ಕೂಡಲೇ ಬನ್ನಿ ನಿಮಗೆ ಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳುವ ಆಸೆ ಇದೆಯೇ? ಹಾಗಿದ್ದರೆ ಕೂಡಲ ಸಂಗಮದ ಶರಣ ಲೋಕಕ್ಕೆ ಹೋಗಿಬನ್ನಿ. ನಿಮಗೆ ಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳುವ ಆಸೆ ಇದೆಯೇ? ಹಾಗಿದ್ದರೆ ಕೂಡಲ ಸಂಗಮದ ಶರಣ ಲೋಕಕ್ಕೆ ಹೋಗಿಬನ್ನಿ. ನೆನಪಿರಲಿ, ಸಮಯಾವಕಾಶ ಇಟ್ಟುಕೊಳ್ಳದೆ ಗಡಿಬಿಡಿಯಲ್ಲಿ ಹೋದರೆ ಏನೂ ಪ್ರಯೋಜನ ಆಗದು! ಧರ್ಮಕರ್ತ ಬಸವಣ್ಣನ ವರವಿದ್ಯಾಭೂಮಿ, ತಪೋಸ್ಥಾನ, ಐಕ್ಯ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಬಸವ ಧರ್ಮೀಯರ ಕ್ಷೇತ್ರವಾಗಿ, ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಇಂತಿಪ್ಪ ತಾಣದಲ್ಲಿರುವುದು ಶರಣ ಲೋಕ ಅಥವಾ ಶರಣ ಮಂಟಪ. ಈ ಸಮುಚ್ಛಯ ಗಮನ ಸೆಳೆಯುವುದು ಚಾರಿತ್ರಿಕ ಹಾಗೂ ಐತಿಹಾಸಿಕ ಹಿನ್ನಲೆಯಿಂದ. ಇಲ್ಲಿ ವಿಶ್ವಮಾನವ ಬಸವೇಶ್ವರ ಸೇರಿದಂತೆ ಆತನ ಸಮಕಾಲೀನ ಪ್ರಮುಖ ಶಿವ ಶರಣ-ಶರಣೆಯರ ಪ್ರತಿಮೆಗಳಿವೆ. ಬಸವಧರ್ಮ ಪೀಠದ ಮೂಲಕ ಅಸ್ತಿತ್ವಕ್ಕೆ ಬಂದಿರುವ ಈ ತಾಣ ಶರಣರ ಕಾಲಕ್ಕೆ ಹೋಗಿ ಬಂದ ಅನುಭವ ನೀಡುತ್ತದೆ. ಆ ಮೂಲಕ ನಮ್ಮ ನಾಡಿನ ಪ್ರಮುಖ ಶರಣರು, ಅವರ ಕಾಯಕ ಪ್ರಜ್ಞೆ, ಅವರ ತತ್ವಗಳನ್ನು ಪ್ರಚಾರ ಮಾಡುವ ಮೂಲಕ ಇಂದಿನವರಿಗೆ ಶರಣರ ಬಗ್ಗೆ ತಿಳಿಸಿ, ಅವರ ವಿಚಾರಧಾರೆಗಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡುವುದು ಶರಣಲೋಕದ ಉದ್ದೇಶ. ಮಹಾದ್ವಾರಕ್ಕೆ ಮಡಿವಾಳ ಮಾಚಿದೇವನ ಹೆಸರಿಡಲಾಗಿದೆ. ಇನ್ನು ಒಳ ಹೊಕ್ಕರೆ ಶರಣರ ಪ್ರತಿಮೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿ 16 ಮಂಟಪಗಳಿವೆ. ಗಣಲಿಂಗದ ಇಕ್ಕೆಲಗಳಲ್ಲಿ ಈ ಪ್ರತಿಮೆಗಳನ್ನು ಅವರವರ ಕಾಯಕ ಮಾಡುವ ಶೈಲಿಯಲ್ಲಿ ಆಕರ್ಷಕವಾಗಿ ನಿಲ್ಲಿಸಲಾಗಿದೆ. ಹಚ್ಚಹಸಿರಿನ ಪರಿಸರ ಇವುಗಳಿಗೆ ಮತ್ತಷ್ಟು ಜೀವ ತುಂಬಿದೆ. ಶರಣರು, ಕಾಯಕಯೋಗಿಗಳಾದ ಮರಳುಸಿದ್ಧ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾರಯ್ಯ, ಚೌಡಯ್ಯ, ಅರಳಯ್ಯ, ಮಲಯ ಮಹಾದೇಶ್ವರ, ಮಡಿವಾಳ ಮಾಚಿದೇವ ಹೀಗೆ ಶರಣರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರತಿ ಪ್ರತಿಮೆಗಳ ಮುಂದೆ ಅವರವರ ಹೆಸರನ್ನು ನಮೂದಿಸಿದ್ದರಿಂದ ಪ್ರವಾಸಿಗರಿಗೆ ಮಾಹಿತಿ ಕೊರತೆ ಕಾಡುವುದಿಲ್ಲ. ಇಲ್ಲಿಯೇ ಬಸವಧರ್ಮ ಪೀಠ ಸಂಸ್ಥಾಪನೆ ಮಾಡಿದ ಲಿಂಗೈಕ್ಯ ಲಿಂಗಾನಂದ ಮಹಾಸ್ವಾಮಿಗಳ ಸಮಾಧಿ ಗದ್ದುಗೆ ಇದ್ದು, ಇವರ 63 ಅಡಿ ಎತ್ತರದ ಪುತ್ಥಳಿ ನಿರ್ಮಾಣ ಮಾಡುವ ಯೋಜನೆ ಇದೆ. ಈ ಶರಣ ಲೋಕದ ಪ್ರಮುಖ ಆಕರ್ಷಣೆ ಕೇಂದ್ರ 9 ಅಡಿ ಎತ್ತರ ಗಣ ಲಿಂಗ ಅಥಾವ ಇಷ್ಟ ಲಿಂಗ. ಇದಕ್ಕೆ ಪ್ರವಾಸಿಗರು ನಮಸ್ಕರಿಸಿ ಭಕ್ತಿ ಸಮರ್ಪಿಸುತ್ತಾರೆ. ಇದರ ಕೆಳಗಡೆ ಅಂದರೆ ನೆಲ ಮಾಳಿಗೆಯಲ್ಲಿ ಬಸವೇಶ್ವರನ ಧ್ಯಾನ ಮಂಟಪವಿದೆ. ಇಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಇದ್ದು ಇದಕ್ಕೆ ದಿನನಿತ್ಯ ಪೂಜೆ-ಪುನಸ್ಕಾರಗಳು ಸಲ್ಲುತ್ತವೆ. ಅಂದಹಾಗೆ ಇಲ್ಲಿ ಬಸವ ಜಯಂತಿ, ಸಂಕ್ರಾತಿ ದಿನಗಳಂದು ವಿಶೇಷ ಪೂಜೆ, ಪ್ರವಚನ, ಪ್ರಾರ್ಥನೆಗಳು ಜರುಗುತ್ತವೆ. ವಸತಿಗೆ ತೊಂದರೆ ಇಲ್ಲ ಬಸವ ತತ್ವ ಸಿದ್ಧಾಂತಗಳ ಪ್ರಚಾರಕ್ಕಾಗಿ ಮೀಸಲಾಗಿರುವ ಬಸವ ಮಹಾಮನೆ ಇದೆ. ಬಂದವರಿಗೆ ಉಳಿದುಕೊಳ್ಳಲು ಏಳು ಯಾತ್ರಿ ಭವನಗಳಿವೆ. ಈಗಾಗಿ ವಸತಿ, ದಾಸೋಹದ ಸಮಸ್ಯೆ ಇಲ್ಲ. ಪ್ರತಿ ಸಂಕ್ರಾತಿಗೆ ಇಲ್ಲಿ ಐದು ದಿನಗಳ ಕಾಲ ಶರಣ ಮೇಳ ನಡೆಯುತ್ತದೆ. ಇದಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗುತ್ತಾರೆ. ಈ ಶರಣ ಲೋಕ ವೀಕ್ಷಿಸಲು ವಯಸ್ಕರಿಗೆ ಐದು ರುಪಾಯಿ ಟಿಕೇಟ್ ಇದೆ. ಮತ್ತೇನು ನೋಡಬಹುದು? ಸಂಗಮೇಶ್ವರ ದೇವಾಲಯ, ಶ್ರೀ ಬಸವೇಶ್ವರರ ಐಕ್ಯ ಮಂಟಪ, ಚಾಲುಕ್ಯ ಶೈಲಿಯ ವಾಸ್ತುಶಿಲ್ಪವನ್ನು ನೆನಪಿಸುವ ಮಹಾದ್ವಾರ, ಪಿರಮಿಡ್ ಮಾದರಿಯ ದಾಸೋಹ ಭವನ, ಜಪಾನ್ ವಾಸ್ತು ಶೈಲಿಯಲ್ಲಿ ನಿರ್ಮಿಸಿರುವ ಉಪಹಾರ ಗೃಹ, ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಗೋಳಗುಮ್ಮಟದ ಇಮ್ಮಡಿ ವಿಸ್ತಾರ ಹೊಂದಿದ ವೃತ್ತಾಕಾರದ ಸಭಾಗೃಹ, ಬಸವ ಅಂತರಾಷ್ಟ್ರೀಯ ಕೇಂದ್ರ, ಪೂಜಾ ವನ, ರಥದ ಮನೆ ಹಾಗೂ ವೀಕ್ಷಣಾ ಗೋಪುರ. - ಚಿತ್ರ-ಲೇಖನ: ಸ್ವರೂಪಾನಂದ ಎಂ.ಕೊಟ್ಟೂರು