ನಳ ಸರೋವರ ನಳ ಸರೋವರ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿದೆ. ಥರಾವರಿ ರಂಗಿನ ಹಕ್ಕಿಗಳು ಅತ್ತಿಂದಿತ್ತ ಹಾರುವ, ನೀರಲ್ಲಿ ಮುಳುಗುತ್ತಾ, ತಂಟೆ ತಕರಾರು ಮಾಡುವ, ಪುರ್ರನೆ ಹಾರಿಬಂದು ಸಂಗಾತಿಗೆ ಕಿಸ್ ಕೊಡುವ ಕಣ್ತುಂಬುವ ದೃಶ್ಯ. ಆ ತಾಣವೂ ಅಂದವಾಗಿದ್ದರೆ ಅದು ಇನ್ನೂ ಚಂದ. ಇಂಥ ಹಕ್ಕಿಗಳ ತಾಣವೇ ಗುಜರಾತಿನ ನಳ ಸರೋವರ... ನಳ ಸರೋವರ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿದೆ. 115 ಚದರ ಕಿ.ಮೀ. ವಿಸ್ತಾರವಾಗಿರುವ ಈ ಬೃಹತ್ ಕೆರೆ, ಹಲವಾರು ಪಕ್ಷಿಗಳ ನೆಲೆಬೀಡು. ಈ ಕೆರೆಯಲ್ಲಿ ಸುಮಾರು ಮುನ್ನೂರು ಪುಟ್ಟ ಪುಟ್ಟ ದ್ವೀಪಗಳಿದ್ದು, ಅಷ್ಟು ಆಳವಿಲ್ಲದ ನೀರಿನಲ್ಲಿವೆ. ಸ್ವಲ್ಪ ದೊಡ್ಡದಾದ ಕೆಲವು ದ್ವೀಪಗಳಲ್ಲಿ ಜನರು ವಾಸಿಸುತ್ತಾರೆ ಕೂಡ. ಮಳೆಗಾಲದಲ್ಲಿ ಸನಿಹದ ಕೆಲವು ನದಿಗಳಾದ ಭೋಗಾವೋ, ಲಿಂಬ್ಡೀ, ವಧ್ವನ್ ಮೊದಲಾದವುಗಳಿಂದ ನೀರು ಈ ಕೆರೆಗೆ ಹರಿದು, ತುಂಬಿಕೊಂಡು ಇನ್ನೂ ದೊಡ್ಡದಾಗಿ ಕಾಣುತ್ತದೆ. ನವೆಂಬರ್‌ನಿಂದ ಮಾರ್ಚ್‌ನೊಳಗೆ ಇಲ್ಲಿಗೆ ಪಕ್ಷಿಗಳು ವಿವಿಧ ದೇಶಗಳಿಂದ ವಲಸೆ ಬರುವುದರಿಂದ ಈ ಸ್ಥಳಕ್ಕೆ ಭೇಟಿ ಕೊಡಲು ಇದು ಸೂಕ್ತ ಕಾಲ. ನಸುಕಿನಲ್ಲಿಯೇ ಇಲ್ಲಿಗೆ ತಲುಪಿದರೆ ವಿವಿಧ ಪಕ್ಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. ಕೆರೆಯ ಹೊರವಲಯದಲ್ಲಿರುವ ಕಚೇರಿಯಲ್ಲಿ ಪ್ರವೇಶ ದರ ಕಟ್ಟಿ ಚೀಟಿ ಪಡೆದು, ವಿಶೇಷ ಗಾಡಿಯಲ್ಲಿ ಕಿ.