ಕಿತ್ತೂರು ಕಹಳೆ ಕಿತ್ತೂರು ಕೊನೆಯ ಕಾಳಗ ಘಟಿಸಿ (1824) 189 ವರ್ಷ ಗತಿಸಿವೆ. ಇಂದಿಗೂ ಕಿತ್ತೂರು ಕೋಟೆ,... ಕಿತ್ತೂರು ಕೊನೆಯ ಕಾಳಗ ಘಟಿಸಿ (1824) 189 ವರ್ಷ ಗತಿಸಿವೆ. ಇಂದಿಗೂ ಕಿತ್ತೂರು ಕೋಟೆ, ಅಲ್ಲಿನ ವೀರ ಸಮಾಧಿಗಳು, ರಾಣಿ ಚೆನ್ನಮ್ಮಾಜಿಯ ಬೆನ್ನಿಗೆ ನಿಂತ ವೀರ ಕಲಿಗಳಾದ ಸಂಗೊಳ್ಳಿ ರಾಯಣ್ಣನಂಥ ವೀರರ ಸ್ಮಾರಕಗಳು ಬೆಳಗಾವಿ ಜಿಲ್ಲೆಯಾದ್ಯಂತ ಈಗಲೂ ಉಳಿದಿವೆ, ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ನೆನಪಿಸುತ್ತಿವೆ. ಕಿತ್ತೂರು ಕೋಟೆ ಒಳಗೆ ಪ್ರವೇಶಿಸಿಸುತ್ತಿದ್ದಂತೆ ಮ್ಯೂಜಿಯಂ ಕಾಣುತ್ತದೆ. ಅಲ್ಲಿ ಕಿತ್ತೂರಿನ ಅರಮನೆಯ ಅವಶೇಷಗಳು, ಕಿತ್ತೂರಿನ ಇತಿಹಾಸ ಸಾರುವ ತೈಲವರ್ಣ ಚಿತ್ರಗಳು, ಅಂದಿನ ಕಾಲದಲ್ಲಿ ಬಳಸಲಾದ ವಸ್ತುಗಳು, ಕತ್ತಿ-ಗುರಾಣಿಗಳು, ಪೋಷಾಕುಗಳು, ನಾಣ್ಯಗಳು, ಸುತ್ತಮುತ್ತಲೂ ಲಭ್ಯವಾದ ಶಿಲಾಲೇಖಗಳು, ಬೀಸುವ ಕಲ್ಲುಗಳು, ಕಿತ್ತೂರಿನ ವಂಶಾವಳಿ ಮೊದಲಾದವುಗಳನ್ನು ಕಾಣಬಹುದು. ಬೆಳಗ್ಗೆ 9ರಿಂದ ಸಂಜೆ 5 ರವರೆಗೂ ತೆರೆದಿರುತ್ತದೆ. ಉಚಿತ ಪ್ರವೇಶ. ಸರಕಾರಿ ರಜೆಗಳನ್ನು ಹೊರತುಪಡಿಸಿದರೆ ವಾರದ ರಜೆ ಸೋಮವಾರ. ಉತ್ಸವ ನಡೆಯುವಾಗ ಮೂರೂ ದಿನ ತೆರೆದಿರುತ್ತದೆ. ಮ್ಯೂಜಿಯಂನಿಂದ ಕೊಂಚ ಮುಂದಕ್ಕೆ ಸಾಗಿದರೆ ಕಾಣುವುದು ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ ಭತ್ತೇರಿ. ಅಲ್ಲಿಂದ ಕೊಂಚ ದೂರ ಸಾಗಿದರೆ ಒಂದು ಕಾಲದಲ್ಲಿ ಬಲಾಢ್ಯ ಕೋಟೆಯಾಗಿದ್ದ ದೊಡ್ಡ ಕೋಟೆಯ ಭಗ್ನಾವಶೇಷಗಳು ಕಾಣುತ್ತವೆ. ಸರ್ಕಾರ ಈ ಅಳಿದುಳಿದ ಭಗ್ನಾವಶೇಷಗಳ ಸುತ್ತಲೂ ಹಸಿರು ಹುಲ್ಲುಹಾಸು ಬೆಳೆಸುವ ಮೂಲಕ ಸೌಂದರ್ಯ ಹೆಚ್ಚಿಸಿದೆ. ಅರಮನೆಯ ಮುಖ್ಯದ್ವಾರ ಹಾಳಾಗಿದ್ದು ಅಲ್ಲೇ ಸನಿಹದಲ್ಲಿ 100 ಅಡಿ ಅಗಲ, 300 ಅಡಿ ಉದ್ದದ ದ್ವಾರ ಮಂಟಪವಿದೆ. ವ್ಯವಸ್ಥಿತವಾಗಿ ನಿರ್ಮಾಣವಾಗಿದ್ದ ಅತಿಥಿಗಳ ಕೋಣೆಗಳು, ಸಭಾಗೃಹ, ಭೋಜನಾಲಯ, ಪೂಜಾ ಕೊಠಡಿ, ಸ್ನಾನದ ಮನೆ ಗಮನ ಸೆಳೆಯುತ್ತವೆ. ಈ ಕೋಟೆಯ ಗೋಡೆಗಳ ಮಧ್ಯದಲ್ಲಿ 1.5 ಅಡಿ ವ್ಯಾಸದ ಓರೆಯಾಗಿ ಕೂಡಿಸಿದ ಕಬ್ಬಿಣದ ಕೊಳವೆಯಿದ್ದು ಅದು ಆಕಾಶದ ಕಡೆಗೆ ಮುಖ ಮಾಡಿದೆ. ಇದು ನಕ್ಷತ್ರಗಳ ವೀಕ್ಷಣೆಗೆ ಮಾಡಿದ್ದಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನೀರಿನ ವ್ಯವಸ್ಥೆ ಅಚ್ಚರಿ ಉಂಟು ಮಾಡುತ್ತದೆ. ಒಂದು ಕಡೆ ಸಂಗ್ರಹಿಸಿದ ನೀರು ಇಡೀ ಅರಮನೆಗೆ ಪೂರೈಕೆಯಾಗುವಂಥ ವ್ಯವಸ್ಥೆ ಅಚ್ಚರಿ ಮೂಡಿಸುತ್ತದೆ. ಸಮಾಧಿಗಳು ಮ್ಯೂಜಿಯಂ ಸಮೀಪದಲ್ಲಿರುವ ಕಲ್ಮಠಕ್ಕೆ ಭೇಟಿ ಕೊಡಲೇಬೇಕು. ಇದು ರಾಜಗುರುಗಳ ಸಂಸ್ಥಾನ ಮಠ. ಈ ಮಠದಲ್ಲಿ ಮುದಿ ಮಲ್ಲಪ್ಪ ಸರದೇಸಾಯಿ, ರುದ್ರಸರ್ಜ, ವೀರಪ್ಪಗೌಡ ಸರದೇಸಾಯಿ, ಮಲ್ಲಸರ್ಜ, ರಾಣಿ ಚೆನ್ನಮ್ಮಳ ಮಗ ಬಾಳಾಸಾಹೇಬ, ಶಿವಲಿಂಗ ರುದ್ರಸರ್ಜನ ಸಮಾಧಿಗಳಿವೆ. ಸಮಾಧಿಗಳ ಶಿಲ್ಪಶೈಲಿಯನ್ನು ವಿಶೇಷವಾಗಿ ಗಮನಿಸಬೇಕು. ನಂದಿಹಳ್ಳಿ ಕಿತ್ತೂರಿನಿಂದ 8 ಕಿ.ಮೀ ದೂರದಲ್ಲಿರುವ ನಂದಿಹಳ್ಳಿಯಲ್ಲಿ ದೊರೆ, ಚೆನ್ನಾಮ್ಮಾಜಿ ಪತಿ ಮಲ್ಲಸರ್ಜ ಭೇಟಿ ನೀಡುತ್ತಿದ್ದ ನಂದಿ ದೇವಾಲಯವಿದೆ. ಇಲ್ಲಿರುವ ನಂದಿ ವಿಗ್ರಹವು ವಿಶಾಲವಾಗಿ ಬೆಳೆದು ನಿಂತ ಬಗ್ಗೆಯೂ ಹಲವು ದೃಷ್ಟಾಂತಗಳಿವೆ. ಸಂಗೊಳ್ಳಿ ದೇಶಪ್ರೇಮಿ ವೀರಯೋಧ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ. ಇದು ಕಿತ್ತೂರಿನಿಂದ ಹದಿನೈದು ಕಿ.ಮೀ ದೂರದಲ್ಲಿದೆ. ಬೈಲಹೊಂಗಲ ರಾಣಿ ಸಮಾಧಿ ಕಿತ್ತೂರಿನಿಂದ ಬೈಲಹೊಂಗಲ 33 ಕಿ.