ಆಟೋ ಗ್ಯಾಲರಿ ಫೆಬ್ರವರಿ ಮೊದಲ ವಾರ ನವದೆಹಲಿಯಲ್ಲಿ ನಡೆದ ಭಾರತದ ವಾಹನಗಳ ಹಬ್ಬ 'ಆಟೋ ಎಕ್ಸ್‌ಪೋ-2014'ರಲ್ಲಿ ಜನರ ಮನಗೆದ್ದ ಕೆಲ ಬೈಕ್, ಕಾರುಗಳ ಸಣ್ಣ ಝಲಕ್ ನಿಮಗಾಗಿ... ಬಿಎಂಡಬ್ಲ್ಯೂ ಐ8 ಒಂದೂವರೆ ಕೋಟಿ ರುಪಾಯಿ ಮೊತ್ತದ ಐಷಾರಾಮಿ ಕಾರು ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಬರಲಿದೆ. ಟ್ವಿನ್ ಪವರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು 100 ಕಿ.ಮೀ. ವೇಗವನ್ನು ಕೇವಲ 4.4 ಸೆಕಂಡ್‌ನಲ್ಲಿ ತಲುಪಲಿದೆ. ಮಾರುತಿ ಸುಝುಕಿ ಎಸ್‌ಎಕ್ಸ್4 ಎಸ್-ಕ್ರಾಸ್ ಬಹುನಿರೀಕ್ಷಿತ 1.6 ಲೀಟರ್ ಟರ್ಬೋಚಾರ್ಜ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನಲ್ಲಿ ಈ ಕಾರು ಮಾರ್ಚ್ ತಿಂಗಳೊಳಗೆ ಮಾರುಕಟ್ಟೆಗೆ ಬರಲಿದೆ. ಕಾಂಪ್ಯಾಕ್ಟ್ ಎಸ್‌ಯುವಿಯಾಗಿರುವ ಎಸ್-ಕ್ರಾಸ್ ರು. 8ಲಕ್ಷದಿಂದ ರು. 14 ಲಕ್ಷವರೆಗಿನ ದರಪಟ್ಟಿ ಹೊಂದುವ ಸಾಧ್ಯತೆಯಿದೆ. ಹೋಂಡಾ ಗೋಲ್ಡ್‌ವಿಂಗ್ ಅತಿ ಐಷಾರಾಮಿ ಬೈಕ್‌ಗಳಲ್ಲಿ ಇದೂ ಒಂದು. ಬೈಕ್‌ನ ರಾಜ ಹಾಗೂ ಬೈಕ್‌ನಲ್ಲಿ ಕಾರು ಎಂಬ ಹೆಗ್ಗಳಿಕೆಯನ್ನು ಈ ಬೈಕ್ ಹೊಂದಿದೆ. ಅಂದಹಾಗೆ ಇದು 1832 ಸಿಸಿ ಸಾಮರ್ಥ್ಯ ಹೊಂದಿದೆ. ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‌ಯುವಿಗೆ 2015ರ ಅಂತ್ಯದೊಳಗೆ ಸೇರುವ ಮತ್ತೊಂದು ಕಾರಿನ ಕಾನ್ಸೆಪ್ಟ್ ಇದು. 110 ಬಿಎಚ್‌ಪಿ ಸಾಮರ್ಥ್ಯದ ಒಂದು ಲೀಟರ್ ಟಿಎಸ್‌ಐ ಎಂಜಿನ್‌ನನ್ನು ಇದು ಹೊಂದಿದೆ. ಬಜಾಜ್ ಯು ಈಗಾಗಲೇ ಮಾರುಕಟ್ಟೆಯಲ್ಲಿರುವ ಆರ್‌ಇ-60ಯ ಸುಧಾರಿತ ತಳಿಯಿದು. ಸಣ್ಣ ಕಾರುಗಳ ವಿಭಾಗದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಈ ಕಾರು ಕಾರಣವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಟೋಗಳಿಗೆ ಪರ್ಯಾಯವಾಗಿ ಇದನ್ನು ತಯಾರಿಸಲಾಗುತ್ತಿದೆ. ಶೆವರ್ಲೆ ಆದ್ರಾ ಜನರಲ್ ಮೋಟಾರ್ಸ್‌ನ ಬೆಂಗಳೂರು ವಿಭಾಗದ ತಂಡವೇ ಈ ಕಾನ್ಸೆಪ್ಟ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ರೆನೋ ಡಸ್ಟರ್ ಹಾಗೂ ಫೋರ್ಡ್ ಇಕೋಸ್ಪೋರ್ಟ್‌ಗೆ ಪರ್ಯಾಯವಾಗಿ ಇದನ್ನು ಮಾರುಕಟ್ಟೆಗೆ ತರಲು ಹೊಂಚು ಹಾಕುತ್ತಿರುವ ಜನರಲ್ ಮೋಟಾರ್ಸ್, ಇವೆರಡು ಕಾರುಗಳಿಗಿಂತ ಹೆಚ್ಚು ಗ್ರೌಂಡ್ ಕ್ಲೀಯರನ್ಸ್ ಕೊಡುವುದಾಗಿ ಹೇಳಿಕೊಂಡಿದೆ. ಹೋಂಡಾ ಎನ್‌ಎಸ್‌ಎಕ್ಸ್ ಹೋಂಡಾದ ಅತ್ಯಾಕರ್ಷಕ ಕಾನ್ಸೆಪ್ಟ್‌ನಲ್ಲಿ ಈ ಸೂಪರ್ ಕಾರು ಕೂಡ ಒಂದು. ವಿ-6 ಎಂಜಿನ್ ಹೊಂದಿರುವ ಹೈಬ್ರೀಡ್ ಕಾರು 2015ರ ಅಂತ್ಯಕ್ಕೆ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೂ ಬರುವ ಸಾಧ್ಯತೆಯಿದೆ. ಹೋಂಡಾ ಎಕ್ಸ್‌ಎಸ್1 ಈ ಕಾರಿನ ಕಾನ್ಸೆಪ್ಟ್ ನೋಡಿದಾಗ ಎಂಪಿವಿ ವಾಹನಗಳ ಮಾರುಕಟ್ಟೆಯಲ್ಲಿ ಹೊಸ ಗಾಳಿಯನ್ನು ತರುವ ಸೂಚನೆಯನ್ನು ಕೊಡುತ್ತದೆ. ಸ್ಲೈಡಿಂಗ್ ಡೋರ್ ವ್ಯವಸ್ಥೆ ಹೊಂದಿರುವ ಈ ಕಾರು 2015ರ ಮಧ್ಯಾವಧಿಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಸಾಧ್ಯತೆಯಿದೆ. ಜಾಗ್ವಾರ್ ಸಿ ಎಕ್ಸ್17 ಪಕ್ಕಾ ಬಂಗಾರದ ವರ್ಣದಲ್ಲಿ ರೂಪುಗೊಳ್ಳುತ್ತಿರುವ ಮೊದಲ ಕಾರಿದು. ಐಷಾರಾಮಿ ಎಸ್‌ಯುವಿ ಸಾಲಿಗೆ ಇದು ಸೇರಲಿದ್ದು, 2015ರಲ್ಲಿ ಮಾರುಕಟ್ಟೆಗೆ ಬರಲಿದೆ. ಮಹೀಂದ್ರ ಎಲೆಕ್ಟ್ರಿಕ್ ಹೋಲೊ ಭಾರತದಲ್ಲಿ ಉತ್ಪಾದನೆಗೆ ಸಜ್ಜಾಗುತ್ತಿರುವ ಮೊದಲ ಸ್ಪೋರ್ಟ್ಸ್ ಎಲೆಕ್ಟ್ರಿಕ್ ಕಾರಿದು. ಅದನ್ನು ನಮ್ಮ ದೇಶದ ಕಂಪನಿಯೇ ತಯಾರಿಸುತ್ತಿರುವುದು ಹೆಮ್ಮೆಯ ವಿಚಾರ. 160 ಕಿ.ಮೀ. ಪ್ರತಿ ಗಂಟೆ ಹಾಗೂ ಎಂಟು ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗವನ್ನು ತಲುಪಲಿದೆ. ರೆನೋ ಮೆಗಾನೆ ಸ್ಪೋರ್ಟ್ಸಿ ಲುಕ್ ಹೊಂದಿರುವ ನೂತನ ಹ್ಯಾಚ್‌ಬ್ಯಾಕ್ ಇದು. 2 ಲೀ. ಪೆಟ್ರೋಲ್ ಟರ್ಬೋಚಾರ್ಜ್ ಹೊಂದಿದ್ದು, ಸುಮಾರು ರು. 15 ಲಕ್ಷ ದರಪಟ್ಟಿ ಹೊಂದಿರಬಹುದಾದ ದುಬಾರಿ ಕಾರು ಎನ್ನಲಾಗುತ್ತಿದೆ. ರೆನೋ ಕ್ವಿಡ್ ನೋಡಲು ಸ್ವಲ್ಪ ವಿಚಿತ್ರ ಎನಿಸಿದರೂ ಅತಿ ಐಷಾರಾಮಿ ಕಾನ್ಸೆಪ್ಟ್ ಕಾರು ಇದಾಗಿದೆ. ಯೂರೋಪ್‌ನಿಂದ ಹೊರಗೆ ರಿನೋನಿಂದ ಬಿಡುಗಡೆಯಾದ ಮೊದಲ ಕಾನ್ಸೆಪ್ಟ್ ಕಾರಿದು. 1.2 ಲೀ. ಟರ್ಬೋಚಾರ್ಜ್ ಎಂಜಿನ್ ಜತೆಗೆ ಆಕರ್ಷಕ ಒಳ ವಿನ್ಯಾಸವನ್ನು ಇದು ಹೊಂದಿದೆ. ಮಾರುತಿ ಸುಝುಕಿ ಸಿಯಾಝ್ ಎಸ್‌ಎಕ್ಸ್-4ಗೆ ಪರ್ಯಾಯವಾಗಿ ಮಾರುಕಟ್ಟೆಗೆ ತರಲು ರೂಪುಗೊಂಡಿರುವ ಕಾನ್ಸೆಪ್ಟ್ ಇದು. ಜಿಪುಣತನದಿಂದ ಹೊರಗೆ ಬಂದು ಇಂದಿನ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಒಳ ಹಾಗೂ ಹೊರ ವಿನ್ಯಾಸ ಮಾಡಿದಂತೆ ಭಾಸವಾಗುತ್ತದೆ. ಮರ್ಸಿಡೆಸ್ ಬೆಂಝ್ ಎಎಂಜಿ ಸಿಎಲ್‌ಎ 45 ಜಗತ್ತಿನಲ್ಲಿರುವ ಕಾರುಗಳಲ್ಲಿ ಅತಿ ಹೆಚ್ಚು ಶಕ್ತಿ ಶಾಲಿ ಎಂಜಿನ್ ಅನ್ನು ಇದು ಹೊಂದಿದೆ. 4.6 ಸೆಕೆಂಡ್‌ನಲ್ಲಿ 100 ಕಿ.ಮೀ. ವೇಗವನ್ನು ತಲುಪುವ ಈ ಕಾರು 2 ಲೀಟರ್ ಜೆಟ್ಟಾ ಎಂಜಿನ್ ಹೊಂದಿದೆ. ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿ ರೇಸ್‌ಗೆ ಹೊಸದಾಗಿ ನೆಕ್ಸಾನ್ ಸೇರುತ್ತಿದೆ. 2015ರ ಮಧ್ಯದಲ್ಲಿ ಈ ಕಾರು ಮಾರುಕಟ್ಟೆಗೆ ಬರಲಿದ್ದು, 1.2 ಲೀ. ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಬಳಸಲಾಗುತ್ತಿದೆ. ಜಾಗ್ವಾರ್ ಎಫ್ ಟೈಪ್ ಐದು ಲೀಟರ್ ಸೂಪರ್‌ಚಾರ್ಜ್ ವಿ-8 ಎಂಜಿನ್ ಹೊಂದಿರುವ ಈ ಕಾರು ಕೇವಲ 4 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗವನ್ನು ದಾಟುತ್ತದೆ. ಈ ಕಾರಿನ ಗರಿಷ್ಠ ವೇಗಮಿತಿ 298 ಕಿ.