ಕ್ಯಾಂಪಸ್ ಸಿರಿ ಗುಲ್ಬರ್ಗ ಅಂದರೇನೇ ಹಾಗೆ. ಅಲ್ಲಿರುವುದು ಎರಡೇ ಕಾಲ. ಬೇಸಿಗೆ ಮತ್ತು ಕಡುಬೇಸಿಗೆ. ಚಳಿಗಾಲದಲ್ಲೂ 35 ಡಿಗ್ರಿ ಸೆಲ್ಶಿಯಸ್ ತಾಪಮಾನ. ಮಧ್ಯಾಹ್ನದ ಹೊತ್ತಲ್ಲಿ ಮನೆಯಿಂದ ಹೊರಬಿದ್ದರೆ ಬೆವರ ಜಳಕ. ಇಂಥ ಊರಿನಲ್ಲೂ ಶರೀರಕ್ಕೆ ತಂಪಿನ ಅನುಭವ ನೀಡಿ, ಮನಕ್ಕೆ ಮುದ ನೀಡುವ ತಾಣವಿದೆ. ಆ ಪ್ರದೇಶದಲ್ಲೊಮ್ಮೆ ವಿಹಾರ ಹೊರಟರೆ ತಂಗಾಳಿ ನಿಮ್ಮನ್ನು ಸೋಕಿ ಬಿಸಿಲೂರ ಅಸ್ತಿತ್ವವನ್ನೇ ಮರೆಸಿಬಿಡುತ್ತದೆ. ಆ ಜಾಗ ಎಲ್ಲಿದೆ ಎಂದಿರಾ? ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗಾ ಕ್ಯಾಂಪಸ್ ನಿಜವಾಗಲೂ ಗುಲ್ಬರ್ಗದ ಕಾಶ್ಮೀರ! ಈ ಬಾರಿಯಂತೂ ಸಾಕೆನ್ನಿಸುವಷ್ಟು ಮಳೆಯಾದ್ದರಿಂದ ಕ್ಯಾಂಪಸ್‌ಗೆ ಹಸಿರ ಸೀರೆಯ ಹೊದಿಕೆ. ಮೊದಲೇ ವಿವಿಯ ಸುತ್ತ ದಟ್ಟವಾಗಿ ಬೆಳೆದಿರುವ ಮರಗಳು ಕ್ಯಾಂಪಸ್ ಅನ್ನು ತಣ್ಣಗಿಟ್ಟಿವೆ. ಇನ್ನು ಮಳೆಗಾಲದ ಹಸಿರು ಕೇಳಬೇಕೆ? ವಿ.ವಿ. ಕಾರ್ಯಸೌಧದ ಮುಂಭಾಗದ ಉದ್ಯಾನದಲ್ಲಿ ಅರಳಿ ನಿಂತಿರುವ ಹೂವುಗಳು, ಜೀವಂತವಾಗಿವೆ ಎನ್ನುವ ಅನುಭವ ನೀಡುವ ಜಿಂಕೆ, ಆನೆ, ಡೈನೋಸಾರ್ ಮೂರ್ತಿಗಳು ಹಸಿರು ಸಿರಿಯ ಮೆರುಗು ಹೆಚ್ಚಿಸಿವೆ. ಹೈದರಾಬಾದ್ ಕರ್ನಾಟಕ ಪ್ರದೇಶದ ಜನ ಒಂದು ದಿನದ ಪ್ರವಾಸ ಕೈಗೊಳ್ಳಲೂ ಅಡ್ಡಿಯಿಲ್ಲ. ಚಿತ್ರ-ಬರಹ: ಬಿ.ಸೋಮಶೇಖರ್ ಸುರಪುರ (ಪತ್ರಿಕೋದ್ಯಮ ವಿಭಾಗ, ಜ್ಞಾನಗಂಗಾ ಕ್ಯಾಂಪಸ್)