ಪ್ರಾಯ 84, ಹುರುಪು 24 ರಂಗಭೂಮಿ ಕುರಿತ ಅಧ್ಯಯನದಲ್ಲಿ ತೊಡಗಿಕೊಂಡಿರುವ ನನಗೆ ತುರ್ತಾಗಿ ಕಗ್ಗೊಡದ ಹಾಲಪ್ಪ ಸೊಲ್ಲಾಪೂರ ಎನ್ನುವ ನಿವೃತ್ತ ಶಿಕ್ಷಕರನ್ನು ಕಾಣಬೇಕಿತ್ತು. ಅವರ ಬಿಜಾಪುರದ ನಿವಾಸಕ್ಕೆ ಫೋನ್ ಮಾಡಿದಾಗ 'ನಮ್ಮಪ್ಪಾರು ಮನ್ಯಾಗ ಅದಾರ. ಲಗೂನ ಬರ್ರಿ' ಎಂದು ಅವರ ಮಗ ವಿಠ್ಠಲ ಹೇಳಿದಾಗ ನನಗೆ ಅವಸರ ಮಾಡದೇ ಬೇರೆ ದಾರಿ ಇರಲಿಲ್ಲ. ನನ್ನ ಬರುವಿಕೆಗಾಗಿ ಹಾಲಪ್ಪ ಮಾಸ್ತರರು ಮನೆ ಹೊರಗಡೆ ಕಾದು ಕುಳಿತಿದ್ದರು. ಮಾಸ್ತರರು ಪ್ರಾಥಮಿಕ ಶಾಲಾ ಮಾಸ್ತರಿಕೆಯಿಂದ ನಿವೃತ್ತರಾಗಿ 26 ವರ್ಷಗಳೇ ಮುಗಿದಿವೆ. ಅವರಿಗೆ ಈಗ 84ರ ಪ್ರಾಯ. ಆದರೆ 24ರ ಹುರುಪು. ಮಾತು ಕುಗ್ಗಿಲ್ಲ. ದೃಷ್ಟಿ ಕಳೆಗುಂದಿಲ್ಲ. ನೆನಪಿನ ಶಕ್ತಿ ಮಾಸಿಲ್ಲ. ತಮ್ಮ 40 ವರ್ಷಗಳನ್ನು ನಾಟಕ, ಬಯಲಾಟ, ಪಾರಿಜಾತ ಆಡುವುದರಲ್ಲಿ ಕಳೆದಿದ್ದಾರೆ. ಸಾವಿರ ಸಾರಿ ಮುಖಕ್ಕೆ ಬಣ್ಣ ಬಳಿದುಕೊಂಡಿದ್ದಾರೆ. ಬಿಜಾಪುರ ಜಿಲ್ಲೆಯ ಕುಮಟಗಿ, ಕಗ್ಗೋಡ, ಜೀರಂಕಲಗಿ ಮುಂತಾದ ಗ್ರಾಮಗಳಲ್ಲಿ ಅವರು ನಾಟಕಗಳನ್ನಾಡಿ ಖ್ಯಾತರಾಗಿದ್ದಾರೆ. ಪಾರಿಜಾತದಲ್ಲಿ ಕೃಷ್ಣನ ಪಾತ್ರಕ್ಕೆ ಇವರನ್ನು ಸರಿಗಟ್ಟುವವರು ಇರಲಿಲ್ಲವಂತೆ. ಕಗ್ಗೋಡದಲ್ಲಿ ಇವರು 'ವೀರ ಅಭಿಮನ್ಯು' ನಾಟಕದಲ್ಲಿ ಅಭಿಮನ್ಯುವಿನ ಪತ್ನಿ ಪಾತ್ರ ಮಾಡುತ್ತಿದ್ದರಂತೆ. ಈ ಪಾತ್ರಧಾರಿ ಒಬ್ಬ ಪುರುಷ ಎನ್ನುವ ಸಂಶಯ ಬಾರದಂತೆ ಬಹಳ ಎಚ್ಚರಿಕೆ ವಹಿಸಲಾಗುತ್ತಿತ್ತಂತೆ! ನಾಟಕ ನೋಡಿದ ಪ್ರೇಕ್ಷಕರು ಮರುದಿನ, 'ಆ ಅಭಿಮನ್ಯುವಿನ ಹೇಂಣ್ತಿ ಪಾತ್ರ ಮಾಡ್ದಕ್ಕೀನ ಯಾವ್ ಊರ್ನಿಂದ ಕರ್ಕೊಂಡ್ ಬಂದಾದಾರ್ರೀ ಎಪ್ಪಾ' ಎಂದು ಇವರನ್ನೇ ಕೇಳುತ್ತಿದ್ದರಂತೆ! ಇವರ ರಂಗಗುರು ಹಂದಿಗನೂರಿನ ದಿ.ಗುರುಬಸಪ್ಪ ಮುಳವಾಡ. ಆ ಗುರುವಿನ ಬಳಿ ಇವರಲ್ಲದೇ ನಟಕೇಸರಿ ಹಂದಿಗನೂರು ಸಿದ್ರಾಮಪ್ಪ, ರಾಚಪ್ಪ ಹೋಳಗಿ ಸಹೋದರರು ರಂಗದೀಕ್ಷೆ ಪಡೆದು ನಾಡಿನಾದ್ಯಂತ ಖ್ಯಾತರಾಗಿದ್ದಾರೆ. ಮಾತಿಗೆ ಕುಳಿತಿದ್ದ ಹಾಲಪ್ಪ ಮಾಸ್ತರರ ಪಕ್ಕದಲ್ಲಿ ಕಟ್ಟಿಗೆಯ ಚಿಕ್ಕ ಅಲ್ಮೇರಾ. ಅದರಲ್ಲಿ ಅನೇಕ ಪುಸ್ತಕಗಳನ್ನು ಓರಣವಾಗಿಡಲಾಗಿತ್ತು. ಅವುಗಳನ್ನೆಲ್ಲ ನನ್ನ ಮುಂದೆ ಹರಹಿ 'ನಾನು ಓದುವ ಪುಸ್ತಕಗಳಂದ್ರ ವಿಮರ್ಶಾಕ್ಕ ಸಂಬಂಧಪಟ್ಟವ ಮಾತ್ರ. ಕತಿಗಿತಿ ಪುಸ್ತಕಾ ಓದೂದಿಲ್ಲ. ವಚನ ಸಾಹಿತ್ಯದಾಗ ಬೆಡಗಿನ ವಚನ ಭಾಳ ಹಿಡಸ್ತಾವ. ಮಹಾಭಾರತದಾಗ ಕರ್ಣ ಮತ್ತು ದುರ್ಯೋಧನನ ಪಾತ್ರಾ ಭಾಳ ಕಾಡತಾವ. ಅವರಂತಹ ಭಾರಿ ಕರುಣಾ ಹುಟ್ಟಸು ಪಾತ್ರ ಬ್ಯಾರೆ ಇಲ್ಲ' ಎಂದು ತಮ್ಮ ಜ್ಞಾನಭಂಡಾರದ ಕೀಲಿಕೈ ತೆರೆದಿಟ್ಟರು. ರಾಮಾಯಣಕ್ಕೆ ಸಂಬಂಧಪಟ್ಟ ವನಕಾಂಡ ಬಯಲಾಟದ ಹಸ್ತಪ್ರತಿ ತೋರಿಸುತ್ತ ಈಗಲೂ ಯಾರಾದರು ಬಯಲಾಟ ಕಲ್ಯಾಕ್ ಬಂದ್ರ ನಾನು ಕಲ್ಸಾಕ ತಯಾರ ಅದೀನಿ' ಅಂತ ಹುರುಪಿನಿಂದಲೇ ಹೇಳಿದರು. ಪೌರಾಣಿಕ ಪಾತ್ರಗಳ ಹಳಗನ್ನಡ ಸಂಭಾಷಣೆಗಳನ್ನು ಈಗಲೂ ತಡವರಿಸದೆ ಹೇಳುವ ಶೈಲಿಗೆ ಯಾರಾದರೂ ಮನಸೋಲಲೇ ಬೇಕು. ಕನ್ನಡದ ಬೇರುಗಳು ಬಾಡಿ ಹೋಗುತ್ತಿರುವ ಈ ದಿನಮಾನಗಳಲ್ಲಿ ಇಂಥ ಮಾಸ್ತರರನ್ನು ಕಂಡೊಡನೆ ಭಾವ ಅರಳಿ ಮನಸ್ಸು ಹಗುರವಾಗಿ ತೇಲುವುದು ದಿಟ. - ಪ್ರೊ. ಎ.ಎಲ್. ನಾಗೂರ