ಶಿವಗಿರಿ ಸತ್ಯಂ ಶಿವಂ ಸುಂದರಂ... ಎಂಥ ಸುಂದರ ಪದಗಳು, ಅಷ್ಟೇ ಸುಂದರ ಅರ್ಥವೂ. ಹಾಗಾಗಿಯೇ, ಶಿವನ ಮೂರ್ತಿ- ಮಂದಿರಗಳೆಲ್ಲವೂ ಭಕ್ತರಲ್ಲಿ ಮನೆಮಾಡಿಬಿಡುವುದು. ಇಂಥ ಮನಸೆಳೆವ ಸುಂದರ ಈಶ್ವರಮೂರ್ತಿಗಳಲ್ಲಿ ಬಿಜಾಪುರದ ಶಿವಗಿರಿಯೂ ಮೋಹಕ. ಮುಖ್ಯವಾಗಿ ಐತಿಹಾಸಿಕ ಗೋಲಗೊಮ್ಮಟ, ಬಾರಹ ಕಮಾನ್, ಇಬ್ರಾಹಿಂ ರೋಜ ಮುಂತಾದ ನಿರ್ಮಾಣಗಳ ಶ್ರೀಮಂತ ಇತಿಹಾಸ ಹೊಂದಿರುವ ಬಿಜಾಪುರ ಪ್ರವಾಸೋದ್ಯಮಕ್ಕೆ ಗರಿ ಸಿಕ್ಕಿಸಿದಂತಿದೆ ಇಲ್ಲಿನ ಶಿವವೈಭವ. ಉತ್ನಾಳ್ ಮಾರ್ಗದಲ್ಲಿನ ಈ ಮೂರ್ತಿ 85 ಅಡಿಯಿದೆ. ಇದು 'ಶಿವಗಿರಿ' ಅಂತಲೇ ಪ್ರಸಿದ್ಧಿ. ಇದು ದೇಶದಲ್ಲಿಯೇ ಅತಿ ವಿಸ್ತಾರ ಹಾಗೂ ಎತ್ತರದ ಶಿವನ ಮೂರ್ತಿ. ಮೂರ್ತಿ 1500 ಟನ್ ತೂಕದ್ದಾಗಿದ್ದು, ಸಿಮೆಂಟ್‌ನಿಂದ ನಿರ್ಮಿಸಲಾಗಿದೆ. ಆರು ಕಲಾವಿದರು, ನೂರು ಸಹಾಯಕರಿಂದ ಇದು ಎದ್ದುನಿಂತಿದೆ. ಶಿವನ ಮೇಲಿನ ರುದ್ರಾಕ್ಷಿ ಮಾಲೆಯಲ್ಲಿನ ಪ್ರತಿ ರುದ್ರಾಕ್ಷಿ ತೂಕ 50 ಕಿಲೋಗ್ರಾಂ. 145 ಅಡಿ ಉದ್ದವಿರುವ ಸರ್ಪವನ್ನೂ ನಿರ್ಮಿಸಿರುವುದು ವಿಶೇಷ. ಶಿವಸನ್ನಿಧಿಯ ಸುತ್ತಲಿನ ಹಸಿರು ವನದ ಮಧ್ಯೆ ಮಂದಸ್ಮಿತವಾಗಿರುವ ಶಿವನನ್ನು ಆರಾಧಿಸುವುದು ನಿಜಕ್ಕೂ ಪುಣ್ಯಕಾರ್ಯ. ಇಷ್ಟೆಲ್ಲಾ ವಿಶೇಷ ಹೊಂದಿರುವ ಈ ಶಿವನ ದರ್ಶನ ಪಡೆಯಲು ನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಇದೊಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿಯೂ ಬೆಳೆಯುತ್ತಿದೆ. ಶಿವಮೊಗ್ಗದ ತರುಣ ಶಿಲ್ಪಿಗಳಾದ ಪ್ರಶಾಂತ, ಆಚಾರ್ಯ, ರಾಜಶೇಖರ ಹಾಗೂ ರಾಜು ಎಂಬವರ ಕಲಾಪ್ರೇಮದಿಂದ ವರ್ಷದ ಅವಧಿಯೊಳಗೆ ಈ ವಿಗ್ರಹ ನಿರ್ಮಾಣವಾಗಿದೆ. ಅಂದಹಾಗೆ, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮತ್ತು ಕುಟುಂಬ ಈ ಬೃಹತ್ ಶಿವಲಿಂಗವನ್ನು ನಾಡಿಗೆ ಸಮರ್ಪಿಸಿ ಭಕ್ತಿ ಮೆರೆದಿದೆ. - ಸ್ವರೂಪಾನಂದ ಎಂ. ಕೊಟ್ಟೂರು