ಕೋಟಿಲಿಂಗ ಜಗದೀಶ, ಸರ್ವೇಶ, ಮಲ್ಲೇಶ, ಗೌರೀಶ- ಹೀಗೆ ನೂರಾರು ಹೆಸರುಗಳ ಶಿವನನ್ನು ಭಕ್ತರು ಎಲ್ಲೆಲ್ಲಿಯೂ ಕಂಡಿದ್ದಾರೆ. ಕಣ್ಮುಚ್ಚಿ ಧ್ಯಾನಿಸಿದರೆ ಸರ್ವೇಶ ಸಕಲ ಜೀವ ಜಗತ್ತಿನಲ್ಲಿ, ನಿರ್ಜೀವಿಗಳಲ್ಲಿ, ಹಸಿರ ಸಿರಿಯಲ್ಲಿ ಹೀಗೆ ಎಲ್ಲೆಡೆಯೂ ನೆಲೆಸಿದ್ದಾನೆ. ಹಲವು ದಾಸವರೇಣ್ಯರು, ಶಿವಶರಣರು ಶಿವನನ್ನು ಪದಗಳಲ್ಲಿ ಕೊಂಡಾಡಿದ್ದಾರೆ. ಒಂದಕ್ಕಿಂತ ಭಿನ್ನ, ವಿಶೇಷವೆಂಬಂತೆ ಶಿವನನ್ನು ಪೂಜಿಸಲು ದೇವಳಗಳನ್ನು ಸ್ಥಾಪಿಸಿ ಭಕ್ತಿ ಮೆರೆದಿದ್ದಾರೆ. ಇಂಥ ಪುಣ್ಯಕ್ಷೇತ್ರಕ್ಕೆ ಪಾದವಿರಸದಿದ್ದರೆ ಜೀವನ ಪಾವನವಾಗದು ಎಂಬಂಥ ಶ್ರದ್ಧಾ-ಭಕ್ತಿಗಳನ್ನು ಕಟ್ಟಿಕೊಟ್ಟಿರುವ ಕ್ಷೇತ್ರಗಳು ದೇಶ-ವಿದೇಶದಲ್ಲಿ ನೂರಾರಿವೆ. ಕರ್ನಾಟಕದಲ್ಲೂ ಇಂಥ ವೈಶಿಷ್ಟ್ಯ ತುಂಬಿದ ಕ್ಷೇತ್ರಗಳಲ್ಲಿ ಕೋಲಾರ ಜಿಲ್ಲೆಯ ಕೋಟಿಲಿಂಗ ಕ್ಷೇತ್ರ ಹೆಚ್ಚು ಚಾಲ್ತಿಯಲ್ಲಿದೆ. ರಾಜ್ಯದ ಪ್ರವಾಸೋದ್ಯಮಕ್ಕೆ ಈ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಕೋಲಾರ ಜಿಲ್ಲೆಯ ಚಿನ್ನದಗಣಿ ಸಮೀಪ, ಕಮ್ಮಸಂದ್ರ ಗ್ರಾಮದ ಬಳಿ ವಿಹಂಗಮವಾಗಿರುವ 15 ಎಕರೆ ವಿಸ್ತಾರದ ಈ ಕ್ಷೇತ್ರದಲ್ಲಿ ಕೋಟಿಗಳ ಸಂಖ್ಯೆಯಲ್ಲಿ ಶಿವನ ಸ್ವರೂಪವೆನ್ನಲಾದ ಶಿವಲಿಂಗ ವ್ಯವಸ್ಥಿತವಾಗಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ವಿಶ್ವದಲ್ಲೇ ಅತಿ ಎತ್ತರದ ಅಂದರೆ 33 ಮೀಟರ್ ಇರುವ ಶಿವಲಿಂಗ (108 ಅಡಿ) ಹಾಗೂ ನಂದೀಶ್ವರ (35 ಅಡಿ) ಇರುವ ಖ್ಯಾತಿ ಇಲ್ಲಿನದು. ಮಹಾಶಿವರಾತ್ರಿಯಂದು 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ವಿಶೇಷ ಪೌರಾಣಿಕ ಹಿನ್ನೆಲೆಯೂ ಈ ಕ್ಷೇತ್ರ ಹೊಂದಿದೆ. ನಿತ್ಯ ಬೆಳಗ್ಗೆ 6 ಮತ್ತು ಸಂಜೆ 6 ಗಂಟೆಗೆ ಹತ್ತಾರು ಅರ್ಚಕರು ಶಿವಲಿಂಗಗಳನ್ನು ಪೂಜಿಸುತ್ತಾರೆ. ಪೂಜಾ ವೇಳೆ ನಗಾರಿ, ಭಜನೆಗಳು ಭಕ್ತರ ಮನಸ್ಸನ್ನು ಶಿವನಲ್ಲೇ ಲೀನವಾಗಿಸುವಂತಿರುತ್ತವೆ. ಭಕ್ತರಿಗೆ ಇಲ್ಲಿ ತಂಗಲು ಉಚಿತ ವಸತಿ ವ್ಯವಸ್ಥೆಯೂ ಇದೆ. ಹತ್ತಾರು ಸಂಖ್ಯೆಯಲ್ಲಿನ ವಿವಿಧ ದೇವರ ದೇಗುಲಗಳಿವೆ. ಭಕ್ತರು ಇಷ್ಟಾರ್ಥ ಸಿದ್ಧಿಗೆ ಮರಕ್ಕೆ ಹಳದಿ ದಾರ ಕಟ್ಟಿ ಪ್ರಾರ್ಥಿಸುವುದು ವಿಶೇಷ. ಸ್ವಾಮಿ ಸಾಂಬಶಿವಮೂರ್ತಿ ಸ್ಥಾಪಿಸಿರುವ ಈ ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸಲಾಗುತ್ತದೆ. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ವತಿಯಿಂದ ಶಿವನ ಮಹಿಮೆಯನ್ನು ಪ್ರವಾಸಿಗರು, ಭಕ್ತರಿಗೆ ಪ್ರಚುರಪಡಿಸಲಾಗುತ್ತಿದೆ. ಭಕ್ತರಿಗಾಗಿ ಧ್ಯಾನ ಮಂದಿರವೂ ಇಲ್ಲಿದೆ. ಹೀಗೆ ಬನ್ನಿ... ಬೆಂಗಳೂರಿನಿಂದ ಹೊಸಕೋಟೆ- ಕೋಲಾರ ಮಾರ್ಗವಾಗಿ ಬಂದರೆ ಇಲ್ಲಿ ಸಿಗುವ ರೇಲ್ವೆ ಗೇಟ್ ಬಳಿ ಟರ್ನ್ ತೆಗೆದುಕೊಳ್ಳಿ. ಬಂಗಾರಪೇಟೆ 5 ಕಿ.ಮೀ. ಕ್ರಮಿಸಿದ ಬಳಿಕ ಎಡಕ್ಕೆ ತಿರುಗಿದರೆ ಕೋಟಿಲಿಂಗೇಶ್ವರ ದೇಗುಲ ತಲುಪಬಹುದು. - ಶಿವಮೊಗ್ಗ ಗಿರಿಧರ್ @.