ಕೊರೋಲಾ ಕಲರವ ಆಟೋ ಎಕ್ಸ್‌ಪೋದಲ್ಲಿ ಅನಾವರಣವಾಗಿದ್ದ ನೂತನ ಕೊರೋಲಾ ಆಲ್ಟೀಸ್ ಕಾರನ್ನು ಟೊಯೋಟಾ ಮಾರುಕಟ್ಟೆಗೆ ಬಿಟ್ಟಿದೆ. ಇನೋವಾ ಹಾಗೂ ಫಾರ್ಚ್ಯುನರ್ ಮೇಲೆಯೇ ಟೊಯೋಟಾ ಮಾರುಕಟ್ಟೆ ಭಾರತವನ್ನು ಆಳುತ್ತಿದೆ. ಆದರೆ ಹೊಸ ಕಾರುಗಳ ಬಗ್ಗೆ ನಿರೀಕ್ಷೆ ಹೊಂದಿದ್ದರೂ ಅದು ಟೊಯೋಟಾದಿಂದ ಈಡೇರಿರಲಿಲ್ಲ. ಈಟಿಯೋಸ್ ಅನ್ನು ಹೊಸದಾಗಿ ಬಿಟ್ಟಿದ್ದರೂ ಅದು ಬಾಡಿಗೆ ಕಾರಿನ ರೂಪ ಪಡೆದುಕೊಂಡಿತು. ಇದೇ ಕಾರಣದಿಂದ ಲಕ್ಷುರಿ ಕಾರುಗಳ ವಿಭಾಗ ಅಥವಾ ಸೆಡಾನ್‌ನಲ್ಲಿ ತನ್ನ ಬ್ರಾಂಡ್‌ನ ಛಾಪು ಮೂಡಿಸಲು ಟೊಯೋಟಾ ಸಂಸ್ಥೆಯು ನೂತನ ಕೊರೋಲಾ ಆಲ್ಟೀಸ್ ಮೂಲಕ ಮಾರುಕಟ್ಟೆಗೆ ಬಂದಿದೆ. ಅಂದಹಾಗೆ ಇದು 11 ವರ್ಷಗಳ ಹಿಂದಿನ ಸೆಡಾನ್ ಕಾರು. ಭಾರತದಲ್ಲಿ ಆ ಮಟ್ಟಿನ ಯಶಸ್ಸು ಕಾಣಲಿಲ್ಲ. ಆಗ ಹೋಂಡಾ ಸಿಟಿಗೆ ಸ್ಪರ್ಧಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಆದರೆ ಸ್ಪರ್ಧೆ ನೀಡಲು ವಿಫಲವಾಗಿ ಸುಮಾರು ದಶಕಗಳ ಕಾಲ ಮಾರುಕಟ್ಟೆಯಲ್ಲಿ ಸದ್ದು ಮಾಡದೇ ಸುಮ್ಮನಿತ್ತು. ಆಗಾಗ ಸಣ್ಣಪುಟ್ಟ ಬದಲಾವಣೆ ಮಾಡಿ ಮಾರುಕಟ್ಟೆಗೆ ಬಿಟ್ಟರೂ ಸರ್ಕಾರಿ ಕಾರುಗಳಿಗೆ ಒಂದು ಹಂತದಲ್ಲಿ ಸೀಮಿತವಾಗಿತ್ತು. ಆದರೆ ಈಗ ಕೆಲ ಹೊಸ ಅವತಾರದೊಂದಿಗೆ ಮಾರುಕಟ್ಟೆಗೆ ಬಂದಿರುವ ಕೊರೋಲಾ ಯಶಗಳಿಸುವ ಸಾಧ್ಯತೆಯಿದೆ ಎನ್ನುತ್ತಿದೆ ಮಾರುಕಟ್ಟೆ ಲೋಕ. ಎಕ್ಸ್ ಶೋರೂಮ್ ಬೆಲೆಯು ರು. 11.99 ಲಕ್ಷದಿಂದ ರು. 16 ಲಕ್ಷದ ವರೆ ೂ ಇದ್ದೂ ನೂತನ ಹೋಂಡಾ ಸಿಟಿಗೆ ಪ್ರತಿರೋಧ ತೋರಲಿದೆ. 1.8 ಲೀ. ವಿವಿಟಿಐ ಪೆಟ್ರೋಲ್ ಹಾಗೂ 1.4 ಲೀ ಡಿ4-ಡಿ ಡೀಸೆಲ್ ಎಂಜಿನ್ ಅನ್ನು ಇದಕ್ಕೆ ಬಳಸಲಾಗಿದ್ದು, ಪೆಟ್ರೋಲ್ ಮಾದರಿಯಲ್ಲಿ 7 ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಲಭ್ಯವಿದೆ. ಮೊದಲಿನ ಕೊರೋಲಾ ಆಲ್ಟೀಸ್‌ಗಿಂತ 100 ಮಿ.ಮೀ. ಉದ್ದವಿದ್ದು, ಫ್ರಂಟ್ ಗ್ರಿಲ್ ಹಾಗೂ ಒಳ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ.