ತೊಟ್ಟಿಲು ತೊರೆದ ತಪ್ಪಲು ಹಿಮ ಚೆಲ್ಲಿಕೊಂಡಿದ್ದ ಪರ್ವತ ಶ್ರೇಣಿ ಮೌಂಟ್ ರೇನಿಯರ್... ಹಿಮ ಚೆಲ್ಲಿಕೊಂಡಿದ್ದ ಪರ್ವತ ಶ್ರೇಣಿ ಮೌಂಟ್ ರೇನಿಯರ್. ಅತಿ ಎತ್ತರ ಅಂದರೆ 4392 ಮೀ. ತೊಟ್ಟಿಲುಗಳು ಪ್ರವಾಸಿಗರನ್ನು ಮೇಲಕ್ಕೊಯ್ಯಲು ಒಂದರ ಹಿಂದೆ ಇನ್ನೊಂದು ಸಿದ್ಧವಾಗಿರುತ್ತವೆ. ರೋಪ್‌ವೇನಲ್ಲಿ ಏರುವಾಗ ರೋಚಕ ಅನುಭವ. ಆಸುಪಾಸಿನಲ್ಲಿ ಚಾರಣಪ್ರಿಯರಿಗೆ ಸುಗ್ಗಿ. ತಮ್ಮೊಂದಿಗೆ ಶ್ವಾನಗಳನ್ನೂ ಕರೆತಂದು ವಿಹರಿಸುವವರೇ ಹೆಚ್ಚು... ಅಮೆರಿಕದ ವಾಷಿಂಗ್ಟನ್ ರಾಜಧಾನಿ ಸಿಯಾಟಲ್ ಜಗತ್ತಿನ ಸಿಲಿಕಾನ್ ತವರು. ಅದರ ಇನ್ನೊಂದು ಹೆಸರೇ ಮೇಕ್ರೊಸಾಫ್ಟ್. ನನ್ನ ಹಳೇ ಶಿಷ್ಯ ಶ್ರೀಧರ ನಿತ್ಯ ಬೆಳಿಗ್ಗೆ ಆಗ್ನೇಯ ದಿಗಂತದಲ್ಲಿ ಆ ಭವ್ಯ ಶಿಖರದತ್ತ ಬೆರಳು ಮಾಡಿ 'ನೋಡಿ' ಅನ್ನುತ್ತಿದ್ದ. ಆಗಲೇ ಉಪ್ಪಿಟ್ಟಿನ ಬುತ್ತಿ, ಜೊತೆಗೆ ಕುರುತು, ನೀರಿನ ಬಾಟಲ್‌ಗಳು, ಕಾಫಿ ಫ್ಲಾಸ್ಕ್ ಡಿಕ್ಕಿಗೇರಿತ್ತು. ರೆಡ್ಮಂಡ್ ಮನೆಯಿಂದ 140 ಕಿ.ಮೀ. ದೂರ. ಮೂರು ತಾಸು ಕಾರಿನಲ್ಲಿ ಪಯಣ. ಕಾರು ಬೃಂದಾವನದಲ್ಲಿ ಸಾಗುತ್ತಿರುವಂಥ ಅನುಭವ. ವಿಶಾಲ ರಸ್ತೆಯ ಎರಡೂ ಬದಿಗೆ ಹಸಿರು ಕೋಟೆ. ಒಂದೆಡೆ ಬಲಕ್ಕೆ ಬುಳು ಬುಳು ಕುಪ್ಪಳಿಸುವ ತೊರೆ. ಅಲ್ಲಲ್ಲಿ ದಣಿವಾರಿಸಿಕೊಂಡು ನಿಸರ್ಗದ ಸೊಬಗನ್ನು ಸವಿಯಬಹುದಾದ ಆಯಕಟ್ಟುಗಳು, ಬೇಕರಿಗಳು. ಕಿಸೆಗೆ ಹಣ ತುಂಬಿಸುವುದು ಮರೆತವಲ್ಲ ಎಂಬ ಪೇಚಿಲ್ಲ. ಕಂಡಕಂಡಲ್ಲಿ ಎಟಿಎಂಗಳು. ಮೌಂಟ್ ರೇನಿಯರ್ ನೀರ್ಗಲ್ಲ ನದಿ, ಹುಲ್ಲುಮಾಳ, ಸುಂದರ ಕಾಡುಗಳು ಈ ಮೂರನ್ನೂ ಆಭರಣಗಳನ್ನಾಗಿ ಧರಿಸಿದೆ. ಸಂದರ್ಶಿಸಲು ಬೇಸಿಗೆ ತಕ್ಕ ಅವಧಿ. ಕಾರಿನಲ್ಲಿ ಪ್ರಯಾಣಿಸಿದ ಹಾದಿಯಲ್ಲಿ ಅಲ್ಲಲ್ಲಿ ವಿಹಾರ ಸೋಪಾನಗಳು, ಕುಡಿಯುವ ನೀರಿನ ಏರ್ಪಾಡು, ಸಂಚಾರಿ ಶೌಚಾಲಯಗಳನ್ನು ಕಂಡು ಖುಷಿಯಾಯಿತು. ಅರೆ! ಒಂದು ಪ್ರೇಕ್ಷಣಿಯ ತಾಣದಲ್ಲಿ ಏನೆಲ್ಲ ಅನುಕೂಲ ಕಲ್ಪಿಸಿ ಅದರ ಆಕರ್ಷಣೆ ವೃದ್ಧಿಸಬಹುದು? ಸುಮಾರು ಎರಡು ತಾಸು ಸಾಗಿದಾಗ 'ಕ್ರಿಸ್ಟಲ್ ಮೌಂಟೇನ್‌' ತಲುಪಿದೆವು. ರೆಸಾರ್ಟ್‌ಗಳ ಸಮೂಹವೇ ಇದು. ಅಲ್ಲಿಂದ 20 ಕಿ.