ಫಾರಿನ್ ಸಂತೆ ಇದು ವಿದೇಶಿಗರಿಂದ ವಿದೇಶಿಗರಿಗಾಗಿಯೇ ಇರುವ ಮಾರ್ಕೆಟ್. ಇಲ್ಲಿ ಸಿಗುವ ವಸ್ತುಗಳೂ ಬೇರೆ ಬೇರೆ ದೇಶದ್ದೇ. ಆದರೆ... ಇದು ವಿದೇಶಿಗರಿಂದ ವಿದೇಶಿಗರಿಗಾಗಿಯೇ ಇರುವ ಮಾರ್ಕೆಟ್. ಇಲ್ಲಿ ಸಿಗುವ ವಸ್ತುಗಳೂ ಬೇರೆ ಬೇರೆ ದೇಶದ್ದೇ. ಆದರೆ, ಈ ಜಾಗತಿಕ ಮಾರ್ಕೆಟ್ ಇರುವುದು ಮಾತ್ರ ಗೋಕರ್ಣದಲ್ಲಿ! ಹೌದು, ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಇಂಥದ್ದೊಂದು ಅಪರೂಪದ ಮಾರುಕಟ್ಟೆ ಪ್ರತಿ ವರ್ಷವೂ ಕಾಣ ಸಿಗುತ್ತದೆ. ವ್ಯಾಪಾರವೂ ಬಲು ಜೋರಾಗಿಯೇ ಇರುತ್ತದೆ. ಕುಡ್ಲೆ ಬೀಚಿನ ವಿಶಾಲವಾದ ಬಯಲೇ ಇವರಿಗೆ ಮಾರುಕಟ್ಟೆ. ಬೀಚಿನಲ್ಲಿ ಸಾಲಾಗಿ ಕುಳಿತು ಮಾರಾಟ ಮಾಡಬೇಕಾದ ವಸ್ತುಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟು ಗ್ರಾಹಕರನ್ನು ಸೆಳೆಯುತ್ತಾರೆ. ಗದ್ದಲ ಇಲ್ಲ, ಗಲಾಟೆ ಇಲ್ಲ. ಚೌಕಾಶಿಯೂ ಇಲ್ಲ. ಇಲ್ಲಿ ಹೊಸ ವಸ್ತುಗಳ ಜತೆಗೆ ಸೆಕೆಂಡ್ ಸೇಲ್ ಕೂಡ ನಡೆಯುತ್ತದೆ. ವಿವಿಧ ದೇಶಗಳ ವಸ್ತು ಬ್ರಿಟನ್, ಇಸ್ರೇಲ್, ಸ್ಪೇನ್, ಫ್ರಾನ್ಸ್, ರಷ್ಯಾ ಮತ್ತಿತರ ದೇಶಗಳ ಪ್ರವಾಸಿಗರು ತಮ್ಮ ದೇಶಗಳಿಂದ ಬರುವಾಗ ಹಲವು ವಸ್ತುಗಳನ್ನು ಮಾರಾಟಕ್ಕಾಗಿಯೇ ತಂದಿರುತ್ತಾರೆ. ಅವರೆಲ್ಲ ಕುಡ್ಲೆ ಬೀಚಿನಲ್ಲಿ ಕುಳಿತು ಮಾರಾಟದಲ್ಲಿ ತೊಡಗಿರುತ್ತಾರೆ. ಇವರ ಜತೆಯಲ್ಲಿ ಸ್ಥಳೀಯ ಹುಡುಗರು, ಮಹಿಳೆಯರು ಕೂಡ ಸ್ಥಳೀಯ ಉತ್ಪನ್ನಗಳನ್ನು ವಿದೇಶಿಗರಿಗೆ ಮಾರುತ್ತಾರೆ. ಮೈತುಂಬಾ ಆಭರಣಗಳು, ಮತ್ತಿತರ ವಸ್ತುಗಳನ್ನು ಹೊತ್ತು ಬೀಚಿನುದ್ದಕ್ಕೂ ಅಲೆಯುವ ಸ್ಥಳೀಯ ಮಹಿಳೆಯರನ್ನೂ ಇಲ್ಲಿ ಕಾಣಲು ಸಾಧ್ಯ. ಜರ್ಮನಿಯ ಬ್ರೇಸ್‌ಲೆಟ್, ಇಂಗ್ಲೆಂಡಿನ ಬಟ್ಟೆಗಳು, ಫ್ರಾನ್ಸ್‌ನ ಚಪ್ಪಲಿಗಳು, ರಷ್ಯಾದ ಬಳೆಗಳು, ಸ್ಪೇನ್‌ನ ಮೂಗು