ತರಿಸಬೇಕೆಂದು ವೈದ್ಯರು ಹೇಳಿದ ನೂರಾರು ಜನರ ಗ್ಯಾಂಗ್ರಿನ್ ಭಾಗವನ್ನು ಕತ್ತರಿಸದೇ ಗುಣಪಡಿಸಿದ್ದಾರೆ. ವೃತ್ತಿಯಲ್ಲಿ ವ್ಯೆದ್ಯರಾದರೂ ಹಾವುಗಳನ್ನು ಹಿಡಿಯುವುದು ಇವರ ಹವ್ಯಾಸ. - ಚಿತ್ರ- ಲೇಖನ: ಉದಯ ವಿಟ್ಲ