ಕೂಡಲಗಿ ಶಾಲೆ ನೋಡ ಶಾಲೆಯ ಮುಂದೆ ಹಾದು ಹೋಗುವವರನ್ನು ನಿಲ್ಲಿಸಿ 'ಒಳಗೆ ಬಾ' ಎಂದು ಕೈ ಮಾಡಿ ಕರೆಯುವ... ಶಾಲೆಯ ಮುಂದೆ ಹಾದು ಹೋಗುವವರನ್ನು ನಿಲ್ಲಿಸಿ 'ಒಳಗೆ ಬಾ' ಎಂದು ಕೈ ಮಾಡಿ ಕರೆಯುವ ಪರಿಸರ, ಶಾಲೆಯೊಳಗೆ ಬಂದಾಗ ಕೈಮುಗಿ ಎನ್ನುವ ಮುಂಭಾಗದ ಸರಸ್ವತಿ ಪ್ರತಿಮೆ. ಇಲ್ಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಶಿಕ್ಷಕರಿಗೂ ಸಮವಸ್ತ್ರ! ಕಂಪ್ಯೂಟರ್ ಕೊಠಡಿಗೆ ಕಾಲಿಟ್ಟರೆ ಯಾವುದೋ ಕಾರ್ಪೊರೇಟ್ ಕಂಪನಿಗೆ ಕಾಲಿಟ್ಟ ಅನುಭವ. ಇದು ಸರ್ಕಾರಿ ಶಾಲೆಯೊಂದರ ಚಿತ್ರಣ ಎಂದರೆ ನೀವು ಮೂಗು ಮುರಿಯುವುದು ನಿಶ್ಚಿತ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಈಗಲೂ ತಮ್ಮ ಪ್ರಭಾವ ಉಳಿಸಿಕೊಂಡಿರುವುದು ಮಾತ್ರವಲ್ಲ, ಅವು ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯುತ್ತಿವೆ ಎನ್ನುವುದಕ್ಕೆ ಸಾಕ್ಷಿ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೂಡಲಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿಗಳು ಯಾವ ಪ್ರತಿಷ್ಠಿತ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ನಲಿಯುತ್ತಲೇ ಕಲಿ ಎನ್ನುವುದೇ ಇಲ್ಲಿಯ ಮುಖ್ಯ ನೀತಿ. ಸ್ವಚ್ಛ ಪರಿಸರ, ಶಿಕ್ಷಕರ ಶಿಸ್ತು, ಗ್ರಾಮಸ್ಥರ ಸಹಕಾರ, ಇವೆಲ್ಲಕ್ಕಿಂತ ಮಿಗಿಲಾಗಿ ಕಲಿಯಬೇಕು ಎನ್ನುವ ವಿದ್ಯಾರ್ಥಿಗಳ ಹಂಬಲ ಮತ್ತು ಶಿಸ್ತು ಈ ಶಾಲೆಗೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಇಲ್ಲಿನ ವಿದ್ಯಾರ್ಥಿಗಳು ರಾಜ್ಯದಾದ್ಯಂತ ಮಲ್ಲಗಂಬ ಪ್ರದರ್ಶನದ ಮೂಲಕವೂ ಹೆಸರು ತಂದಿದ್ದಾರೆ. 2011-12 ನೇ ಸಾಲಿನಲ್ಲಿ ರಾಜ್ಯಮಟ್ಟದ 'ಉತ್ತಮ ಶಾಲೆ' ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿದೆ. ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪುರಸ್ಕಾರಗಳನ್ನು ಪಡೆದಿದ್ದಾರೆ. 2008 ರಲ್ಲಿ 7ನೇ ತರಗತಿಯ ವಿದ್ಯಾರ್ಥಿ ಅಭಿಷೇಕ ಪಾಟೀಲ ಮತ್ತು ಶರಣಬಸವ ಸಜ್ಜನ ಸಂಗಡಿಗರು ಕೋಲಾಟದಲ್ಲಿ ರಾಜ್ಯದಲ್ಲಿ ದ್ವಿತಿಯ ಸ್ಥಾನ ಪಡೆದಿದ್ದರು. ಶಿಕ್ಷಕರ ಸಂಕಲ್ಪ 'ನಮ್ಮ ದೃಷ್ಟಿಯಲ್ಲಿ ಶಾಲೆ ಎಂದರೆ ಕೇವಲ ಕಲ್ಲು ಮಣ್ಣುಗಳಿಂದ ಕೂಡಿದ ನಿರ್ಜೀವ ಕಟ್ಟಡವಲ್ಲ. ಅದೊಂದು ಸುಂದರವಾದ, ಚೈತನ್ಯಪೂರ್ಣವಾದ ಕನಸು. ನಮ್ಮ ಈ ಕನಸಿಗೆ ಜೀವ ತುಂಬುವುದೇ ನಮ್ಮೆಲ್ಲರ ಆಶಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ನಮಗೆ ಅನ್ನ ಕೊಡುವ ವೃತ್ತಿಯ ಋಣ ತೀರಿಸಿದಂತಾಗುತ್ತದೆ' ಎನ್ನುವುದು ಶಾಲೆಯ ಶಿಕ್ಷಕರ ಸಂಕಲ್ಪ. 'ಶಿಕ್ಷಕರ ಪರಿಶ್ರಮವೇ ಶಾಲೆ ಈ ಮಟ್ಟಕೇರಲು ಸಾಧ್ಯ' ಎಂದು ಶಿಕ್ಷಣ ಪ್ರೇಮಿ, ಅಭಿಷೇಕ ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಶರಣಗೌಡ ಪಾಟೀಲರ ಅಭಿಪ್ರಾಯ. 'ಶಾಲೆಯ ಶಿಕ್ಷಕರ ಬದ್ಧತೆ ಜತೆಗೆ ಗ್ರಾಮಸ್ಥರ ಸಹಕಾರದಿಂದ ಶಾಲೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ' ಎನ್ನುವುದು ಮುಖ್ಯಗುರು ಭೀಮರಾಯ ಬೈಚಬಾಳ ಅವರ ಕೃತಜ್ಞತಾ ನುಡಿ. ಕೂಡಲಗಿ ಸರಕಾರಿ ಶಾಲೆಯ ಮಕ್ಕಳು ಕ್ರೀಡೆ, ಪಾಠ ಎರಡರಲ್ಲೂ ಮುಂದಿದ್ದಾರೆ. ಅವರ ಆಸಕ್ತಿ ಖುಷಿ ಕೊಡುತ್ತದೆ. ನಮ್ಮ ಇಲಾಖೆಯಿಂದ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡುತ್ತೇನೆ. - ಎ.ವಿ. ಕೆಂಪರಂಗಯ್ಯ, ಬಿಇಓ ಸುರಪುರ - ಹಳ್ಳೇರಾವ ಎಸ್ ಕುಲಕರ್ಣಿ