ಮೀ. ಕ್ರಮಿಸಿದರೆ 'ನಾರಾದಾ ಫಾಲ್ಸ್‌' 57 ಮೀ. ಎತ್ತರದಿಂದ ನೀರು ಧುಮ್ಮಿಕ್ಕುವ ಜಲಪಾತ ಸಿಗುತ್ತದೆ. ಹೌದು ಅದರ ಹೆಸರು 'ನಾರದ'! ಏನು ಕಾಕತಾಳೀಯವೊ? ಈಗಂತೂ ಸಾಗು ಹಾದಿಯಲ್ಲಿ ಇಕ್ಕೆಲದಲ್ಲೂ ಆಲೆತ್ತರದ ಮಂಜಿನ ಗೋಡೆಗಳು! ಮತ್ತೂ 20 ಕಿ.ಮೀ. ಚಲಿಸಿದರೆ ಮೌಂಟ್ ರೇನಿಯರ್ ತಲುಪಿಸುವ ಮೆಟ್ಟಿಲುಗಳು. ಇದಕ್ಕೆ 'ಪ್ಯಾರೆಡೈಸ್‌' ಎನ್ನುತ್ತಾರೆ. ದೂರದಿಂದಲೇ ಕಾಣಿಸಿತು ಹಿಮವನ್ನು ಮೈ ಮೇಲೆ ಮೊಸರಿನಂತೆ ಚೆಲ್ಲಿಕೊಂಡಿದ್ದ ಪರ್ವತಶ್ರೇಣಿ ಮೌಂಟ್ ರೇನಿಯರ್. ಅತಿ ಎತ್ತರ ಅಂದರೆ 4392ಮೀ. ಗೊಂಡೊಲಗಳು (ತೊಟ್ಟಿಲು) ಪ್ರವಾಸಿಗರನ್ನು ಮೇಲಕ್ಕೊಯ್ಯಲು ಒಂದರ ಹಿಂದೆ ಇನ್ನೊಂದು ಸಿದ್ಧವಾಗಿರುತ್ತದೆ. ರೋಪ್‌ವೇನಲ್ಲಿ ಏರುವಾಗ ರೋಚಕ ಅನುಭವ. ಆಸುಪಾಸಿನಲ್ಲಿ ಚಾರಣ ಪ್ರಿಯರಿಗೆ ಸುಗ್ಗಿ. ತಮ್ಮೊಂದಿಗೆ ಶ್ವಾನಗಳನ್ನೂ ಕರೆತಂದು ವಿಹರಿಸುವವರೇ ಹೆಚ್ಚು. ಶ್ವಾನದೊಡೆಯರದು ಸ್ವಯಂ ಕಟ್ಟುಪಾಡು. ನಾಯಿ ಇತರರಿಗೆ ಕಾಟ ಕೊಡದ ಹಾಗೆ ಎಚ್ಚರ ವಹಿಸುತ್ತಾರೆ. ಗೊಂಡೊಲ ಶುಲ್ಕ ತಲಾ 20 ಡಾಲರ್. ಏರಿಳಿಯುವಲ್ಲಿ ಪ್ರವಾಸಿಗಳು ಶಿಸ್ತು ಮೆರೆಯುತ್ತಾರೆ. ಗಿರಿಯ ಮೇಲೆ ಹೋಟೆಲ್, ಕಿರಾಣಿ ಮಳಿಗೆಗಳೂ ಇವೆ. ವಾರಾಂತ್ಯದಲ್ಲಿ ಕುಟುಂಬ ಸಮೇತ ಪ್ರವಾಸಕ್ಕೆ ತಕ್ಕ ತಾಣ. ಚಿಣ್ಣರು ಅತಿ ಉತ್ಸಾಹದಿಂದ ಕುದುರೆ ಸವಾರಿ ಆನಂದಿಸಿಯಾರು. ತಾಸು ಅಡ್ಡಾಡಿದ್ದಾಯಿತು. ಇಳಿಸಲು ಗೊಂಡೊಲವೊಂದು ಸಮೀಪಿಸಿದಾಗ ಅದರ ಮೇಲೆ ಸಿಟ್ಟೋಸಿಟ್ಟು. ನಿಜ. ಹೋಗಿ ಅಲ್ಲಿ ವಿಹರಿಸಿ ಬರಲು ಇಡೀ ದಿನ ಬೇಕು. ಆದರೆ ರಮಣೀಯ ನಿಸರ್ಗ ಸನ್ನಿಧಿಯಲ್ಲಿ ಅಷ್ಟು ಹೊತ್ತು ಕಳೆದವಲ್ಲ ಎಂಬ ಅನುಭಾವಕ್ಕೆ ಸಾಟಿಯುಂಟೆ? - ಬಿಂಡಿಗನವಿಲೆ ಭಗವಾನ್