ಆರ್ಟ್ ಗ್ಯಾಲರಿ ಗುಡ್ಡ ಸಾಂಪ್ರದಾಯಿಕ ಚಿತ್ರಗಳಿಗೆ ಈಗ ಬೇಡಿಕೆಯ ಸುಗ್ಗಿ. ಇಂಥ ಹಳೆಯ ಅಪರೂಪದ ಕಲಾಕೃತಿಗಳನ್ನು... ಸಾಂಪ್ರದಾಯಿಕ ಚಿತ್ರಗಳಿಗೆ ಈಗ ಬೇಡಿಕೆಯ ಸುಗ್ಗಿ. ಇಂಥ ಹಳೆಯ ಅಪರೂಪದ ಕಲಾಕೃತಿಗಳನ್ನು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಕೆಲ ಶ್ರೀಮಂತ ಮನೆತನಗಳಲ್ಲಿ ಕಾಣಬಹುದು. ಗೋಡೆಗೆ ತೂಗು ಹಾಕುವ ಚಿತ್ರಗಳು ಭಾರತದ ಮುಸ್ಲಿಂ ದೊರೆಗಳ ಪ್ರೋತ್ಸಾಹದಿಂದ 18ನೇ ಶತಮಾನದಲ್ಲಿ ಬಳಕೆಗೆ ಬಂದು ಆನಂತರ ಮೈಸೂರು ತಂಜಾವೂರು ಅರಸರಿಂದಾಗಿ ವ್ಯಾಪಕ ಪ್ರಚಾರಗೊಂಡಿತು. ಮೈಸೂರು ಸಾಂಪ್ರದಾಯಿಕ ಗಾಜಿನ ಮೇಲಿನ ಚಿತ್ರಕಲೆ ಅತ್ಯಂತ ಪ್ರಾಚೀನವಾಗಿದ್ದು, ಅರಸರ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಬ್ರಿಟಿಷ್ ಆಳ್ವಿಕೆಯೊಂದಿಗೆ ಈ ಕಲೆಯತ್ತ ಗಮನ ಕಡಿಮೆಯಾಗಿ ಈಗ ಇಂಥ ಚಿತ್ರ ರಚಿಸುವ ಕಲಾವಿದರು ಬೆರಳೆಣಿಕೆಯಷ್ಟು ಮಾತ್ರ ಸಿಕ್ಕುತ್ತಾರೆ. ಇಂಥ ಕಲಾವಿದರು ರಚಿಸಿದ ಅಪರೂಪದ ಕಲಾಕೃತಿಗಳು ನಾಡಿನ ವಿವಿಧ ಭಾಗದಲ್ಲಿ ಸಿಕ್ಕಬಹುದಾದರೂ ಗುಳೇದಗುಡ್ಡದ ಕೆಲ ಶ್ರೀಮಂತರ ಮನೆತನಗಳಲ್ಲಿ ಅವುಗಳನ್ನು ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವುದು ಅಚ್ಚರಿಯೇ ಸರಿ. ಅಂದಿನ ಶ್ರೀಮಂತ ಮನೆತನಗಳ ಯಜಮಾನರು 150 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಮುಂಬೈಗೆ ಹೋಗಿದ್ದಾಗ ಕೇವಲ 5ರಿಂದ 10 ರು.