ಅಬ್ಬಬ್ಬಾ! ಅಬ್ಬಿ ಇಲ್ಲೊಂದು ಫಾಲ್ಸ್... ಅಲ್ಲಲ್ಲಾ, ಮಿನಿ ಡ್ಯಾಂ ಇದೆ. ಹೆಸರು ಅಬ್ಬಿಗುಂಡಿ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ನಾಗರಮಕ್ಕಿಯಿಂದ ಕೇವಲ 1.50 ಕಿ.ಮೀ. ದೂರದಲ್ಲಿ ಆನೆತಗ್ಗು ಎಂಬ ಪುಟ್ಟಹಳ್ಳಿ ಇದೆ. ಈ ಫಾಲ್ಸ್ ಇರುವುದೂ ಇಲ್ಲಿಯೇ. ಮನೆಯ ಹಾಲ್‌ನಲ್ಲಿ ಇಳಿಬಿಟ್ಟ ಅಲಂಕಾರಿಕ ಪರದೆಯಂತೆ, ಇಡೀ ನಿಸರ್ಗಕ್ಕೇ ಇಲ್ಲಿ ನೀರ ಸೆರಗು ಹೊದಿಸಿದಂತೆ ಜುಳುಜುಳು ಹರಿಯುತ್ತದೆ ಅಬ್ಬಿಗುಂಡಿ ಜಲಧಾರೆ. ಕುದುರೆ ಗುಂಡಿಯಿಂದ ಹರಿದು ಬರುವ ಕಪಿಲಾ ಹಳ್ಳಕ್ಕೆ 40 ವರ್ಷಗಳ ಹಿಂದೆಯೇ ಈ ಸ್ಥಳದಲ್ಲಿ ಮಿನಿ ಡ್ಯಾಂ ಕಟ್ಟಲಾಗಿತ್ತು. 300 ಅಡಿ ಉದ್ದ, 12 ಅಡಿ ಎತ್ತರವಿದೆ ಈ ಪುಟ್ಟ ಡ್ಯಾಂ. ಜೂನ್‌ನಲ್ಲಿ ಮಳೆ ಪ್ರಾರಂಭವಾದ ನಂತರ ಡ್ಯಾಂ ತುಂಬಿ ಧುಮ್ಮಿಕ್ಕುವುದು ಕಣ್ಮನಕ್ಕೆ ಸುಗ್ಗಿ. ಫೆಬ್ರವರಿ, ಮಾರ್ಚ್ ಅಂತ್ಯದವರೆಗೂ ಈ ಸೊಬಗು ನೋಡಬಹುದು. 12 ಅಡಿಯ ಎತ್ತರದ ಡ್ಯಾಂನ ಕಟ್ಟೆಯಲ್ಲಿ ನೀರು ಉಕ್ಕಿ, ಇಳಿಜಾರು ಬಂಡೆಯಲ್ಲಿ ಹರಿಯುವಾಗ ಭೋರ್ಗರೆಯುವ ಸದ್ದು ಮತ್ತು ನೀರಿನ ಚೆಲ್ಲಾಟ ಕಿವಿ- ಕಣ್ಣುಗಳಿಗೆ ಅಪರೂಪದ ಮನರಂಜನೆ. ಸ್ವಲ್ಪ ದೂರ ಹಾವಿನಂತೆ ಮುಂದುರಿಯುವ ಜಲಧಾರೆ ನಂತರ ಕಪಿಲಾ ಹಳ್ಳವಾಗಿ ಮತ್ತೆ ಹರಿದು ಕುಣಜ, ಹಳ್ಳಿಬೈಲು, ಹಾತೂರು, ಮಲ್ಲಂದೂರು ಮಾರ್ಗವಾಗಿ ತುಂಗಾನದಿ ಸೇರುತ್ತದೆ. ಪ್ರವಾಸಿ ತಾಣಕ್ಕೆ ಯೋಗ್ಯ ಈ ಡ್ಯಾಂ ಎಷ್ಟೋ ವರ್ಷ ಹಿಂದೆಯೇ ಕಟ್ಟಲಾಗಿದ್ದರೂ ಹೊರ ಜಗತ್ತಿಗೆ ಅಷ್ಟು ಪರಿಚಯವಾಗಿಲ್ಲ. ಡ್ಯಾಂನಿಂದ ಸುಮಾರು 500 ಮೀಟರ್ ಕೆಳಗೆ ಎತ್ತರದ ಬಂಡೆ ಇದೆ. ಆ ಜಾಗದಲ್ಲಿ ನಿಂತು ಜಲಪಾತದ ಸೊಬಗು ವೀಕ್ಷಿಸಬಹುದು. ಡ್ಯಾಂನಿಂದ ಫರ್ಲಾಂಗ್ ದೂರದವರೆಗೂ ಕಲ್ಲು ಹಾಸಿಗೆಯಂತೆ ಬೃಹತ್ ಬಂಡೆ, ಅಲ್ಲಲ್ಲಿ ಕವಲಾಗಿ ಜುಳುಜುಳು ಹರಿಯುವ ನೀರು ಫೋಟೋಗ್ರಫಿಗೆ ಹೇಳಿಮಾಡಿಸಿದ್ದು. ಸೀತೂರು ಗ್ರಾ.