ಗಾರ್ಡನ್ ಸ್ಕೂಲ್ ಶಾಲೆ ಬೋರ್ಡ್ ನೋಡಿ 'ಹೀಗೂ ಇರಲಿಕ್ಕೆ ಸಾಧ್ಯವಾ' ಎಂದು ಹುಬ್ಬೇರಿಸುತ್ತಾರೆ. ಬೆಟ್ಟಹಳ್ಳಿ ಮೂಲಕ ಶಿವಗಂಗೆಗೆ ಹೋಗುವವರಲ್ಲಿ ಕೆಲವರಾದರೂ ಅಲ್ಲಿನ ಗೇಟ್ ಬಳಿ ಬರುತ್ತಾರೆ. ಬೋರ್ಡ್ ನೋಡಿ 'ಹೀಗೂ ಇರಲಿಕ್ಕೆ ಸಾಧ್ಯವಾ' ಎಂದು ಹುಬ್ಬೇರಿಸುತ್ತಾರೆ. ಆಸಕ್ತರಲ್ಲಿ ಕೆಲವರಲ್ಲಿ ಒಳ ಬಂದು, ಒಂದು ಸುತ್ತು ಹಾಕಿ, ಶಹಬ್ಬಾಸ್ ಹೇಳಿ ಹೋಗುತ್ತಾರೆ. ಬಹಳಷ್ಟು ದಿನಗಳ ಕಾಲ ಅವರನ್ನು ಬೆಟ್ಟಹಳ್ಳಿ ಕಾಡುತ್ತಿರುತ್ತದೆ. ಎಲ್ಲಿದೆ ಈ ಬೆಟ್ಟಹಳ್ಳಿ? ಅಲ್ಲಿನ ವಿಶೇಷವಾದರೂ ಏನು? ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿಯಲ್ಲಿ, ಶಿವಗಂಗೆ ಬೆಟ್ಟದ ತಪ್ಪಲು ಪ್ರದೇಶದ ಕುಗ್ರಾಮ. ಗುಂಡಿಗಳಿಂದ ಕೂಡಿದ ಡೊಂಕುಡೊಂಕಾದ ಮಣ್ಣುರಸ್ತೆ. ಕಾಡಿಗೆ ಹೊಂದಿಕೊಂಡೇ ಇರುವುದರಿಂದ ಆಗಾಗ ಕಾಡು ಪ್ರಾಣಿಗಳ ದಾಳಿ ಭಯ. ಬೆಟ್ಟಹಳ್ಳಿ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆಯಲ್ಲ, ಅದರ ಸಾಧನೆ ನಿಬ್ಬೆರಗಾಗಿಸುತ್ತದೆ. ಬೆಂಗಳೂರಿನಂಥ ಬೃಹನ್ನಗರಗಳಲ್ಲಿ ಪಾಲಿಕೆಯಂಥ ಆಡಳಿತ ಸಂಸ್ಥೆಗಳೂ ಮಾಡಲು ಸಾಧ್ಯವಿಲ್ಲದ ಕಾರ್ಯವನ್ನು ಕೇವಲ ಇಬ್ಬರು ಶಿಕ್ಷಕರು ಮಾಡಿ ತೋರಿಸಿದ್ದಾರೆ. ಅವರ ಇಚ್ಛಾಶಕ್ತಿಯ ಫಲವಾಗಿ ಶಾಲೆ ಆವರಣ ಹಸಿರಿನಿಂದ ತೊನೆದಾಡುತ್ತಿದೆ. ಆಕರ್ಷಣೆಯ ಕೇಂದ್ರವಾಗಿದೆ. ಶಾಲೆ ಆವರಣಕ್ಕೆ ಹೆಜ್ಜೆ ಇಡುತ್ತಿದ್ದಂತೆ ಉಲ್ಲಾಸಿತ ಭಾವ ಮೂಡುತ್ತದೆ. ಶಾಲೆಯ ಎದುರು ನಿರ್ಮಿಸಿರುವ ಸುಂದರ ಉದ್ಯಾನ ಪ್ರಮುಖ ಆಕರ್ಷಣೆ. ಕೈತೋಟದಲ್ಲಿ ಮಕ್ಕಳ ಬಿಸಿಯೂಟಕ್ಕೆ ಬೇಕಾಗುವ ತರಕಾರಿ ಬೆಳೆಗಳು. ಪಕ್ಕದ ಚಿಕ್ಕ ತೋಟದಲ್ಲಿ ಬಾಳೆಗಿಡಗಳು ಕೊನೆಗಳನ್ನು ಹೊತ್ತು ನಿಂತಿವೆ. ಬಣ್ಣಬಣ್ಣದ, ಮನ ಸೆಳೆಯುವ ಪುಷ್ಪಗಳನ್ನು ಅರಳಿಸಿ ನಿಂತ ಗಿಡಗಳು. ಸಿಂಹಾಸನ, ಗುಹೆ, ನೀರಿನ ಕಾರಂಜಿ, ಬೆಟ್ಟದ ಝರಿ, ತಾವರೆ ಕೊಳ, ತಿರುಗುವ ಕಾರಂಜಿ, ಆಮೆ, ನಾಗರಹಾವು, ಮಕ್ಕಳು ಆಟವಾಡುವುದಕ್ಕೆ ಜಾರುಬಂಡಿ, ನೀರಿನಕೊಳ, ಧ್ಯಾನಪೀಠ, ಗೋಪುರ, ಬೆಟ್ಟ, ದ್ವಾರಬಾಗಿಲು, ಔಷಧ ವನ, ಸಾಹಸ ಕ್ರೀಡೆಗಳ ಅಂಕಣ ಎಲ್ಲವೂ ಅತ್ಯಾಕರ್ಷಕ. ಹಾಗೆಯೇ ಶಾಲೆಯ ಅಂಗಳದಲ್ಲಿ ಬಿದಿರಿನಿಂದ ಸಾಕ್ಷರ ತೇರು, ಮಹಡಿಮನೆ, ವಿಶ್ರಾಂತಿಗೃಹ, ಸೇತುವೆ ಹೀಗೆ ಅನೇಕ ಕಲಾಕೃತಿಗಳಿಂದ ಶಾಲೆಗೆ ರಾಕ್‌ಗಾರ್ಡನ್ ಸೌಂದರ್ಯದ ಮೆರುಗು. ಶಾಲಾ ಅವಧಿ ಮುಗಿದ ನಂತರವೇ ಇದನ್ನೆಲ್ಲ ಮಾಡಿದ್ದಾರೆ ಮತ್ತು ಬಹಳಷ್ಟು ನಿರುಪಯುಕ್ತ ವಸ್ತುಗಳನ್ನೇ ಬಳಸಲಾಗಿದೆ ಎನ್ನುವುದು ಇನ್ನೂ ವಿಶೇಷ. ಬೆಟ್ಟಹಳ್ಳಿ ಕಾಲೊನಿ ಶಾಲೆಯಲ್ಲಿ ಓದುತ್ತಿರುವುದು ಕೇವಲ 16 ವಿದ್ಯಾರ್ಥಿಗಳು. ಇರುವುದು ಇಬ್ಬರೇ ಶಿಕ್ಷಕರು- ಡಿ.ರಘುಪತಿ ಮತ್ತು ಜಯಶ್ರೀ. ಈ ಶಿಕ್ಷಕರೇ ಸ್ವಂತ ಶ್ರಮ ಮತ್ತು ಹಣ ವ್ಯಯಿಸಿ ಶಾಲೆಯ ಸೌಂದರ್ಯ ಹೆಚ್ಚಿಸಿದ್ದಾರೆ. ಪಾಲಕರು ಮತ್ತು ಹಳೆವಿದ್ಯಾರ್ಥಿಗಳ ಸಹಕಾರ ಇದ್ದೇಇದೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಇಂಥ ಶಿಕ್ಷಕರಿದ್ದರೆ... ಬೆಟ್ಟಹಳ್ಳಿ ಶಾಲೆಯ ಬ್ಯೂಟಿ ಎಲ್ಲಿದೆ ಈ ಬೆಟ್ಟಹಳ್ಳಿ? ಅಲ್ಲಿನ ವಿಶೇಷವಾದರೂ ಏನು? ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿಯಲ್ಲಿ, ಶಿವಗಂಗೆ ಬೆಟ್ಟದ ತಪ್ಪಲು ಪ್ರದೇಶದ ಕುಗ್ರಾಮ. ಗುಂಡಿಗಳಿಂದ ಕೂಡಿದ ಡೊಂಕುಡೊಂಕಾದ ಮಣ್ಣುರಸ್ತೆ... ಹೀಗಿತ್ತು ಹೀಗಾಯ್ತು! ಸಹ ಶಿಕ್ಷಕರಾಗಿ ರಘುಪತಿ ಬೆಟ್ಟಹಳ್ಳಿಗೆ ಬಂದಾಗ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೂ ಇರಲಿಲ್ಲ. ಅದು ಬಿಡಿ, ಸರಿಯಾದ ಕಂಪೌಂಡ್ ಕೂಡ ಇರಲಿಲ್ಲ. ಪೋಷಕರ ಸಭೆ ಕರೆದ ರಘುಪತಿ ಶಾಲೆಯ ಅಂಗಳದಲ್ಲಿ ಕೈತೋಟ ಆರಂಭಿಸುವ ಪ್ರಸ್ತಾಪ ಇಟ್ಟರು. ಶುರುವಲ್ಲಿ ಅಪಸ್ವರ ಕೇಳಿ ಬಂದರೂ. ಸಮಾಧಾನದಿಂದ ಎಲ್ಲರನ್ನು ಒಪ್ಪಿಸಿ ಕೈತೋಟ ಆರಂಭಿಸಿದರು. ಮುಂದೆ ಹಂತಹಂತವಾಗಿ ತಮ್ಮ ಯೋಜನೆ ಕಾರ್ಯಗತಗೊಳಿಸಿದರು. ಶಿಕ್ಷಕಿ ಜಯಶ್ರೀ ಅವರಿಗೂ ರಘುಪತಿ ಕಾರ್ಯವೈಖರಿ ಮೆಚ್ಚುಗೆಯಾಯಿತು. ಅವರಿಗೆ ಬೆಂಬಲವಾಗಿ ನಿಂತರು. ಹೆತ್ತವರಿಗೆ ಸ್ವಚ್ಛತೆ ಪಾಠ ಶಾಲೆಯ ಪ್ರಾರ್ಥನಾ ಅವಧಿಯಲ್ಲಿ ಭಗವದ್ಗೀತೆ ಪಠಣದ ಜೊತಗೆ ಸುಭಾಷಿತ, ಇಂಗ್ಲೀಷ್ ಸುಭಾಷಿತ, ಮನರಂಜಿಸುವ ಸತ್ಯ ಸಂಗತಿ, ಆಶ್ಚರ್ಯಕರ ಸಂಗತಿ, ಸಾಮಾನ್ಯ ಜ್ಞಾನದ ಪ್ರಶ್ನೆಗಳು, ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಇಂಗ್ಲೀಷ್ ಪದಗಳು, ಹೀಗೆ ನಾನಾ ರೀತಿಯ ಚಟುವಟಿಕೆಗಳು. ಜತೆಗೆ ಕಂಪ್ಯೂಟರ್ ಶಿಕ್ಷಣ. ಈ ಶಾಲೆ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯಲ್ಲಿ ಸತತ ನಾಲ್ಕು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಮತ್ತು ಇಲಾಖೆಯ ಸಂಕ್ಷಿಪ್ತ ಮೌಲ್ಯಮಾಪನದಲ್ಲಿ ಶೇ.95 ರಷ್ಟು ಅಂಕ ಗಳಿಸಿರುವುದು ಈ ಶಾಲೆಯ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ. ಶಾಲೆಯಲ್ಲಿರುವ ಹದಿನಾರು ಮಕ್ಕಳೂ ಸೇರಿ ಐದಾರು ರೀತಿಯಲ್ಲಿ ಡ್ರಮ್‌ಸೆಟ್ ಬಡಿಯುವುದು ವಿಶೇಷ. ಡ್ರಮ್‌ಸೆಟ್ ಬಡಿಯುವ ಜಿಲ್ಲೆಯ ಏಕೈಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಂಬ ಹೆಗ್ಗಳಿಕೆ ಕೂಡ ಈ ಶಾಲೆಗಿದೆ. ಇಲ್ಲಿನ ಮಕ್ಕಳೂ ಕಲಿಕೆಯಲ್ಲಿ ವೇಗವಾಗಿದ್ದು ಕಲಿಕೆಗಾಗಿ ವೈಯಕ್ತಿಕ ಗಮನ, ತಿಂಡಿಗೊಂದು ಪ್ರಶ್ನೆ, ನಿಯೋಜಿತಕಾರ್ಯ, ರಸಪ್ರಶ್ನೆ ಹೀಗೆ ಅನೇಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕಲಿಸಲಾಗುತ್ತಿದೆ. ಈ ಶಾಲೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 2012-13 ನೇ ಸಾಲಿನ ಪರಿಸರಮಿತ್ರ ಪ್ರಸಸ್ತಿ ಲಭಿಸಿತ್ತು. ಜಿಲ್ಲಾ ಹಂತದ ನೈರ್ಮಲ್ಯ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿತ್ತು. ಬೆಟ್ಟದ ತಪ್ಪಲಿನಲ್ಲಿರುವ ಶಾಲೆಯ ಮಕ್ಕಳು ಇಂದು ಶಿಸ್ತಿನ ಸಿಪಾಯಿಗಳಾಗಿ ರೂಪುಗೊಂಡಿದ್ದಾರೆ. ಅವರಿಗೆ ವಾರದ ಆರು ದಿನವೂ ಬೇರೆಬೇರೆ ರೀತಿಯ ಸಮವಸ್ತ್ರ ಧರಿಸುವ ಭಾಗ್ಯ. ಪುಟಾಣಿಗಳು ಶಾಲಾ ಸ್ವಚ್ಛತೆ ಜೊತೆಗೆ ಗ್ರಾಮ ನೈರ್ಮಲ್ಯದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪ್ರೋತ್ಸಾಹ ಮುಖ್ಯ ಜಿಲ್ಲೆಯಲ್ಲಿ ನೂರಾರು ಪ್ರತಿಭಾನ್ವಿತ ಶಿಕ್ಷಕರಿದ್ದಾರೆ. ಅವರಿಗೆ ಅಧಿಕಾರಿ ವರ್ಗ, ಪೋಷಕರು ಪ್ರೋತ್ಸಾಹ ನೀಡಿದರೆ ಇಂತಹ ಮಾದರಿ ಶಾಲೆಗಳು ಹುಟ್ಟಲು ಕಾರಣವಾಗುತ್ತದೆ. ಬೆಟ್ಟಹಳ್ಳಿ ಶಾಲೆ ಶಿಕ್ಷಕರ ಸಾಧನೆ ನಿಜಕ್ಕೂ ಹೆಮ್ಮೆ ತರುವಂಥ ವಿಚಾರ. - ಪ್ರಹ್ಲಾದಗೌಡ, ಡಿಡಿಪಿಐ, ರಾಮನಗರ ಜಿಲ್ಲೆ - ರಘು