ಗೇರು ಸೂಪರ್ ಗೇರುಸೊಪ್ಪಾ ಸುಮಾರು 250 ವರ್ಷ ಸಾಳ್ವ ಅರಸರ ರಾಜಧಾನಿಯಾಗಿತ್ತು... ಗೇರುಸೊಪ್ಪಾಕ್ಕೆ ಬರುವ ಪ್ರವಾಸಿಗರಿಗೆ ಕೊರತೆ ಇಲ್ಲ. ಶರಾವತಿ ಟೇಲ್‌ರೇಸ್ ಯೋಜನೆಯ ಅಣೆಕಟ್ಟು, ವಿದ್ಯುತ್ ಸ್ಥಾವರ ನೋಡುತ್ತಾರೆ. ದಟ್ಟಾರಣ್ಯದ ನೀಡುವ ಅನುಭೂತಿಯಲ್ಲಿ ಮೈಮರೆಯುತ್ತಾರೆ. ಆದರೆ... ಹೊರಗಿನವರೇಕೆ? ಈ ಗೇರುಸೊಪ್ಪಾ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲೇ ಹೆಚ್ಚಿನವರಿಗೆ ತಿಳಿದಿಲ್ಲ, ಹಿಂದೊಮ್ಮೆ ಈ ಪ್ರದೇಶ ವೈಭವದ ಆಡಳಿತ ಕಂಡಿತ್ತು, ರಾಜಧಾನಿಯಾಗಿ ಮೆರೆದಿತ್ತು ಎಂದು! ಗೇರುಸೊಪ್ಪಾ ಸುಮಾರು 250 ವರ್ಷ ಸಾಳ್ವ ಅರಸರ ರಾಜಧಾನಿಯಾಗಿತ್ತು. ಅವರು ಜೈನಧರ್ಮೀಯರು. ಶರಾವತಿ ಅಣೆಕಟ್ಟೆ ಸನಿಹದಲ್ಲೇ ಇರುವ ಈ ಐತಿಹಾಸಿಕ ತಾಣಕ್ಕೆ ಭೇಟಿ ಕೊಡುವವರು ವಿರಳವೇ. ಕಾಳುಮೆಣಸು ಇತ್ಯಾದಿ ಅತ್ಯಮೂಲ್ಯ ಸಾಂಬಾರ ಪದಾರ್ಥಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆದು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದ ಈ ರಾಜಧಾನಿ ಈಗ ಸಂಪೂರ್ಣ ಪಾಳು ಬಿದ್ದಿದೆ. ದಟ್ಟಾರಣ್ಯದಲ್ಲಿ ಹೂತು ಬಿದ್ದಿರುವ ಭವ್ಯ ಕಟ್ಟಡಗಳು, ಹೆಬ್ಬಾಗಿಲುಗಳು, ಅಳಿದುಳಿದ ಮನೆ ಮತ್ತು ಜಿನ ಮಂದಿರದ ಅವಶೇಷಗಳು, ಕಲ್ಲಿನಕಂಬಗಳು, ಹೆಜ್ಜೆಹೆಜ್ಜೆಗೂ ಹೆದ್ದಾರಿ ಪಕ್ಕದಲ್ಲೇ ಕಾಣಸಿಗುವ ಸಾವಿರಾರು ಬಾವಿಗಳು, ಗುಡಿಗೋಪುರಗಳ ಅಡಿಪಾಯಗಳು, ಕೇರಿಗಳು, ಒಳಚರಂಡಿ ವ್ಯವಸ್ಥೆ, ತುಂಡಾಗಿ ಬಿದ್ದಿರುವ ಗೋಡೆಗಳು, ಶಿಲಾ ಕಲ್ಲಿನ ವಿಗ್ರಹಗಳು... ಮೊಗೆದಷ್ಟೂ ಸಿಗುವ ಐತಿಹಾಸಿಕ ಕುರುಹುಗಳು. ಪಾಳು ಬಿದ್ದಿರುವ ಈ 'ರಾಜಧಾನಿ'ಯ ಪ್ರಮುಖ ಆಕರ್ಷಣೆ ಎಂದರೆ ಚತುರ್ಮುಖ ಬಸದಿ. ಅಲ್ಪಸ್ವಲ್ಪ ಶಿಥಿಲಗೊಂಡರೂ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಬಸದಿಯ ಶಿಥಿಲ ಭಾಗಗಳನ್ನು ಪ್ರಾಚೀನ ಶೈಲಿಯಲ್ಲಿಯೇ ದುರಸ್ತಿಗೊಳಿಸುವ ಕಾರ್ಯವನ್ನು ಪ್ರಾಚ್ಯವಸ್ತು ಇಲಾಖೆ ನಡೆಸುತ್ತಿದೆ. ಬಸದಿಯ ನಾಲ್ಕು ದಿಕ್ಕಿಗಳಲ್ಲಿ ನಾಲ್ಕು ಹೆಬ್ಬಾಗಿಲುಗಳಿವೆ. ಗೋಡೆಗಳಲ್ಲಿ ಒಂದೇ ರೀತಿಯ ಶಿಖರಗಳಿರುವ ಮಂಟಪಗಳಿವೆ. ಆನೆ ಮತ್ತು ನವಿಲುಗಳ ಸಾಲು, 20 ಭುಜಗಳ ನಕ್ಷತ್ರಾಕೃತಿಯ ವಿಶಿಷ್ಟ ರಚನೆ ಕಣ್ಮನ ಸೆಳೆಯುವಂತಿದೆ. ಗರ್ಭಗುಡಿಯಲ್ಲಿರುವ ಜಿನ ವಿಗ್ರಹ ಗ್ರಾನೈಟ್ ಶಿಲೆಯಿಂದ ನಿರ್ಮಾಣವಾಗಿದೆ. 3 ಅಡಿ ಎತ್ತರದ 4 ಭವ್ಯ ಮೂರ್ತಿಗಳನ್ನು ಕಪ್ಪು ಹಸಿರು ಮಿಶ್ರಿತ ಶಿಲೆಯಿಂದ ನಿರ್ಮಿಸಲಾಗಿದೆ. ಜೈನರ 24 ತೀರ್ಥಂಕರರ ಪೈಕಿ ಇವು ಮೊದಲ 4 ತೀರ್ಥಂಕರ ಮೂರ್ತಿಗಳಾಗಿವೆ. ದಕ್ಷಿಣ ಮುಖವಾಗಿ ವೃಷಭದೇವ, ಪಶ್ಚಿಮಕ್ಕೆ ಅಜಿತ, ಉತ್ತರಮುಖವಾಗಿ ಶಂಭವ ಮತ್ತು ಪೂರ್ವಕ್ಕೆ ಅಭಿನಂದನ ತೀರ್ಥಂಕರರ ವಿಗ್ರಹಗಳಿವೆ. ಈ ವಿಗ್ರಹಗಳ ಅಕ್ಕಪಕ್ಕ ಆನೆ, ಕುದುರೆ, ಎತ್ತು ಮತ್ತು ಮಂಗಗಳ ಲಾಂಛನವಿದೆ. ಮೇಲ್ನೋಟಕ್ಕೆ 4 ಮೂರ್ತಿಗಳು ಒಂದೇ ರೀತಿಯಾಗಿ ಕಂಡರೂ ಒಂದಕ್ಕಿಂತ ಇನ್ನೊಂದು ಅಪೂರ್ವ ಸೌಂದರ್ಯದಿಂದ ಕೂಡಿದೆ. ಗೇರುಸೊಪ್ಪೆ ಸಾಮ್ರಾಜ್ಯವನ್ನಾಳಿದ ಚೆನ್ನಭೈರಾದೇವಿ ಈ ಚತುರ್ಮುಖ ಬಸದಿಯನ್ನು ನಿರ್ಮಿಸುವ ಕಾರ್ಯನಡೆಸುತ್ತಿರುವಾಗ ಕೆಳದಿ ಅರಸರ ದಾಳಿಯಾಯಿತು. ಶತ್ರುಗಳೊಡನೆ ಹೋರಾಡಿ ರಾಣಿ ಪರಾಜಯ ಹೊಂದಿದ್ದರಿಂದ ಹಲವು ಶಿಲಾ ಕಟ್ಟಡಗಳ ನಿರ್ಮಾಣ ಅರೆಬರೆಯಾಗಿ ನಿಂತು ಹೋಯಿತು ಎಂಬುದು ಇತಹಾಸಕಾರರ ಅಭಿಮತ. ನೀವು ಗೇರುಸೊಪ್ಪಾಕ್ಕೆ ಬಂದರೆ ಮರೆಯದೇ ಇಲ್ಲಿಗೆ ಭೇಟಿ ನೀಡುತ್ತೀರಿ ತಾನೆ? ವೈಭವದ ಉತ್ತುಂಗ ಗೇರುಸೊಪ್ಪಾಕ್ಕೆ ಹಿಂದೆ ಕ್ಷೇಮಪುರ ಎಂಬ ಹೆಸರಿತ್ತು. ಸುಮಾರು 15 ಕಿ.