ಪಂ. ಅಬ್ಬಿಗುಂಡಿ ಡ್ಯಾಂನವರೆಗೂ ಚರಂಡಿ ಸಮೇತ ರಸ್ತೆ ಮಾಡಿಸಿದೆ. ರಸ್ತೆಗೆ ಜಲ್ಲಿ ಹಾಕಿದರೆ ಮಳೆಗಾಲದಲ್ಲೂ ಪ್ರವಾಸಿಗರು ಭೇಟಿ ನೀಡಲು ಸುಲಭವಾಗುತ್ತದೆ. ನಾಗರಮಕ್ಕಿ ಮತ್ತು ಮುಂದೆ ಬರುವ ತಿರುವ ರಸ್ತೆಗಳಲ್ಲಿ ಮಾರ್ಗ ಸೂಚಿ ನಾಮಫಲಕ ಹಾಕಬೇಕಿದೆ. ಡ್ಯಾಂನಿಂದ ಸದಾ ನೀರು ಧುಮುಕುವುದರಿಂದ ಬಂಡೆಗಳು ಪಾಚಿಕಟ್ಟಿ ಕಾಲಿಟ್ಟರೆ ಜಾರಿ ಬೀಳುವ ಅಪಾಯವೂ ಇದೆ. ಶಿವಮೊಗ್ಗದ ಜೋಗ, ಬಾಳೆಬರೆ, ಮೈಸೂರಿನ ಬಲಮುರಿ, ಕೊಡಗಿನ ಅಬ್ಬಿಗೆ ಅನಾಯಾಸವಾಗಿ ಹೋಗಬಹುದು. ಅಬ್ಬಿಗುಂಡಿ ಎಲ್ಲಾ ರೀತಿಯಲ್ಲೂ ಇವುಗಳಿಗೆ ಪೈಪೋಟಿ ನೀಡುತ್ತದೆ. ಆದರೆ, ಇದಕ್ಕೆ ತೆರಳು ಮಾರ್ಗ ಮಾತ್ರ ಪ್ರಯಾಸದಾಯಕ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ತಲೆಕೆಡಿಸಿಕೊಳ್ಳಬೇಕು. < ರೂಟ್‌ಮ್ಯಾಪ್ ಶಿವಮೊಗ್ಗದಿಂದ ಶೃಂಗೇರಿಗೆ ಹೋಗುವ ಮಾರ್ಗ ಮಧ್ಯ ಅಬ್ಬಿಗುಂಡಿ ಫಾಲ್ಸ್ ಇದೆ. ಎನ್.ಆರ್. ಪುರದಲ್ಲಿ ಹೋಟೆಲ್, ಲಾಡ್ಜಿಂಗ್ ವ್ಯವಸ್ಥೆ ಮಾಡಿಕೊಳ್ಳಬಹುದು. ಎನ್.ಆರ್. ಪುರಕ್ಕೆ ಶಿವಮೊಗ್ಗದಿಂದ 55 ಕಿ.ಮೀ., ಚಿಕ್ಕಮಗಳೂರಿನಿಂದ -127, ಕೊಪ್ಪದಿಂದ -23, ಹಾಸನದಿಂದ -181, ಮಂಗಳೂರಿನಿಂದ -157, ಮೈಸೂರಿನಿಂದ -274, ಶ್ರವಣಬೆಳಗೊಳದಿಂದ 205, ಬೆಂಗಳೂರಿನಿಂದ 308 ಕಿಲೋಮೀಟರ್. ರೇಲ್ವೆ ಮಾರ್ಗವಾದರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಹತ್ತಿರ. ಚಿತ್ರ-ಲೇಖನ: ಯಡಗೆರೆ ಮಂಜುನಾಥ್