ಸೆಂಟುರೋ ಪಂಟೆರೋ ದೇಶದ ಪ್ರತಿಷ್ಠಿತ ವಾಹನ ಉತ್ಪಾದಕ ಕಂಪನಿಯಾದ ಮಹೀಂದ್ರಾ, ಇದೇ ಮೊದಲ ಬಾರಿಗೆ ಮೋಟಾರ್ ಬೈಕ್‌ನ್ನು ಮಾರುಕಟ್ಟೆಗೆ ತಂದಿದೆ. ಮಹೀಂದ್ರಾ ಸೆಂಟುರೋ ಹಾಗೂ ಪಂಟೆರೋ ಎಂಬ ಎರಡು ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದೆ. 110 ಸಿಸಿ ಶ್ರೇಣಿಯ ಈ ಬೈಕ್‌ಗಳಿಗೆ ರಿಮೋಟ್ ಲಾಕ್ ಸೌಲಭ್ಯವಿದೆ. ಎಲೆಕ್ಟ್ರಿಕ್ ಸ್ಟಾರ್ಟ್, ಡಿಜಿಟಲ್ ಅನಲಾಗ್ ಹಾಗೂ 12.7 ಲೀ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯದ ಸೆಂಟುರೋ ಬೈಕ್ ಪ್ರತಿ ಲೀಟರ್‌ಗೆ 79 ಕಿ.ಮೀ ಇಂಧನ ಕ್ಷಮತೆ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಪಂಟೆರೋ ಬೈಕ್ ಕೂಡ ಇದೇ ತರಹದ ಸ್ಪೆಸಿಫಿಕೇಷನ್ ಹೊಂದಿದ್ದು, ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ ಒಂದು ಲೀಟರ್ ಹೆಚ್ಚಿದೆ. ಜನವರಿ ಅಂತ್ಯದೊಳಗೆ ಮಾರುಕಟ್ಟೆಯಲ್ಲಿ ದೊರೆಯುವ ಇವೆರಡು ಮೋಟಾರ್ ಬೈಕ್ 44 ಸಾವಿರದಿಂದ 49 ಸಾವಿರದೊಳಗೆ ದೊರೆಯಲಿವೆ. ಈಗಾಗಲೇ ಮಹೀಂದ್ರಾದ ಎಸ್‌ಯುವಿ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಮತ್ತೊಂದೆಡೆ ಸ್ಕೂಟಿಗಳನ್ನು ಗ್ರಾಹಕರು ಅಷ್ಟು ಇಷ್ಟಪಡಲಿಲ್ಲ. ಮೋಟಾರ್ ಬೈಕ್‌ಗೆ ಜನ ಹೇಗೆ ಸ್ಪಂದಿಸುತ್ತಾರೆ ಎಂದು ನೋಡಬೇಕು.