ಮೀ. ವ್ಯಾಪ್ತಿಯ ಸುತ್ತಳತೆಯನ್ನು ಒಳಗೊಂಡ ರಾಜಧಾನಿ. ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ. ಈ ವಂಶದ ರಾಣಿ ಚೆನ್ನಭೈರಾದೇವಿ 54 ವರ್ಷ ಕಾಲ ಆಳ್ವಿಕೆ ನಡೆಸಿ ವೈಭವದಿಂದ ಅಭಿವೃದ್ಧಿ ಸಾಧಿಸಿದ್ದಳು ಎನ್ನುತ್ತದೆ ಇತಿಹಾಸ. ಸುಮಾರು 108 ಜೈನ ಬಸದಿಗಳು ಇಲ್ಲಿ ಇದ್ದವಂತೆ. ಇದರಿಂದಾಗಿ ಈ ಪ್ರದೇಶವನ್ನು 'ನಗರ ಬಸದಿ ಕೇರಿ' ಎಂದೂ ಕರೆಯಲಾಗುತ್ತಿತ್ತು. ಈಗಲೂ ಸಹ ಗೇರುಸೊಪ್ಪಾದಲ್ಲಿ, ಶರಾವತಿ ನದಿಯ ಆಚೆಗಿನ ದಡದಲ್ಲಿ ನಗರಬಸ್ತಿ ಕೇರಿ ಎಂಬ ಗ್ರಾಮವಿದೆ. ಈಗ ಅಷ್ಟೊಂದು ಬಸದಿಗಳು ಕಾಣುವುದಿಲ್ಲ. ಬಹುತೇಕ ಬಸದಿಗಳು ಶಿಥಿಲಗೊಂಡಿವೆ. ಹೀಗೆ ಬನ್ನಿ ಬೆಂಗಳೂರಿನಿಂದ -ಹೊನ್ನಾವರ ಮಾರ್ಗವಾಗಿ ಬಂದರೆ ಸುಮಾರು 390 ಕಿ.ಮೀ. ದೂರದಲ್ಲಿ ಗೇರುಸೊಪ್ಪೆ ಇದೆ. ಇಲ್ಲಿಂದ ಶರಾವತಿ ಟೇಲ್‌ರೇಸ್ ಡ್ಯಾಂನ ಕೆಳಭಾಗದಲ್ಲಿ ಕೆ.ಪಿ.ಟಿ. ಸಿ.ಎಲ್ ನಿರ್ಮಿಸಿರುವ ಶರಾವತಿ ಸೇತುವೆ ಮೂಲಕ 5 ಕಿ.ಮೀ. ದೂರದಲ್ಲಿ ಈ ಐತಿಹಾಸಿಕ ಸ್ಥಳವಿದೆ. ತಾಲೂಕು ಕೇಂದ್ರದಿಂದ ಹೊನ್ನಾವರದಿಂದ 30 ಕಿ.ಮೀ. ದೂರದಲ್ಲಿರುವ ಗೇರುಸೊಪ್ಪೆ ತಲುಪಿ ಇಲ್ಲಿಗೆ ಬರಬಹುದು. ಬಂಗಾರಮಕ್ಕಿ ದೇವಾಲಯದ ರಸ್ತೆಯಲ್ಲಿ ಕೇವಲ 2 ಕಿ.ಮೀ.ದೂರ ಸಾಗಿ ದೋಣಿಯಲ್ಲಿ ಶರಾವತಿ ನದಿ ದಾಟಿ ಚಾರಣದ ಮೂಲಕ ಸಹ ಈ ಸ್ಥಳವನ್ನು ತಲುಪಬಹುದು. - ಚಿತ್ರ-ಲೇಖನ: ಎನ್.ಡಿ.ಹೆಗಡೆ ಆನಂದಪುರಂ