ಟಾಟಾ...? ಅಗ್ಗದ ಕಾರು ನ್ಯಾನೋವಿನ ಡೀಸೆಲ್ ಮಾದರಿ ಬಿಡುಗಡೆಗೆ ಮುಹೂರ್ತ ಕೂಡಿಬರುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದಿಲ್ಲೊಂದು ವಿಘ್ನಗಳು ಬರುತ್ತಲೇ ಇವೆ. ಫೆಬ್ರವರಿಯಲ್ಲಿ ನಡೆಯುವ ಅಟೋ ಎಕ್ಸ್‌ಪೊದಲ್ಲಿ ನ್ಯಾನೋ ಡೀಸೆಲ್ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈಗ ಪ್ರದರ್ಶನವೂ ಆಗುತ್ತಿಲ್ಲ. ಡೀಸೆಲ್ ದರದಲ್ಲಿನ ಏರಿಕೆ ಹಾಗೂ ಎಂಜಿನ್‌ನಲ್ಲಿನ ಗೊಂದಲವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪ್ರಾರಂಭದಲ್ಲಿ 2-ಸಿಲಿಂಡರ್ ಎಂಜಿನ್ ರೂಪಿಸಲಾಗಿತ್ತು, ಆದರೆ ಈಗ 3-ಸಿಲಿಂಡರ್ ಎಂಜಿನ್ ತಯಾರಿಸಲಾಗಿದೆ. ಈಗ ಇವೆರಡು ಎಂಜಿನ್‌ಗಳಲ್ಲಿ ಯಾವುದನ್ನು ಉಪಯೋಗಿಸಬೇಕು ಎಂಬ ಗೊಂದಲ ಒಂದೆಡೆಯಾದರೆ, ಉತ್ಪಾದನಾ ವೆಚ್ಚ ಏರುತ್ತಿರುವುದರಿಂದ ಅಗ್ಗದ ಕಾರು ಎಂಬ ಹೆಗ್ಗಳಿಕೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಮತ್ತೊಂದೆಡೆಯಾಗಿದೆ. ಎಂಜಿನ್ ತಯಾರಿಕೆ ವೆಚ್ಚದ ಏರಿಕೆಯ ಜತೆಗೆ ಬಿಎಸ್-4 ಶ್ರೇಣಿಯಲ್ಲಿ ವಾಹನ ರೂಪಿಸುವುದೂ ದೊಡ್ಡ ಸವಾಲಾಗಿದೆ. 2010ರಲ್ಲಿಯೇ ಪ್ರಾಥಮಿಕ ಸಂಶೋಧನೆ ಅಂತ್ಯವಾಗಿ ಉತ್ಪಾದನೆ ಹಂತಕ್ಕೆ ಬಂದಿತ್ತು. ಆ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ದರದ ನಡುವಿನ ಅಂತರ ಕಡಿಮೆಯಾಯಿತು. ಇದರಿಂದ ಕಂಪನಿಯ ಲೆಕ್ಕಾಚಾರ ಅಲ್ಪ ಮಟ್ಟಿಗೆ ಏರುಪೇರಾಯಿತು. ಉತ್ಪಾದನೆ ವೆಚ್ಚವನ್ನು ಇಳಿಸಿ ಅಗ್ಗದ ಕಾರು ಎಂಬ ಹೆಗ್ಗಳಿಕೆ ಉಳಿಸಿಕೊಳ್ಳಲು ಈಗ ಟಾಟಾ ಸಂಸ್ಥೆ ಹರಸಾಹಸ ಮಾಡುತ್ತಿದೆ. ಇದೇ ಕಾರಣದಿಂದ ಪದೆಪದೆ ಬಿಡುಗಡೆಯ ಮುಹೂರ್ತದ ದಿನ ಬದಲಾಗುತ್ತಲೇ ಇದೆ. ಆದಾಗ್ಯೂ ವರ್ಷಾಂತ್ಯದೊಳಗೆ ಮಾರುಕಟ್ಟೆಗೆ ಬಿಡುವ ಶಪಥವನ್ನು ಸಂಸ್ಥೆ ಹಾಕಿಕೊಂಡಿದೆ ಎನ್ನಲಾಗಿದೆ.