ಬೊಟ್ಟುಗಳು, ಇಸ್ರೇಲ್‌ನ ಚೈನುಗಳು, ಆಸ್ಟ್ರೇಲಿಯಾದಲ್ಲಿ ತಯಾರಿಸಲಾದ ಬಳೆಗಳು, ಚೈನಾದ ಉಂಗುರಗಳು, ಯುರೋಪ್‌ನ ಆಟಿಕೆ ಸಾಮಗ್ರಿಗಳು, ಅಮೆರಿಕದ ಬ್ಯಾಗ್‌ಗಳು... ಹೀಗೆ ಜಗತ್ತಿನ ಹತ್ತು ಹಲವು ದೇಶಗಳ ವಿವಿಧ ಉತ್ಪನ್ನಗಳು ಇಲ್ಲಿವೆ. ಭಾರತದ ವಸ್ತುಗಳ ಮಾಹಿತಿ ಬೇರೆ ಬೇರೆ ದೇಶಗಳ ಸಂಗೀತ, ವಾದ್ಯದ ಉಪಕರಣಗಳೂ ಇಲ್ಲಿ ಸಿಗುತ್ತವೆ. ಭಾರತಕ್ಕೆ ಬಂದು ಭಾರತದಲ್ಲೇ ಖರೀದಿಸಿದ ಆಯುರ್ವೇದ ಔಷಧಿಗಳೂ ಇಲ್ಲಿರುತ್ತವೆ. ಔಷಧಿಯ ಮಹತ್ವಗಳ ಬಗ್ಗೆಯೂ ವಿದೇಶಿಗರು ಮಾಹಿತಿ ನೀಡುತ್ತಾರೆ. ವಿದೇಶಿ ಪ್ರವಾಸಿಗರು ಭಾರತದಿಂದ ತಮ್ಮ ತಮ್ಮ ದೇಶಗಳಿಗೆ ಹೋಗುವಾಗ ತಾವು ಭಾರತದಲ್ಲಿ ಧರಿಸಿದ ಆಭರಣಗಳು ಮತ್ತಿತರ ವಸ್ತುಗಳನ್ನು ಕುಡ್ಲೆ ಬೀಚಿನಲ್ಲಿ ಕುಳಿತು ಕಡಿಮೆ ಬೆಲೆಯಲ್ಲಿ ಮಾರುತ್ತಾರೆ. ಈ ವಸ್ತುಗಳನ್ನು ಕೊಳ್ಳಲು ಸ್ಥಳೀಯರು ಹಾಗೂ ಭಾರತದ ಪ್ರವಾಸಿಗರು ಮನಸ್ಸು ಮಾಡುವುದು ಕಡಿಮೆ. ಏಕೆಂದರೆ ಇವುಗಳಿಗೆಲ್ಲ ದುಬಾರಿ ಬೆಲೆ. ಹೀಗಾಗಿ ವಿದೇಶಿ ಪ್ರವಾಸಿಗರೇ ಹೆಚ್ಚಾಗಿ ಇಂಥ ವಸ್ತುಗಳನ್ನು ಕೊಳ್ಳುತ್ತಾರೆ. ಗೋಕರ್ಣಕ್ಕೆ ಆಗಮಿಸುವ ವಿವಿಧ ದೇಶಗಳ ಪ್ರವಾಸಿಗರು ತಮ್ಮ ದೇಶದ ಆಭರಣಗಳು ಮತ್ತಿತರ ವಸ್ತುಗಳನ್ನು ಖರೀದಿಸಿ ಧರಿಸುತ್ತಾರೆ. ಗೋಕರ್ಣಕ್ಕೆ ಪ್ರತಿವರ್ಷ ಏನಿಲ್ಲವೆಂದರೂ 5-6 ಸಾವಿರ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಓಂ ಬೀಚ್, ಕುಡ್ಲೆ ಬೀಚ್, ಹಾಫ್‌ಮೂನ್ ಬೀಚ್, ಮುಖ್ಯ ಕಡಲ ತೀರಗಳಲ್ಲಿ ಇವರು ವಾಸ್ತವ್ಯ ಮಾಡುತ್ತಾರೆ. ಇದರ ಜೊತೆಗೆ ಗೋವಾಕ್ಕೆ ಆಗಮಿಸಿದ ವಿದೇಶಿ ಪ್ರವಾಸಿಗರು ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದರಿಂದ ವಿದೇಶಿಗರ ಮಾರುಕಟ್ಟೆಗೆ ಅನುಕೂಲವಾಗಿದೆ. -ವಸಂತಕುಮಾರ್ ಕತಗಾಲ vasant800@ .