ಮೀ. ಕ್ರಮಿಸಿದರೆ ನಳ ಸರೋವರ ಸಿಗುತ್ತದೆ. ನಡೆದು ಹೋದರೂ ದಾರಿಯುದ್ಧಕ್ಕೆ ಪಕ್ಷಿಗಳ ಕಲರವ ಸೆಳೆಯುತ್ತದೆ. ನಳ ಸರೋವರಕ್ಕೆ ಅನೇಕ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಹಾಗೂ ಬೆಚ್ಚಗಿನ ಹವಾಮಾನಕ್ಕಾಗಿ ಬರುತ್ತವೆ. ಚಳಿಗಾಲ ಮುಗಿದ ಕೂಡಲೇ ತಮ್ಮ ದೇಶಗಳಿಗೆ ವಾಪಸಾಗುತ್ತವೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಆಸ್ಟ್ರೇಲಿಯಾದ ಸೀಗಲ್‌ಗಳು ಹಾಗೂ ಸೈಬೀರಿಯಾದ ಫ್ಲೆಮಿಂಗೋಗಳು ಅಥವಾ ರಾಜಹಂಸಗಳು. ಸೀಗಲ್‌ಗಳು ಬಹು ಸಂಖ್ಯೆಯಲ್ಲಿದ್ದು, ಕೆರೆಯ ಹೊರವಲಯದಲ್ಲೇ ಕಂಡುಬಂದರೂ ಫ್ಲೆಮಿಂಗೋಗಳನ್ನು ನೋಡಬೇಕೆಂದರೆ ಕೆರೆಯೊಳಗೆ ಸಾಕಷ್ಟು ದೂರ, ಕೆಲವು ದ್ವೀಪಗಳತ್ತ ಹೋಗಬೇಕು. ಇದಕ್ಕಾಗಿ ಇಲ್ಲಿ ದೋಣಿಗಳ ವ್ಯವಸ್ಥೆ ಇದೆ. ದೋಣಿಯವನು ಸುಮಾರು 2-3 ಗಂಟೆ ವಿಹಾರ ಮಾಡಿಸಿ ಅನೇಕ ಪಕ್ಷಿಗಳನ್ನು ತೋರಿಸಿ, ಅವುಗಳ ಹೆಸರು ಮತ್ತಿತರ ಮಾಹಿತಿ ನೀಡುತ್ತಾನೆ. ಫ್ಲೆಮಿಂಗೋಗಳ ಒಂದು ದ್ವೀಪದತ್ತ ಹೋದಾಗ, ಆಳವಿಲ್ಲದ ಕೆರೆಯಲ್ಲಿ ಜಲಸಸ್ಯಗಳ ನಡುವೆ ನಡೆದು ಹೋಗಲು ಸಹಾಯ ಮಾಡಿ ಸಾಧ್ಯವಾದಷ್ಟು ಹತ್ತಿರದಿಂದ ಅವುಗಳನ್ನು ತೋರಿಸುತ್ತಾನೆ. ಬಹಳ ಶೀತಲವಾದ ನೀರಿನಲ್ಲಿ ಕೆಸರುಮಯ ಜಲಸಸ್ಯಗಳ ನಡುವೆ ಕಾಲಿಟ್ಟು ನಡೆದು ಹೋಗುವುದು ಮರೆಯಲಾಗದ ಅನುಭವ! ಬಾಗಿದ ಕೊಕ್ಕುಗಳ, ನಸುಗೆಂಪು ಬಣ್ಣದ, ಉದ್ದ ಕಾಲುಗಳ ಈ ಸುಂದರ ರಾಜಹಂಸ ಪಕ್ಷಿಗಳು ಸಹಸ್ರ ಸಂಖ್ಯೆಯಲ್ಲಿ ಸಾಲಾಗಿ ನಿಂತಿರುವ ಸೌಂದರ್ಯ ವರ್ಣನಾತೀತ. ಸ್ವಲ್ಪ ದೂರದಿಂದಲೇ ಇವುಗಳ ಫೋಟೋ ತೆರೆಯಬೇಕು. ಹತ್ತಿರ ಹೋಗುತ್ತಿದ್ದಂತೆ ಇವು ಹಾರಿಹೋಗುತ್ತವೆ. ಇವು ಒಟ್ಟಿಗೆ ಹಾರುವ ನೋಟವಂತೂ ಬಹು ಸುಂದರ. ಆಸ್ಟ್ರೇಲಿಯಾದ ಸೀಗಲ್ ಇಲ್ಲಿ ಬಹು ಸಂಖ್ಯೆಯಲ್ಲಿ ಕಂಡುಬರುತ್ತವೆ. ಬಣ್ಣದ ಬಾಗಿ ನಿಂತ ಮುದ್ದಾದ ಪಕ್ಷಿಗಳಿವು. ಇವುಗಳಿಗೆ ಕಾಳು ಎರಚಿದರೆ, ಅದನ್ನು ತಿನ್ನಲು ದೋಣಿಯನ್ನು ಬಹು ಸಂಖ್ಯೆಯಲ್ಲಿ ಸುತ್ತುವರಿಯುತ್ತವೆ. ನಳ ಸರೋವರದಲ್ಲಿ ದೋಣಿ ವಿಹಾರ ಮಾಡುತ್ತಿದ್ದರೆ ಎಲ್ಲೆಲ್ಲೂ ನೀರು, ಜಲಸಸ್ಯಗಳು, ಪುಟ್ಟ ಪುಟ್ಟ ದ್ವೀಪಗಳು, ವಿವಿಧ ಪಕ್ಷಿಗಳು, ಅವುಗಳ ಚಿಲಿಪಿಲಿ, ಬೆಳಗಿನ ಸೂರ್ಯನ ಕಿರಣಗಳು, ಇವೆಲ್ಲದರೊಂದಿಗೆ ಒಂದು ಬಗೆಯ ಏಕಾಂತ ನಮ್ಮನ್ನು ಪ್ರಕೃತಿಗೆ ಹತ್ತಿರವಾಗಿಸುತ್ತದೆ. ದೋಣಿಯವನು ಜನವಸತಿಯಿರುವ ಒಂದು ದ್ವೀಪಕ್ಕೂ ಕರೆದೊಯ್ಯುತ್ತಾನೆ. ಇಲ್ಲಿ ಗ್ರಾಮಸ್ಥರು ಮಾಡಿಕೊಡುವ ಚಹಾ ಮತ್ತು ರೊಟ್ಟಿ ಸೇವಿಸಬಹುದು. ಇಲ್ಲಿ ಒಂದು ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಇದನ್ನು ಹತ್ತಿ ಪಕ್ಷಿ ವೀಕ್ಷಣೆ ಮಾಡಬಹುದು. ಸೀಗಲ್ ಮತ್ತು ಫ್ಲೆಮಿಂಗೋಗಳಲ್ಲದೆ, ಕಪ್ಪು ರೆಕ್ಕೆಯ ಸ್ಟಿಲ್ಡ್, ಬಿಳಿ ಮತ್ತು ಹಳದಿ ವ್ಯಾಗ್‌ಟೇಲ್, ತೆರೆದ ಕೊಕ್ಕಿನ ಸ್ಟಾರ್ಕ್, ಬೂದು ಹೆರಾನ್, ಕೊಳದ ಹೆರಾನ್, ನೇರಳೆ ಮೂರ್‌ಹೆನ್, ಇಗ್ರೆಟ್‌ಗಳು, ಸ್ವಾಲೋಗಳು, ಪೆಲಿಕನ್‌ಗಳು, ಐಬಿಸ್‌ಗಳು, ಸಾಮಾನ್ಯ ಕೂಟ್, ಕಾರ್ಮೋರೆಂಟ್ ಅಥವಾ ನೀರು ಕಾಗೆ, ಮಿಂಚುಳ್ಳಿ, ನೀಲಿಜೇ ಮುಂತಾದ ಅನೇಕ ಪಕ್ಷಿಗಳನ್ನು ಇಲ್ಲಿ ವೀಕ್ಷಿಸಬಹುದು. ಹೀಗೆ ಬನ್ನಿ ಬೆಂಗಳೂರಿನಿಂದ ಅಹಮದಾಬಾದ್‌ಗೆ ರೈಲು, ವಿಮಾನ ಸೌಕರ್ಯಗಳಿವೆ. ಅಹಮದಾಬಾದ್‌ನಿಂದ ನಳ ಸರೋವರಕ್ಕೆ ಖಾಸಗಿ ವಾಹನದಲ್ಲಿ ಹೋಗಬೇಕಾಗುತ್ತದೆ. ದೂ: 98804-51062. - ಚಿತ್ರ-ಲೇಖನ: ಡಾ. ಬಿ.ಆರ್. ಸುಹಾಸ್