ಕೆಳದಿಯ ಕಳೆ ಕೆಳದಿ ಇಂದು ಒಂದು ಸಾಮಾನ್ಯ ಹಳ್ಳಿ. ಮೇಲ್ನೋಟಕ್ಕೆ ಇದು ಹಿಂದೊಮ್ಮೆ ರಾಜಧಾನಿಯಾಗಿತ್ತು ಎಂದು ಯಾರಿಗೂ ಅನಿಸದು. ಇಲ್ಲಿರುವ ಹೊಯ್ಸಳ- ದ್ರಾವಿಡ ಶೈಲಿಯ ರಾಮೇಶ್ವರ ದೇವಾಲಯದಿಂದ ಪ್ರಖ್ಯಾತವಾಗಿದೆ ಕೆಳದಿ. ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಸಂದರ್ಭ, ಇಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತು ಅದರ ಸಹಾಯದಿಂದ ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡನಂತೆ. ಅದೇ ಮುಂದೆ ಕೆಳದಿ ರಾಜಮನೆತನವಾಗಿ, ಕೆಳದಿಯು ರಾಜಧಾನಿಯಾಗಿ ಬೆಳೆಯಿತು. ಊರು ಬಹು ಬೇಗ ಬೆಳೆಯಿತು. ಅರಮನೆ, ಕೋಟೆ, ಕೆರೆಗಳನ್ನು ಇಲ್ಲಿ ಚೌಡಪ್ಪ ನಾಯಕ ಕಟ್ಟಿಸಿದ. ಜೊತೆಗೆ ಸುಂದರವಾದ ರಾಮೇಶ್ವರ ದೇವಾಲಯವನ್ನೂ ಕಟ್ಟಿಸಿದ. ಮುಂದೆ ಇಕ್ಕೇರಿಗೆ, ನಂತರ, ಬಿದನೂರಿಗೆ ರಾಜಧಾನಿಯನ್ನು ಬದಲಾಯಿಸಲಾಯಿತು. ಇದರ ಪ್ರಾಮುಖ್ಯತೆ ಇಳಿಮುಖವಾಯಿತು. ಆದರೆ ಇಲ್ಲಿ ವಿಸ್ತಾರವಾಗಿ ಹರಡಿರುವ ಹಳೆಯ ಊರಿನ ನಿವೇಶನಗಳೂ, ದೇವಾಲಯಗಳೂ, ಕೆರೆ, ಮಠಗಳೂ ಹಿಂದಿನ ವೈಭವಕ್ಕೆ ತೋರುಬೆರಳಾಗಿ ನಿಂತಿವೆ. ಹೀಗೆ ಬನ್ನಿ ಶಿವಮೊಗ್ಗದಿಂದ ಜಿಲ್ಲೆಯ ಸಾಗರದಿಂದ 7 ಕಿ.ಮೀ. ದೂರದಲ್ಲಿದೆ. ಸಾಕಷ್ಟು ಸರಕಾರಿ ಹಾಗೂ ಖಾಸಗಿ ಬಸ್ ಸೌಕರ್ಯವಿದೆ.