ಗೆ ಖರೀದಿಸಿದ್ದರಂತೆ. ಕಲಾವಿದನ ಹೆಸರಿಲ್ಲದ ಈ ಚಿತ್ರಕಲಾಕೃತಿಗಳನ್ನು ತೂಗು ಹಾಕಲು ಕಟ್ಟಿಗೆಯ ತೊಲೆಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಚಿತ್ರಗಳಿಂದ ಕೂಡಿದ ಕೊಠಡಿಯು ಕಲಾ ಗ್ಯಾಲರಿ ಎಂಬಂತೆ ಭಾಸವಾಗುತ್ತದೆ. ನಿವೃತ್ತ ತಹಸೀಲ್ದಾರ್ ಬಸವಪ್ರಭು ಮಹಾದೇವಪ್ಪ ಗಂಗಾವತಿ ಅವರ ಮಹಾಮನೆಯಲ್ಲಿ ಒಟ್ಟು 24 ಚಿತ್ರಗಳಿದ್ದು, ಎರಡು ದೊಡ್ಡ ಚಿತ್ರಗಳು ಗಮನ ಸೆಳೆವ ಮನಮೋಹಕ ಕೃತಿಗಳಾಗಿವೆ. ಗಂಭೀರ ಭಾವ ಚಿತ್ರಗಳಾದ ಇವು ಅಲಂಕಾರಿಕ ವಸ್ತ್ರದ ಮೇಲೆ ಬೆಲೆ ಬಾಳುವ ಮುತ್ತಿನ ಹಾರಗಳು ಕಂಗೊಳಿಸುವಂತೆ ಗೋಚರಿಸುತ್ತವೆ. ಶಿವಲಿಂಗಪ್ಪ ತಿಪ್ಪಾ ಅವರ ಮನೆಯಲ್ಲಿ ಒಟ್ಟು 21 ಚಿತ್ರಗಳಿದ್ದು, 90 ವರ್ಷಗಳ ಹಿಂದೆಯೇ ಕಟ್ಟಿಸಿದಂಥ ಮನೆಯಲ್ಲಿ ಇನ್ನೂ ರಾರಾಜಿಸುತ್ತಿವೆ. ಇದೀಗ ಕುಪ್ಪಸ- ಕಣದ ವ್ಯಾಪಾರ ಅಂಗಡಿಯಾಗಿರುವ ಇವರ ಮನೆಯಲ್ಲಿ ರವಿವರ್ಮನ ಕೋಲಾಜ್ ಚಿತ್ರ ಕಲಾಕೃತಿಗಳನ್ನು ಕಾಣಬಹುದು. ಇಲ್ಲಿರುವ ಬಹುತೇಕ ಚಿತ್ರಗಳಲ್ಲಿ ಅಪ್ಪಟ ಭಾರತೀಯ ವಸ್ತ್ರಗಳು, ಆಭರಣಗಳು ನೋಡುಗರ ಕಣ್ಮನ ತಣಿಸಿ, ಅಂದಿನ ಸೌಂದರ್ಯದ ಹಿರಿಮೆಯನ್ನು ಸಾರುತ್ತಿವೆ. ಮಾಜಿ ಶಾಸಕ ರಾಜಶೇಖರ್ ಶೀಲವಂತ್‌ರ ಬಂಗಾರದ ಅಂಗಡಿಯಲ್ಲಿರುವ ನಾಲ್ಕು ದೊಡ್ಡದಾದ ಚಿತ್ರಗಳಲ್ಲಿ ಸಂಗೀತಾರಾಧನೆಯ ಸಿಂಹಾಸನರೂಢ ಕೃಷ್ಣ, ಗೋಪಿಕೆಯರೊಂದಿಗಿನ ಸರಸ ಸಲ್ಲಾಪದ ಚಿತ್ರಗಳು ಬಣ್ಣ ಸಂಯೋಜನೆ, ರೇಖೆಗಳಲ್ಲಿ ತೀಕ್ಷ್ಣತೆ, ಬಣ್ಣಗಳಲ್ಲಿ ಲಯಬದ್ಧತೆ, ಕಲಾವಿದನ ನೈಪುಣ್ಯತೆಗೆ ಸಾಕ್ಷಿಯಾಗಿವೆ. ಚಿತ್ರದ ಸುತ್ತಲೂ ಕೆಂಪು ಹೂಗಳು, ಕಡು ಹಸಿರಿನ ಎಲೆಗಳು, ಬಂಗಾರದ ಪಟ್ಟಿಯ ಚೌಕಟ್ಟು ಆಕರ್ಷಕವಾಗಿದೆ. ಸೋಮಶೇಖರಪ್ಪ ಈಶ್ವರಪ್ಪ ಭಾವಿ ಅವರ ಮನೆಯಲ್ಲಿ ಚಿಕ್ಕಗಾತ್ರದ ಒಟ್ಟು 35 ಚಿತ್ರಗಳಿದ್ದು, ಗೌರಿ ಹುಣ್ಣಿಮೆಯ ವಿಶೇಷ ಸಂದರ್ಭದಲ್ಲಿ ಮಂಟಪ ಕಟ್ಟಿ ಕಾಣೆಗಳಲ್ಲಿ ಚಿತ್ರಗಳನ್ನು ಕೂರಿಸಿ, ವಿಶೇಷವಾಗಿ ಅಲಂಕರಿಸುತ್ತಾರೆ. ಚೌ ಬಜಾರದಲ್ಲಿರುವ ಕರಡಿಯವರ ಚಿಕ್ಕ ಮನೆಯಲ್ಲಿ 10ಕ್ಕೂ ಹೆಚ್ಚು ಚಿಕ್ಕ ಗಾತ್ರದ ಕಲಾಕೃತಿಗಳು, ಕಾಬ್ರಾರವರ ಮನೆಯಲ್ಲಿ ರಾಜಸ್ಥಾನ ಹಾಗೂ ತಂಜಾವೂರು ಶೈಲಿಯ 8 ಚಿತ್ರ ಕಲಾಕೃತಿಗಳು ನೋಡಲು ಸಿಕ್ಕುತ್ತವೆ. ಶತಮಾನ ಪೂರೈಸಿದ ಮೈಸೂರು ಮತ್ತು ತಂಜಾವೂರು ಶೈಲಿಯ ಚಿತ್ರಕಲಾಕೃತಿಗಳು ಧಾರ್ಮಿಕ, ಶೃಂಗಾರ ಪ್ರಣಯ ಭಾವಚಿತ್ರಗಳು, ಬಾಲಕೃಷ್ಣನ ಕೀಟಲೆಗಳು, ಅರಮನೆಯ ಸಂಯೋಜನೆಗಳು, ವಾದ್ಯ ನುಡಿಸುತ್ತಿರುವ ಸುಂದರಿಯರು ಇವು ಪ್ರಧಾನ ವಿಷಯಗಳಾಗಿವೆ. ಎಲ್ಲ ಚಿತ್ರಗಳನ್ನು ಗ್ಲಾಸ್‌ನ ಹಿಂಭಾಗದಲ್ಲಿ ಚಿತ್ರಿಸಲಾಗಿದೆ. ಎರಡು ದಶಕಗಳ ಹಿಂದೆ ಇಂಥ ಅಪರೂಪದ ಶತಮಾನ ಪೂರ್ವದ ಚಿತ್ರಗಳು ಸಾಕಷ್ಟು ನೋಡಲು ಸಿಕ್ಕುತ್ತಿದ್ದವು. ಕ್ರಮೇಣ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕೆಲವು ಚಿತ್ರಗಳು ಬಿದ್ದು ಹಾಳಾಗಿವೆ. ಕೆಲವರು ಸಾವಿರಾರು ರು.ಗಳಿಗೆ ಮಾರಿದ್ದಾರೆ. ಮುಂಬೈ, ಚೆನ್ನೈ, ಹೈದರಾಬಾದ್, ಸೊಲ್ಲಾಪುರ, ಪುಣೆಯಿಂದ ಬಂದಂಥ ಜನರು ಲಕ್ಷಾಂತರ ರುಪಾಯಿ ಕೊಟ್ಟು ಇಲ್ಲಿಂದ ಚಿತ್ರಗಳನ್ನು ಖರೀದಿಸಿ, ತಮ್ಮ ಮನೆಯನ್ನು ಗಾಜಿನ ಚಿತ್ರ ಕಲಾಕೃತಿಗಳಿಂದ ಅಲಂಕರಿಸಿದ್ದಾರೆ. - ಪ್ರವೀಣರಾಜು ಸೊನ್ನದ