ಮೀ. ಆಗಿದೆ. ಡಟ್ಸನ್ ಗೋ ಪ್ಲಸ್ ಮಾರುತಿ ಸುಝುಕಿ ಎರ್ಟಿಗಾಗೆ ಪರ್ಯಾಯವಾಗಿ ಗೋ ಪ್ಲಸ್ ಎಂಪಿವಿಯನ್ನು ಹೊರತರಲಾಗಿದೆ. ಇದು 3-ಸಿಲಿಂಡರ್ 1.2 ಲೀ. ಪೆಟ್ರೋಲ್ ಎಂಜಿನ್ ಹೊಂದಿದೆ. ಶೀಘ್ರದಲ್ಲೇ ಚೆನ್ನೈನಲ್ಲಿನ ನಿಸಾನ್ ಘಟಕದಲ್ಲಿ ಉತ್ಪಾದನೆ ಆರಂಭವಾಗಲಿದೆ. ಶೆವರ್ಲೆ ಟ್ರೇಲ್‌ಬ್ಲೇಝರ್ ಫಾರ್ಚ್ಯೂನರ್, ಎಂಡೋವರ್‌ನಂಥ ಐಷಾರಾಮಿ ಎಸ್‌ಯುವಿಗೆ ಪೈಪೋಟಿ ನೀಡಲು ಟ್ರೇಲ್ ಬ್ಲೇಝರ್ ಅನ್ನು ಮಾರುಕಟ್ಟೆಗೆ ನೂಕಲಾಗುತ್ತಿದೆ. ಗಾತ್ರದಲ್ಲಿ ಪಕ್ಕಾ ಎಸ್‌ಯುವಿ ಎನಿಸಿದರೂ ಶೆವರ್ಲೆ ಕಂಪನಿಯು ತನ್ನ ಹಳೆಯ ವಿನ್ಯಾಸ ಶೈಲಿಯನ್ನು ಕೈಬಿಟ್ಟಂತೆ ಕಾಣುತ್ತಿಲ್ಲ. ಫೀಯಟ್ ಅಬಾರ್ಥ್ ಫೋಕ್ಸ್‌ವ್ಯಾಗನ್‌ನ ಬೀಟಲ್ ಹಾಗೂ ಬಿಎಂಡಬ್ಲ್ಯೂವಿನ ಮಿನಿ ಕೂಪರ್ ವಿನ್ಯಾಸದಲ್ಲೇ ಅಬಾರ್ಥ್ ವಿನ್ಯಾಸಗೊಂಡಿದೆ. ಆದರೆ ರು. 10 ಲಕ್ಷದೊಳಗೆ ಈ ಸಣ್ಣ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸಿಗಲಿದೆ. ಸಾಕಷ್ಟು ವರ್ಷಗಳ ಬಳಿಕ ಹೊಸ ಕಾರೊಂದನ್ನು ಭಾರತದಲ್ಲಿ ಬಿಡುಗಡೆ ಮಾಡಲು ಫೀಯಟ್ ನಿರ್ಧರಿಸಿದೆ. ಹುಂಡೈ ಸಂಟಾ ಫೆ ಇದೂ ದೊಡ್ಡ ಎಸ್‌ಯುವಿ ಸಾಲಿಗೆ ಈ ವರ್ಷ ಸೇರುತ್ತಿರುವ ಮತ್ತೊಂದು ಕಾರು. 2.2 ಲೀ. ಸಿಆರ್‌ಡಿಐ ಎಂಜಿನ್ ಹೊಂದಿರುವ ಸಂಟಾ ಫೆ ದರ ಕೂಡ ರು. 27 ಲಕ್ಷದಷ್ಟು ಬೃಹತ್ ಆಗಿಯೇ ಇದೆ. ಡಿಸಿ ಟಿಯಾ ಮತ್ತು ಎಲೆರಾನ್ ಭಾರತದ ಖ್ಯಾತ ಕಾರು ಡಿಸೈನರ್ ಆದ ದಿಲೀಪ್ ಛಾಬ್ರಿಯಾ ಡಿಸೈನ್ ಮಾಡಿರುವ ಎರಡು ಸೀಟರ್ ಕಾರುಗಳಿವು. 2016ರಿಂದ ವಾರ್ಷಿಕವಾಗಿ ತಲಾ 100 ಹಾಗೂ 500 ಕಾರುಗಳನ್ನು ಉತ್ಪಾದಿಸುವ ಗುರಿಯನ್ನು ಡಿಸಿ ಸಂಸ್ಥೆ ಹಾಕಿಕೊಂಡಿದೆ.