ಮೀ ಅಂತರದಲ್ಲಿದೆ. ರಾಣಿ ಚೆನ್ನಮ್ಮಳ ಸಮಾಧಿ ಇರುವುದು ಇಲ್ಲಿಯೇ. ರಾಣಿ ಸೆರಮನೆಯಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದಿದ್ದು ಇತಿಹಾಸ. ಕಪ್ಪು ಶಿಲೆಯಿಂದ ರಾಣಿಯ ಮೂರ್ತಿ ನಿರ್ಮಿಸಿದ್ದು, ಅದರ ಪಕ್ಕದಲ್ಲಿ ಉದ್ಯಾನವಿದೆ. ಪ್ರತಿ ವರ್ಷ ಕಿತ್ತೂರು ಉತ್ಸವದಲ್ಲಿ ರಾಣಿ ಚೆನ್ನಮ್ಮಾಜಿ ಸಮಾಧಿ ಸ್ಥಳದಿಂದಲೇ ಕಿತ್ತೂರಿಗೆ ಜ್ಯೋತಿಯನ್ನು ತರಲಾಗುತ್ತದೆ. ನಂದಗಡ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ. ಕಾಕತಿ ಬೆಳಗಾವಿಗೆ 10 ಕಿ.ಮೀ ಹತ್ತಿರವಿರುವ ಕಾಕತಿ ರಾಣಿ ಚೆನ್ನಮ್ಮಾಜಿಯ ಜನ್ಮಸ್ಥಳ ಹಾಗೂ ತವರುಮನೆ. ಇಲ್ಲಿ ಕೋಟೆ ವಾಡೆಗಳಿವೆ. ಕಾಕತಿ ಊರಿನ ಪೂರ್ವ ದಿಕ್ಕಿನ ಗುಡ್ಡದ ಮೇಲೆ ಕೋಟೆಯನ್ನು ನಿರ್ಮಿಸಿದ್ದು, ಎತ್ತರದ ಪ್ರದೇಶದಿಂದ ವಿಹಂಗಮ ದರ್ಶನ. ಆಯಕಟ್ಟಿನಲ್ಲಿ ಎತ್ತರದ ಮೂರು ಬುರುಜುಗಳಿದ್ದು, ಇವುಗಳಿಗೆ ಒಳಗಿನಿಂದ ಮೇಲೆ ಹತ್ತಲು ಮೆಟ್ಟಿಲುಗಳಿವೆ. ಇಲ್ಲಿ ಸುರಂಗಮಾರ್ಗ ಕೂಡ ಇದೆ. ಕೋಟೆಯ ಬಹುತೇಕ ಭಾಗಗಳು ಹಾಳಾಗಿವೆ. ಕಿತ್ತೂರು ಉತ್ಸವದ ಸಂದರ್ಭದಲ್ಲಿ ಮಾತ್ರವಲ್ಲ, ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಸಿಕೊಟ್ಟು ದೇಶಪ್ರೇಮದ ಕಿಚ್ಚು ಹೊತ್ತಿಸಲು ವರ್ಷದ ಯಾವ ಸಮಯದಲ್ಲಾದರೂ ಇಲ್ಲಿಗೆ ಪ್ರವಾಸ ಬರಬಹುದು. ಹೀಗೆ ಬನ್ನಿ... ಕಿತ್ತೂರು ಧಾರವಾಡದಿಂದ 31 ಕಿ.ಮೀ, ಬೆಳಗಾವಿಯಿಂದ 45 ಕಿ.ಮೀ ದೂರದಲ್ಲಿದೆ. ಯಾವುದೇ ಮಾರ್ಗವಾಗಿ ಬಂದರೂ ಈ ಊರು ರಾಷ್ಟ್ರೀಯ ಹೆದ್ದಾರಿ ನಂ.4ರಲ್ಲಿರುವ ಕಾರಣ ಸಾಕಷ್ಟು ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಹೆಮ್ಮೆಯ ರಾಣಿ ಕಿತ್ತೂರಿನ ಚೆನ್ನಮ್ಮ